ರಾಜ್ಯಸಭೆಯಲ್ಲಿ ತೆಲಂಗಾಣ ಗದ್ದಲ, ಗೊಂದಲ
ನವದೆಹಲಿ, ಫೆ.20 : ಗದ್ದಲ, ಗಲಾಟೆ, ಪ್ರತಿಭಟನೆಗಳ ನಡುವೆಯೇ ರಾಜ್ಯಸಭೆಯಲ್ಲಿ ವಿವಾದಿತ ತೆಲಂಗಾಣ ವಿಧೇಯಕವನ್ನು ಗುರುವಾರ ಮಧ್ಯಾಹ್ನ ಮಂಡಿಸಲಾಗಿದೆ. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ರಾಜ್ಯಸಭೆಯಲ್ಲಿ ವಿಧೇಯಕ ಮಂಡಿಸಿದ್ದಿ, ಅದರ ಕುರಿತು ಬಿಸಿ-ಬಿಸಿ ಚರ್ಚೆ ನಡೆಯುತ್ತಿದೆ.
ಗುರುವಾರ ರಾಜ್ಯಸಭೆ ಕಲಾಪ ಆರಂಭವಾದ ತಕ್ಷಣ ತೆಲಂಗಾಣ ವಿಧೇಯಕ ಮಂಡಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ, ಬುಧವಾರ ಪ್ರತಿಭಟನೆ ನಡೆಸುತ್ತಿದ್ದ ಸೀಮಾಂಧ್ರ ಭಾಗದ ಸಂಸದರು ಗುರುವಾರವೂ ತಮ್ಮ ಗದ್ದಲವನ್ನು ಮುಂದುವರೆಸಿದ್ದರು. ಪದೇ ಪದೇ ಸದನವನ್ನು ಮುಂದೂಡಿದ ಬಳಿಕ ಮಧ್ಯಾಹ್ನ ವಿಧೇಯಕವನ್ನು ಮಂಡಿಸಲಾಯಿತು.
ವಿಧೇಯಕದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವ ಚಿರಂಜೀವಿ ತೆಲಂಗಾಣ ರಚನೆ ನಿರ್ಧಾರವನ್ನು ಕಾಂಗ್ರೆಸ್ ಆತುರದಲ್ಲಿ ತಗೆದುಕೊಂಡಿದೆ ಎಂದು ಹೇಳಿದರು. ಇದರಿಂದ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಮತ್ತು ಚಿರಂಜೀವಿ ನಡುವೆ ಜಟಾಪಟಿ ನಡೆಯಿತು ತೆಲಂಗಾಣ ವಿವಾದ ಕುರಿತು ಚಿರಂಜೀವಿ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಅರುಣ್ ಜೇಟ್ಲಿ ಒತ್ತಾಯಿಸಿದರು. [ಚಿತ್ರಗಳಲ್ಲಿ ನೋಡಿ ರಾಜ್ಯ ಸಭೆ ಗದ್ದಲ, ಗೊಂದಲ ]

ಬೆಳಗ್ಗೆಯಿಂದ ಪ್ರತಿಭಟನೆ
ಗುರುವಾರ ಬೆಳಗ್ಗೆಯಿಂದ ತೆಲಂಗಾಣ ವಿಧೇಯಕ ಮಂಡನೆ ಮಾಡದಂತೆ ಸೀಮಾಂಧ್ರ ಭಾಗದ ಸಂಸದರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಪದೇಪದೇ ಸದನವನ್ನು ಮುಂದೂಡಿದ ಬಳಿಕ ಮಧ್ಯಾಹ್ನ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಸದನದಲ್ಲಿ ವಿಧೇಯಕ ಮಂಡಿಸಿದರು.

ಜೇಟ್ಲಿ, ಚಿರಂಜೀವಿ ಜಟಾಪಟಿ
ತೆಲಂಗಾಣ ವಿಧೇಯಕದ ಕುರಿತು ಚರ್ಚೆ ಸಂದರ್ಭದಲ್ಲಿ ರಾಜ್ಯ ಸಭೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಮತ್ತು ಪ್ರವಾಸೋದ್ಯಮ ಸಚಿವ ಚಿರಂಜೀವಿ ನಡುವೆ ಜಟಾಪಟಿ ನಡೆಯಿತು. ತೆಲಂಗಾಣ ವಿಚಾರದಲ್ಲಿ ಚಿರಂಜೀವಿ ತಮ್ಮ ನಿಲುವು ಸ್ಪಷ್ಟಪಡಿಸಬೇಕೆಂದು ಅರುಣ್ ಜೇಟ್ಲಿ ಒತ್ತಾಯಿಸಿದರು.

ಚಿರಂಜೀವಿ ಭಾಷಣ
ಹೈದರಾಬಾದ್ ಜೊತೆ ಆಂಧ್ರ ಪ್ರದೇಶದ ಜನತೆಗೆ ಭಾವನಾತ್ಮಕ ನಂಟಿದೆ. ಜನರ ಭಾವನೆಯನ್ನು ನಾನಿಲ್ಲಿ ವ್ಯಕ್ತಪಡಿಸುತ್ತಿದ್ದೇನೆ. ಹೈದರಾಬಾದ್ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ, ಸೀಮಾಂಧ್ರಕ್ಕೆ ಪ್ರತ್ಯೇಕ ರೈಲ್ವೆ ವಲಯ ನೀಡಬೇಕು ಎಂದು ಚಿರಂಜೀವಿ ಹೇಳಿದರು. ಕಾಂಗ್ರೆಸ್ ಆತುರದಲ್ಲಿ ತೆಲಂಗಾಣ ರಚನೆ ನಿರ್ಧಾರ ಕೈಗೊಂಡಿದೆ, ನನ್ನ ಪಕ್ಷದ ತೀರ್ಮಾನ ವೈಯಕ್ತಿಕವಾಗಿ ನನಗೆ ನೋವು ತಂದಿದೆ ಎಂದು ಹೇಳಿದರು. ಇದರಿಂದ ಸದನದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಯುಪಿ, ಮಹಾರಾಷ್ಟ್ರ ವಿಭಜನೆಗೆ ಮನವಿ
ತೆಲಂಗಾಣ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಬಿಎಸ್ ಪಿ ಅಧ್ಯಕ್ಷೆ ಮಾಯಾವತಿ ತೆಲಂಗಾಣ ವಿಭಜನೆಯಂತೆ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವನ್ನು ವಿಭಜನೆ ಮಾಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.

10,000 ಕೋಟಿ ಪ್ಯಾಕೇಜ್ ಗೆ ಬೇಡಿಕೆ
ಸೀಮಾಂಧ್ರ ಭಾಗಕ್ಕೆ 10,000 ಕೋಟಿ ವಿಶೇಷ ಪ್ಯಾಕೇಜ್ ಮತ್ತು ತೆರಿಗೆ ವಿನಾಯಿತಿ ನೀಡಬೇಕೆಂದು ವೆಂಕಯ್ಯ ನಾಯ್ಡು ಮನವಿ ಮಾಡಿದರು.


Click it and Unblock the Notifications
