Cauvery Dispute: ತಮಿಳುನಾಡು ರೈತರಿಂದಲೂ ಕಾವೇರಿ ಪ್ರತಿಭಟನೆ ಕಿಚ್ಚು
ತಿರುಚ್ಚಿ: ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಬೆಂಗಳೂರು ಬಂದ್ ಆಗಿ, ಕರ್ನಾಟಕ ಬಂದ್‌ಗೂ ಸಿದ್ಧತೆ ಆರಂಭವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕದಿಂದ ನೀರು ಪಡೆದರೂ ತಮಿಳುನಾಡಿನಲ್ಲಿ ಪ್ರತಿಭಟನೆ ಶುರುವಾಗಿದೆ. ತಮಿಳುನಾಡಿನ ರೈತರು ಕಾವೇರಿ ನೀರಿಗಾಗಿ ಹೋರಾಟ ತೀವ್ರಗೊಳಿಸಿದ್ದು, ಸತ್ತ ಇಲಿಗಳನ್ನೇ ಬಾಯಲ್ಲಿ ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಾವೇರಿ ನೀರಿನ ವಿವಾದ ತಮಿಳುನಾಡು & ಕರ್ನಾಟಕ ಸಂಬಂಧವನ್ನು ಹಾಳು ಮಾಡುವ ಜೊತೆಗೆ, ಪ್ರತಿಭಟನೆಯ ಕಿಚ್ಚನ್ನೂ ಹೊತ್ತಿಸಿದೆ. ಇದೇ ವೇಳೆ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು ಪ್ರತಿಭಟನೆ ತೀವ್ರವಾಗಿದೆ. ಹೀಗೆ ಕರ್ನಾಟಕ ಮಾತ್ರವಲ್ಲ ತಮಿಳುನಾಡಿನಲ್ಲೂ ಹೋರಾಟ ಶುರುವಾಗಿದೆ. ಅದರಲ್ಲೂ ತಮಿಳುನಾಡಿಗೆ ಸುಮಾರು 5 ಸಾವಿರ ಕ್ಯೂಸೆಕ್ ನೀರು ಹರಿಸಿದರೂ ತಮಿಳುನಾಡಿನ ರೈತರು ಕರ್ನಾಟಕ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ತಲೆ ಬುರುಡೆ ಹಾಗೂ ಸತ್ತ ಇಲಿಗಳ ಜೊತೆ ತೀವ್ರ ಹೋರಾಟ ಆರಂಭಿಸಿದ್ದಾರೆ.

ನೆರೆ ರಾಜ್ಯದಲ್ಲೂ ರೊಚ್ಚಿಗೆದ್ದ ರೈತರು
ತಮಿಳುನಾಡು ಸರ್ಕಾರ ಹೆಚ್ಚು ನೀರು ಸಿಕ್ಕಾಗ ಅದನ್ನ ಉಳಿಸಿಕೊಳ್ಳದೆ ಸಮುದ್ರಕ್ಕೆ ಬಿಟ್ಟು ಈಗ ನಮ್ಮ ಮೇಲೆ ಒತ್ತಡ ಹೇರುತ್ತಿದೆ ಎಂದು ಕರ್ನಾಟಕ ಆರೋಪಿಸಿದೆ. ಹೀಗೆ ಎರಡೂ ರಾಜ್ಯಗಳ ಕಿಚ್ಚು ದೊಡ್ಡದಾದ ವೇಳೆ ತಮಿಳುನಾಡಿನ ರೈತರೂ ಆಕ್ರೋಶ ಹೊರಹಾಕಿದ್ದು, 'ನ್ಯಾಷನಲ್ ಸೌಥ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಷನ್' ಹೋರಾಟ ಆರಂಭಿಸಿದೆ. ಈ ಸಂಘಟನೆಯ ತಮಿಳುನಾಡು ಘಟಕದ ಅಧ್ಯಕ್ಷ ಅಯ್ಯಕಣ್ಣು ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಗಿದೆ.
#WATCH | A group of Tamil Nadu farmers in Tiruchirappalli holding dead rats in their mouths protest against the Karnataka government and demand the release of Cauvery water to the state from Karnataka pic.twitter.com/CwQyVelyjF
— ANI (@ANI) September 26, 2023
ಸತ್ತ ಇಲಿಗಳ ಜೊತೆ ತಲೆಬುರುಡೆ!
ತಿರುಚ್ಚಿಯಲ್ಲಿ ಮಾನವ ತಲೆಬುರುಡೆ ಹಾಗೂ ಸತ್ತ ಇಲಿ ಹಿಡಿದು ಕಾವೇರಿ ನೀರಿನಲ್ಲಿ ತಮ್ಮ ಪಾಲಿಗಾಗಿ ಆಗ್ರಹಿಸಿದ್ದಾರೆ ತಮಿಳುನಾಡು ರೈತರು. ಅರೆಬೆತ್ತಲೆಯಾಗಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತರು ಅಲ್ಪಾವಧಿ ಕುರುವೈ ಬೆಳೆಗೂ ಸೂಕ್ತ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧ ಇದೇ ವೇಳೆ 'ನ್ಯಾಷನಲ್ ಸೌಥ್ ಇಂಡಿಯನ್ ರಿವರ್ ಇಂಟರ್ಲಿಂಕಿಂಗ್ ಫಾರ್ಮರ್ಸ್ ಅಸೋಸಿಯೇಷನ್' ಆಕ್ರೋಶ ಹೊರಹಾಕಿದೆ. ಈ ಮೂಲಕ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನಲ್ಲೂ ಕಾವೇರಿ ಹೋರಾಟದ ಬಿಸಿ ಹೆಚ್ಚಾಗಿದೆ.

ಒಟ್ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ಕಿಚ್ಚು ಜೋರಾಗಿದೆ. ಇದನ್ನ ತಣ್ಣಗಾಗಿಸಲು ತಮಿಳುನಾಡು ಸರ್ಕಾರ ಮುಂದಾಗುತ್ತಿಲ್ಲ. ಇನ್ನೊಂದು ಕಡೆ ಕರ್ನಾಟಕದ ರೈತರು ಹಾಗೂ ಜನರಿಗೆ ಕುಡಿಯುವ ನೀರಿನ ಚಿಂತೆ ಶುರುವಾಗಿದೆ. ಈ ಮೂಲಕ ಪಕ್ಕಾ ಪಾಲಿಟಿಕ್ಸ್ ನಡುವೆ ಕಾವೇರಿ ವಿವಾದದ ಕಿಚ್ಚು ಮತ್ತಷ್ಟು ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಬಂದ್ ನಡೆದಿದ್ದು, ಕರ್ನಾಟಕ ಬಂದ್‌ಗೂ ಕೌಂಟ್‌ಡೌನ್ ಶುರುವಾಗಿದೆ.
ಕರ್ನಾಟಕದಲ್ಲಿ ಹೋರಾಟ ಮತ್ತಷ್ಟು ತೀವ್ರ?
ಹೀಗೆ ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರಕ್ಕೆ ಕಿಚ್ಚು ಹೊತ್ತಿರುವಾಗ ಮತ್ತೆ ಶಾಕ್ ಸಿಕ್ಕಿದೆ. ತಮಿಳುನಾಡಿಗೆ ಮತ್ತೆ 18 ದಿನ ಪ್ರತಿ ನಿತ್ಯವೂ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಆದೇಶ ನೀಡಿದೆ. ಹೀಗೆ ಪ್ರಾಧಿಕಾರದ ಆದೇಶಕ್ಕೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇದು ಮುಂದೆ ಕರ್ನಾಟಕದಲ್ಲಿ ಪ್ರತಿಭಟನೆಯನ್ನ ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆ ಇದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಬಳಿಕ ಹೋರಾಟ ರಾಜ್ಯದ ಹಲವೆಡೆ ಮತ್ತಷ್ಟು ಜೋರಾಗುವ ಸಾಧ್ಯತೆ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಭದ್ರತೆ ಹೆಚ್ಚಿಸಿದೆ. ಅದರಲ್ಲೂ ರಾಜಧಾನಿ ಬೆಂಗಳೂರಲ್ಲಿ ಪರಿಸ್ಥಿತಿಯು ಇನ್ನಷ್ಟು ಸೂಕ್ಷ್ಮವಾಗಿದೆ. ಈಗಾಗಲೇ ಬಂದ್‌ಗೆ ಕರೆ ನೀಡಿರುವ ಸಮಯದಲ್ಲೇ ಮತ್ತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶಾಕ್ ಮೇಲೆ ಶಾಕ್ ಕೊಡುತ್ತಿದೆ. ಇಂದು ಬೆಂಗಳೂರು ಬಂದ್ ಶಾಂತಿಯುತ ರೀತಿಯಲ್ಲಿ ಮುಗಿದಿದ್ದರೂ ಮುಂದೆ ಕರ್ನಾಟಕ ಬಂದ್ ನಡೆಯಲಿದ್ದು, ಹೀಗಾಗಿ ರಾಜ್ಯ ಸರ್ಕಾರ ಅಲರ್ಟ್ ಆಗಿದೆ.












Click it and Unblock the Notifications