ದೇಶಕ್ಕೆ ರಿಪಬ್ಲಿಕನ್ ಆಫ್ ಭಾರತ್ ಎಂದು ಮರುನಾಮಕರಣ: ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 05: ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದ್ದು, ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರಾಗಿದೆ. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ಸರ್ಕಾರ ದೇಶಕ್ಕೆ ರಿಪಬ್ಲಿಕ್ ಆಫ್ ಭಾರತ್ ಎಂದು ಮರುನಾಮಕರಣ ಮಾಡುವ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ, ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ 'INDIA' ಎಂಬ ಹೆಸರಿಟ್ಟ ಕಾರಣಕ್ಕೆ ಕೇಂದ್ರ ಸರ್ಕಾರ ದೇಶದ ಹೆಸರನ್ನು 'INDIA'ದ ಬದಲು 'ಭಾರತ' ಎಂದು ಬದಲಾಯಿಸಲು ಮುಂದಾಗಿದೆ.NDIA ಮೈತ್ರಿಕೂಟದ ಬಗ್ಗೆ BJPಯವರಿಗೆ ಇಷ್ಟೊಂದು ಭಯವೆ? ಎಂದು ಪ್ರಶ್ನಿಸಿದ್ದಾರೆ.

ದೇಶದ ಹೆಸರು ಮರುನಾಮಕರಣಕ್ಕೆ 'INDIA' ಮೈತ್ರಿಕೂಟದ ಮೇಲಿನ ಭಯವಲ್ಲದೆ ಮತ್ತೇನು ಕಾರಣ ಮೋದಿಯವರೆ? INDIA ಹೆಸರನ್ನು 'ಭಾರತ' ಎಂದು ಬದಲಿಸಿದರೆ ದೇಶ ಬದಲಾಗಲಿದೆಯೇ?
ಮೋದಿಯವರೇ ಬದಲಾಗಬೇಕಿರುವುದು ದೇಶದ ಹೆಸರಲ್ಲ, ಬದಲಿಗೆ ದೇಶದ ಪರಿಸ್ಥಿತಿ. ಹೆಸರು ಬದಲಾಯಿಸುವ ಬದಲು ಜನರ ಜೀವನ ಮಟ್ಟ ಬದಲಾಯಿಸಿ. ದ್ವೇಷದ ಮೂಲಕ ಸಮಾಜದ ಶಾಂತಿ ಕೆಡಿಸುತ್ತಿರುವ ನಿಮ್ಮ ಭಕ್ತರ ಮನಸ್ಸು ಬದಲಾಯಿಸಿ. ಈ ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವಾಗಿ ಬದಲಾಯಿಸಿ ಎಂದು ಕೇಂದ್ರ ಬಿಜೆಪಿ ನಾಯಕರ ವಿರುದ್ದ ಕಿಡಿಕಾರಿದ್ದಾರೆ.
INDIA ಮತ್ತು ಭಾರತ ಎರಡೂ ಹೆಸರುಗಳು ನಮ್ಮ ಎದೆಯೊಳಗೆ ಅಜರಾಮರವಾಗಿವೆ. ಇಂಡಿಯಾ ಎಂದರೆ ಬೇರೆಯಲ್ಲ, ಭಾರತ ಎಂದರೆ ಬೇರೆಯಲ್ಲ. ಸದುದ್ದೇಶದಿಂದ INDIA ಬದಲು ಭಾರತ ಎಂದು ಮರುನಾಮಕರಣ ಮಾಡಿದರೆ ಆಕ್ಷೇಪಣೆಯಿಲ್ಲ.ಆದರೆ ವಿರೋಧ ಪಕ್ಷಗಳ ಒಕ್ಕೂಟ INDIA ಹೆಸರನ್ನು ಅಪ್ರಸ್ತುತಗೊಳಿಸಲು ದೇಶದ ಹೆಸರು ಬದಲಾಯಿಸಲು ಹೊರಟಿರುವುದು ಮೂರ್ಖತನ ಎಂದು ಕಿಡಿಕಾರಿದ್ದಾರೆ.
ಇನ್ನೂ ಇಂಡಿಯಾ ಮರುನಾಮಕರಣ ವಿಚಾರವಾಗಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದ ಪರಿಸ್ಥಿತಿ ಬರುತ್ತದೆ ಎಂದು ಬದಲಾವಣೆ ಮಾಡಲು ಹೊರಟಿದ್ದಾರೆ. ಸಂವಿಧಾನದ ಹಕ್ಕುಗಳು ಇದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಹಕ್ಕು ಕಸಿಯುವ ಕೆಲಸ ಸಫಲವಾಗಲ್ಲ. ಇಂಡಿಯಾ ಒಕ್ಕೂಟ ನೋಡಿ ಅವರಿಗೆ ಭಯ ಶುರುವಾಗಿದೆ. ಲೋಕಸಭಾ ಚುನಾವಣೆಗೆ ಉಳಿದಿರುವುದು 6 ತಿಂಗಳು ಮಾತ್ರ. ಅದಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಕೇಂದ್ರದ ವಿರುದ್ದ ಕಿಡಿಕಾರಿದರು.
ಇನ್ನೂ ಈ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ಇಂಡಿಯಾ ಬದಲು ಭಾರತ ಎಂದು ನೇಮಕ ಮಾಡುವ ಕುರಿತು ನನಗೆ ಪೂರ್ತಿ ವಿಚಾರ ಗೊತ್ತಿಲ್ಲ. ಅಧಿವೇಶನದಲ್ಲಿ ಬಿಲ್ ತಂದ ಮೇಲೆ ಈ ಬಗ್ಗೆ ಮಾತನಾಡೋಣ. ಪ್ರಧಾನಮಂತ್ರಿ ಮೋದಿಗೆ ಸೋಲಿನ ಭಯ ಶುರುವಾಗಿದೆ. ರಾಹುಲ್, ಕಾಂಗ್ರೆಸ್ ಬಗ್ಗೆ ಪ್ರಧಾನಿ ಮೋದಿಗೆ ಭಯ ಶುರುವಾಗಿದೆ. ಬಿಜೆಪಿಯವರು ಜನರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications