ಗೊಂದಲದ ಗೂಡಾದ ಶಿಕ್ಷಣ ಇಲಾಖೆ: ಪಿ.ರಾಜೀವ್ ಆರೋಪವೇನು?
ಬೆಂಗಳೂರು, ಮಾರ್ಚ್ 09: ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಅತ್ಯಂತ ದೊಡ್ಡ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಕರ್ನಾಟಕದ ಶಾಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಅತಿ ಹೆಚ್ಚು ಗೊಂದಲಕ್ಕೆ ಮತ್ತು ಆತಂಕಕ್ಕೆ ಒಳಗಾಗಿದ್ದಾರೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರ ಆಡಳಿತದ ವೈಫಲ್ಯವೇ ಇದಕ್ಕೆ ಕಾರಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಶಿಕ್ಷಣ ಸಚಿವರಾಗಿ ಮಧು ಬಂಗಾರಪ್ಪ ಅವರು ಪಠ್ಯಕ್ರಮ, ಶಿಕ್ಷಣ ಗುಣಮಟ್ಟ ಮತ್ತು ಶಾಲೆಗಳ ಅಭಿವೃದ್ಧಿ ಬಗ್ಗೆ ಹೇಳಿಕೆ ಕೊಡುವುದು ಕಡಿಮೆ. ಅವರಿಂದ ರಾಜಕೀಯ ಕಾರಣದ ಹೇಳಿಕೆಗಳೇ ಹೆಚ್ಚು ಎಂದು ಟೀಕಿಸಿದರು.

ಒಬ್ಬ ಶಿಕ್ಷಣ ಸಚಿವರಲ್ಲಿ ಇರಬೇಕಾದ ಯಾವ ಗುಣಮಟ್ಟ ಮತ್ತು ನೈತಿಕ ಮೌಲ್ಯಗಳು ಇವರಲ್ಲಿ ಸಂಪೂರ್ಣವಾಗಿ ಇಲ್ಲದೆ ಇರುವುದನ್ನು ನಾವು ನೋಡಲು ಸಾಧ್ಯ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ದಿನದಿಂದ ಎನ್‍ಇಪಿ ಬದಲಾಗಿ ಎಸ್‍ಇಪಿ ತರುತ್ತೇವೆ, ಪಠ್ಯಕ್ರಮದಲ್ಲಿ ಬದಲಾವಣೆ ಮಾಡುತ್ತೇವೆ ಎಂಬುದಾಗಿ ಗೊಂದಲಗಳನ್ನೇ ಮಾಡುತ್ತ ಬಂದಿದ್ದಾರೆ ಎಂದು ಕಿಡಿಕಾರಿದರು.
ಮೊನ್ನೆ ಒಂದು ಸಂಕಲನಾತ್ಮಕ ಮೌಲ್ಯಮಾಪನ ಸಂದರ್ಭದಲ್ಲಿ 5ನೇ ತರಗತಿ, 8ನೇ ಮತ್ತು 9ನೇ ತರಗತಿಯ ಮಕ್ಕಳ ಪರೀಕ್ಷೆ ನಡೆಸುತ್ತೇವೆ. ಇದಕ್ಕೆ ಪ್ರಶ್ನೆಪತ್ರಿಕೆ ಮಾತ್ರ ನಾವು ಕೊಡುತ್ತೇವೆ; ಉತ್ತರಪತ್ರಿಕೆಯನ್ನು ವಿದ್ಯಾರ್ಥಿಗಳೇ ತರಬೇಕು ಎಂದು ಸೂಚಿಸಿದ್ದರು. ಈ ಬಗ್ಗೆ ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಯಾವುದೇ ರೀತಿಯ ಮಾಹಿತಿ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದ್ದರು ಎಂದು ಹೇಳಿದರು.
ಬಳಿಕ ಖಾಸಗಿ ಶಾಲೆಯ ಆಡಳಿತ ಮಂಡಳಿಯವರು ಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದಿದ್ದರು. ಈಗ ಸರಕಾರ ಅದನ್ನು ವಿಭಾಗೀಯ ನ್ಯಾಯಾಲಯದಿಂದ ತೆರವುಗೊಳಿಸಿದೆ. ಈಗ ಹೊಸ ಸುತ್ತೋಲೆ ಕಳಿಸಿದ್ದಾರೆ. ಪ್ರಶ್ನೆಪತ್ರಿಕೆಯನ್ನು ನಾವು ಕೊಡುತ್ತೇವೆ. ಶಾಲೆಯ ಪ್ರಾಂಶುಪಾಲರು ಮತ್ತು ಹೆಡ್ ಮಾಸ್ಟರ್ ಅವರು 4 ಶೀಟಿಗೆ ಒಂದು ರೂಪಾಯಿಯಂತೆ ಹಣವನ್ನು ಮಂಡಳಿಯಿಂದ ಪಡೆದು ಉತ್ತರ ಪತ್ರಿಕೆ ಕೊಡಲು ಹೊಸ ಸುತ್ತೋಲೆ ಹೊರಡಿಸಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ಇಲಾಖೆಯ ಇಂಥ ಗೊಂದಲಗಳಿಗೆ ಶಿಕ್ಷಣ ಸಚಿವರೇ ಕಾರಣರು ಎಂದು ಅವರು ದೂರಿದರು. ಹಾಗಾಗಿ ಸರಕಾರವು ಪರೀಕ್ಷೆ ಯಾವ ವಿಧಾನದಲ್ಲಿ ನಡೆಯಲಿದೆ ಎಂದು ಪೋಷಕರಿಗೆ ತಿಳಿಸಬೇಕು. ಇದು ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೂ ಇದು ಅನ್ವಯಿಸುತ್ತದೆಯೇ ಎಂದು ಮಾಹಿತಿ ಕೊಡಬೇಕು ಎಂದು ಆಗ್ರಹಿಸಿದರು.
ಇದೇ 12ರಂದು ಪರೀಕ್ಷೆ ಆರಂಭವಾಗಲಿದೆ. ಪೋಷಕರು ಇವರ ಮೇಲೆ ವಿಶ್ವಾಸವಿಟ್ಟು ಪರೀಕ್ಷೆಗೆ ಉತ್ತರ ಪತ್ರಿಕೆ ಇಲ್ಲದೆ ಮಕ್ಕಳನ್ನು ಕಳಿಸಬೇಕೇ ಅಥವಾ ಉತ್ತರಪತ್ರಿಕೆ ಜೊತೆ ಕಳಿಸಬೇಕೇ ಎಂಬ ವಿಷಯದಲ್ಲಿ ಸ್ಪಷ್ಟ ಚಿತ್ರಣ ನೀಡಬೇಕೆಂದು ಅವರು ಒತ್ತಾಯಿಸಿದರು. ಈ ಎಲ್ಲ ಗೊಂದಲಗಳನ್ನು ತಕ್ಷಣಕ್ಕೆ ನಿವಾರಿಸಿ ಎಂದು ಅವರು ತಿಳಿಸಿದರು. ಈ ಶಿಕ್ಷಣ ಸಚಿವರ ವೈಫಲ್ಯವನ್ನು ಮುಖ್ಯಮಂತ್ರಿಗಳು ಗಮನಿಸಿ ಕರೆಸಿ ಬುದ್ಧಿಮಾತು ಹೇಳಬೇಕು ಎಂದು ಆಗ್ರಹಿಸಿದರು.
ಸಚಿವರು ತಜ್ಞರು ಮತ್ತು ಪರೀಕ್ಷಾ ಮಂಡಳಿ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕಿತ್ತು. ರಾಜಕೀಯ ನಿರ್ಧಾರಗಳ ಮೂಲಕ ಮಕ್ಕಳ ಭವಿಷ್ಯದಲ್ಲಿ ಚೆಲ್ಲಾಟ ಆಡಬಾರದು. ಇಂಥ ಗೊಂದಲಗಳಿಗೆ ಶಿಕ್ಷಣ ಸಚಿವರಲ್ಲಿ ಸ್ಪಷ್ಟತೆ ಇಲ್ಲದೇ ಇರುವುದೇ ಕಾರಣ ಎಂದು ಟೀಕಿಸಿದರು.












Click it and Unblock the Notifications