ಕುಂದಾಪುರದಲ್ಲಿ ಯುವತಿ ಮೇಲೆ ಅತ್ಯಾಚಾರ, ಕೊಲೆ
ಕುಂದಾಪುರ, ಅಕ್ಟೋಬರ್ 03 : ಕುಂದಾಪುರದ ಗೋಳಿಯಂಗಡಿ ಬಳಿಯ ಕಾರಿಕೊಡ್ಲುವಿನಲ್ಲಿ ಗುರುವಾರ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಶಂಕಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರಿಕೊಡ್ಲುವಿನ ಗೋವಿಂದ ನಾಯ್ಕ್ ಹಾಗೂ ಕಾವೇರಿ ಅವರ ಪುತ್ರಿ ಸುಚಿತ್ರಾ (19) ಕೊಲೆಯಾದವಳು. ಸುಚಿತ್ರಾಳವನ್ನು ಅಪಹರಣ ಮಾಡಿ, ಅತ್ಯಾಚಾರ ನಡೆಸಿ ಕೊಲೆ ಮಾಡಿ ಕಾರಿಕೊಡ್ಲುವಿನ ಬಳಿಯ ಪೊದೆಯೊಂದರಲ್ಲಿ ಶವವನ್ನು ಎಸೆಯಲಾಗಿದೆ.

ಸುಚಿತ್ರಾ ಗೋಳಿಯಂಗಡಿಯ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ಅಲ್ಲಿಂದ ಮನೆಗೆ ತೆರಳುವಾಗ ಆಕೆಯನ್ನು ಅಪಹರಣ ಮಾಡಲಾಗಿದ್ದು, ಗುರುವಾರ ರಾತ್ರಿ ಆಕೆಯ ಶವ ಪೊದೆಯಲ್ಲಿ ಪತ್ತೆಯಾಗಿದೆ. [ಅಕ್ಷತಾ ಕೊಲೆ ಪ್ರಕರಣ : ಆರೋಪಿ ಬಂಧನ]
ಸುಚಿತ್ರಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯ ಮೇಲೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಶಂಕರನಾರಾಯಣ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕುಂದಾಪುರ ಡಿವೈಎಸ್‌ಪಿ ಮಂಜುನಾಥ್ ಶೆಟ್ಟಿ, ಶಂಕರನಾರಾಯಣ ಪೊಲೀಸ್ ಠಾಣೆಯ ಸಿಬ್ಬಂದಿ ಕಾರಿಕೊಡ್ಲುವಿಗೆ ಭೇಟಿ ನೀಡಿ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ತನಿಖೆ ಮುಂದುವರೆದಿದೆ.
ಅಂದಹಾಗೆ 2015ರ ಜೂನ್‌ನಲ್ಲಿ ಕುಂದಾಪುರದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಕ್ಷತಾಳನ್ನು ಕೊಲೆ ಮಾಡಲಾಗಿತ್ತು.
ಅಕ್ಷತಾ ಮೇಲೆ ಅತ್ಯಾಚಾರ ನಡೆಸಲು ಯತ್ನಿಸಿದ್ದ ಸುನೀಲ್ ಆಕೆಯನ್ನು ಕೊಲೆ ಮಾಡಿ ಕಾಡಿನಲ್ಲಿ ಶವವನ್ನು ಬಿಸಾಡಿದ್ದ. ಎರಡು ದಿನದಲ್ಲಿ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ.












Click it and Unblock the Notifications