ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗೆ ಚಪ್ಪಲಿ ಹಾರ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ
ಬೆಂಗಳೂರು, ಜನವರಿ 23: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯ ಸಂಭ್ರಮದಲ್ಲಿ ರಾಜ್ಯ ಮತ್ತು ದೇಶ ಇರುವ ಸಂದರ್ಭದಲ್ಲಿ ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಗುಲ್ಬರ್ಗದ ಕೋಟನೂರು ಡಿ ಎಂಬಲ್ಲಿ ಕಿಡಿಗೇಡಿಗಳು ಚಪ್ಪಲಿಯ ಹಾರ ಹಾಕಿದ್ದಾರೆ. ಇದು ದಿಗ್ಭ್ರಮೆಗೆ ಮತ್ತು ಬೇಸರಕ್ಕೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಈ ಕುರಿತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಾಬಾಸಾಹೇಬರ ಪ್ರತಿಮೆಗೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳ ಬಂಧಿಸಬೇಕು. ಎಲ್ಲರನ್ನೂ ಒಟ್ಟೊಟ್ಟಿಗೆ ಒಯ್ಯುವ ಶ್ರೇಷ್ಠ ಸಂವಿಧಾನವನ್ನು ನೀಡಿದ ಡಾ. ಅಂಬೇಡ್ಕರರಿಗೆ ಅವಮಾನ ಮಾಡಿದ ಕಿಡಿಗೇಡಿಗಳ ನಡೆ ಅಕ್ಷಮ್ಯ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ತಳಸಮುದಾಯಗಳಿಗೆ ರಕ್ಷಣೆ ಇಲ್ಲ. ಅಲ್ಪಸಂಖ್ಯಾತರನ್ನೂ ಸೇರಿಸಿ ತಳ ಸಮುದಾಯಗಳ ರಕ್ಷಕರು ಎಂದು ಸರಕಾರ ಹೇಳಿಕೊಳ್ಳುತ್ತದೆ. ಆದರೆ, ಅವರಿಗೆ ರಕ್ಷಣೆ ಇಲ್ಲವಾಗಿದೆ. ಅಂಬೇಡ್ಕರರ ಪುತ್ಥಳಿಗೆ ಅವಮಾನ ಮಾಡಿದ ಘಟನೆ ಸರಕಾರದ ಬಗ್ಗೆ ಭಯ ಇಲ್ಲದೆ ಇರುವುದರ ಸಂಕೇತ ಎಂದು ವಿಶ್ಲೇಷಿಸಿದರು.
ಕಿಡಿಗೇಡಿಗಳನ್ನು ರಕ್ಷಿಸದೆ ಅವರನ್ನು ಕೂಡಲೇ ಬಂಧಿಸಿ ಎಂದು ಆಗ್ರಹಿಸಿದ ಅವರು, ಕಾನೂನಿನಡಿ ಅವರಿಗೆ ಶಿಕ್ಷೆ ಕೊಡಿ ಎಂದು ಒತ್ತಾಯಿಸಿದರು. ಇಂಥ ಮಹನೀಯರ ಪುತ್ಥಳಿಗೆ ಇಂಥ ಕೆಟ್ಟತನ ಮಾಡಲು ಭಯ ಬರುವಂತೆ ಶಿಕ್ಷೆ ಕೊಡಿ ಎಂದು ಅವರು ಒತ್ತಾಯಿಸಿದರು. ಇದು ಎಐಸಿಸಿ ಅಧ್ಯಕ್ಷ ಖರ್ಗೆಯವರ ನಾಡು. ಸಂವಿಧಾನವೇ ನನ್ನ ಆಸ್ತಿ ಎನ್ನುವ ಪ್ರಿಯಾಂಕ್ ಖರ್ಗೆಯವರ ಜಿಲ್ಲೆ. ಅವರೇ ಸಚಿವರು. ಅವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಈಗಾಗಲೇ ಒಬ್ಬರನ್ನು ಬಂಧಿಸಿದ್ದಾರೆ ಎಂದು ಗೊತ್ತಾಗಿದೆ. ಯಾರೇ ಆಗಿರಲಿ; ಉಳಿದವರೆಲ್ಲರನ್ನೂ ಕೂಡಲೇ ಬಂಧಿಸಬೇಕು. ಕೂಡಲೇ ಬಂಧನ ಆಗದಿದ್ದರೆ ಎಸ್‍ಸಿ ಮೋರ್ಚಾದ ಎಲ್ಲರೂ ಗುಲ್ಬರ್ಗಕ್ಕೆ ಬರಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಸಿದ್ದರಾಮಯ್ಯನವರು ಹೊರಗಡೆ ಹೇಳುವುದೊಂದು; ಒಳಗಡೆ ಮಾಡುವುದೇ ಮತ್ತೊಂದು ಎಂದು ಟೀಕಿಸಿದರು. ಮುಖ್ಯಮಂತ್ರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅವರು ನಕಲಿ ದಲಿತವಾದಿ ಎಂದು ತಿಳಿಸಿದರು.












Click it and Unblock the Notifications