ತನಿಖಾಸ್ತ್ರ ಮೂಲಕ ಬಿಜೆಪಿ ನಿದ್ದೆಗೆಡಿಸಿದ ಸಿದ್ದು: ಬಿಜೆಪಿ ಸರ್ಕಾರದ ಎಲ್ಲಾ ಕಾಮಗಾರಿಗಳ ನಿಲ್ಲಿಸುವಂತೆ ಸಿಎಂ ಪತ್ರ
ಬೆಂಗಳೂರು, ಮೇ 26: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಶಾಕ್ ನೀಡಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಪ್ರಕರಣಗಳಿಗೆ ತನಿಖಾಸ್ತ್ರ ಪ್ರಯೋಗ ಮಾಡಿದ್ದು, ಕಾಮಗಾರಿಗಳಿಗೆ ತಡೆ ನೀಡಿ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ವಿವಿಧ ಇಲಾಖೆಗಳಿಂದ ಅನುಷ್ಠಾನಗೊಳ್ಳುತ್ತಿರುವ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಿ, ತನಿಖೆಯ ನಂತರವೇ ಪುನರಾರಂಭಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯ ಕೊನೆಯಲ್ಲಿ ವಿವಿಧ ಇಲಾಖೆಗಳಲ್ಲಿ ಮಂಜೂರು ಮಾಡಲಾದ ಸುಮಾರು 20,000 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ಅಲ್ಲದೇ ವಿವಿಧ ಇಲಾಖೆಗಳು, ನಿಗಮಗಳು, ಮಂಡಳಿಗಳಲ್ಲಿ ಹೊಸದಾಗಿ ಕೈಗೆತ್ತಿಕೊಂಡಿರುವ ಕಾಮಗಾರಿಗಳು ಮತ್ತು ಬಾಕಿ ಇರುವ ಬಿಲ್ ಪಾವತಿ ಸ್ಥಗಿತಗೊಳಿಸುವಂತೆ ಮೇ 20 ರಂದು ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಿದ ದಿನವೇ ಆದೇಶ ಹೊರಡಿಸಲಾಗಿತ್ತು.
ಇನ್ನೂ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಸೋಮವಾರ ಟಿಪ್ಪಣಿಯೊಂದನ್ನು ಕಳುಹಿಸಿರುವ ಸಿದ್ದರಾಮಯ್ಯ, ವಿವಿಧ ಇಲಾಖೆಗಳಲ್ಲಿ ಹಿಂದಿನ ಕೆಲವು ತಿಂಗಳಲ್ಲಿ ಮಂಜೂರು ಮಾಡಲಾದ ಕಾಮಗಾರಿಗಳ ತಡೆಗೆ ಸೂಚಿಸಿದ್ದಾರೆ.

ಜಲ ಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿರುವ ವಿಶ್ವೇಶ್ವರಯ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ. ಕೃಷ್ಣಾ ಭಾಗ್ಯ ಜಲ ನಿಗಮ, ಇಂಧನ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಜಲಜೀವನ್ ಮಿಷನ್ ಯೋಜನೆಯಡಿ ಅನುದಾನದ ಲಭ್ಯತೆ ಇಲ್ಲದೇ ಟೆಂಡ ಪ್ರಕ್ರಿಯೆ ನಡೆಸಲಾಗಿದೆ. ಅನುದಾನದ ಕೊರತೆ, ಭೂಸ್ವಾಧೀನದ ತೊಂದರೆ ಇದ್ದರೂ ತರಾತುರಿಯಲ್ಲಿ ಟೆಂಡ ನಡೆಸಿರುವ ದೂರುಗಳಿವೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನೂ ಹಣದ ಕೊರತೆ ಮತ್ತು ಭೂಸ್ವಾಧೀನ ಸಮಸ್ಯೆಗಳಿದ್ದರೂ, ಈ ಇಲಾಖೆಗಳಿಂದ ವಿವಿಧ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಮಾಡಲಾಗಿದೆ. ಅಲ್ಲದೆ, ಇದಕ್ಕಾಗಿ 20 ಸಾವಿರ ಕೋಟಿ ರೂ.ಗಳ ಅಗತ್ಯವಿದ್ದು, ನಿಯಮ ಉಲ್ಲಂಘಿಸಿ ಟೆಂಡರ್ ಕರೆಯಲಾಗಿದೆ, ಈ ಕಾಮಗಾರಿಗಳು ಅವೈಜ್ಞಾನಿಕವಾಗಿವೆ ಎಂಬ ಆರೋಪಗಳು ಕೇಳಿ ಬಂದಿಇದೆ. ಹೀಗಾಗಿ ಈ ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಅಗತ್ಯವಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಕಾಮಗಾರಿಗಳ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.












Click it and Unblock the Notifications