ಕರ್ನಾಟಕದ ಬ್ಯಾಡ್ಜ್ ಧರಿಸಿದ ಕನ್ನಡಿಗನಿಗೆ ಕೆಲಸಕ್ಕೆ ಬರಬೇಡ ಎಂದ ತಮಿಳು ಕಂಪನಿ ಎಂಡಿ
ಕರ್ನಾಟಕದಲ್ಲಿ ಕನ್ನಡ, ಕನ್ನಡಿಗರ ಮೇಲೆ ಪರಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತಿವೆ ಎನ್ನುವ ಆಕ್ರೋಶ ಇತ್ತೀಚೆಗೆ ಹೆಚ್ಚಾಗುತ್ತಿವೆ. ಇದಕ್ಕೆ ಸಂಬಂಧಿಸಿದ ಹಲವು ಘಟನೆಗಳು ದಿನಬೆಳಗಾದರೆ ರಾಜ್ಯದಲ್ಲಿ ನೋಡುತ್ತಿದ್ದೇವೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ಕನ್ನಡಿಗರ ಮೇಲೆ ಪರಭಾಷಿಕರ ದರ್ಪ ಮಿತಿ ಮೀರಿದೆ. ಸೂಕ್ತ ನ್ಯಾಯ ಸಿಗದೆ ಸ್ವಂತ ನೆಲದಲ್ಲೇ ಅಸಹಾಯಕರಾಗಿ ಬದುಕುವ ಸ್ಥಿತಿಯೂ ನಿರ್ಮಾಣವಾಗಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎನ್ನುವಂತೆ ತಮಿಳುನಾಡಿನ ಕಂಪನಿಯೊಂದು ಕರ್ನಾಟಕದ ನಕ್ಷೆಯ ಬ್ಯಾಡ್ಜ್ ಧರಿಸಿದ್ದಕ್ಕೆ ಕನ್ನಡಿಗನನ್ನು ಕೆಲಸದಿಂದ ಕಿತ್ತು ಹಾಕಿದೆ ಎಂಬ ಆರೋಪ ಕೇಳಿಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ನೊಂದ ಕನ್ನಡಿಗನೇ ತನ್ನ ನೋವನ್ನು ಹೇಳಿಕೊಂಡಿದ್ದಾರೆ. 'ನನ್ನ ಹೆಸರು ಕಾರ್ತಿಕ್, ನಾನು ರಾಮನಗರ ಬಳಿ ಇರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ಕೆಲ ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದೆ. ನಾನು ಇಲ್ಲಿ ಕೆಲಸ ಮಾಡುವಾಗ ಕನ್ನಡಿಗರ ಹೆಮ್ಮೆಯ ಗುರುತಾದ ಕರ್ನಾಟಕದ ಬಿಲ್ಲೆ (ಬ್ಯಾಡ್ಜ್) ಅನ್ನು ಧರಿಸಿದ್ದೆ. ಇದನ್ನು ಕಂಡು ಈ ಕಂಪನಿ ವ್ಯವಸ್ಥಾಪಕ ನಿರ್ದೇಶಕರು (ಎಂಡಿ) ಕೂಡಲೇ ಇದನ್ನು ತೆಗೆಯುವಂತೆ ವಾರ್ನಿಂಗ್ ಕೊಟ್ಟಿದ್ದಾರೆ' ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.

'ಈ ಬ್ಯಾಡ್ಜ್ ಅನ್ನು ನನ್ನಿಂದ ಬಲವಂತವಾಗಿ ತೆಗೆಸಿದರು. ಈ ಬಿಲ್ಲೆ ಇರುವುದರಿಂದ ಇವರಿಗೆ ಏನು ತೊಂದರೆ? ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಕೊನೆಗೆ ನಾನು ಇದರ ಬಗ್ಗೆಯೂ ಅವರನ್ನು ಕೇಳಿದೆ. ಇಲ್ಲಿ ನನ್ನ ಪಾಡಿಗೆ ನಾನು ಕೆಲಸ ಮಾಡುತ್ತೇನೆ. ಇದು ನನ್ನ ಎದೆಯ ಮೇಲಿದ್ದರೆ ಏನು ಸಮಸ್ಯೆ ಎಂದು ಕೇಳಿದ್ದಕ್ಕೆ, ಇದೆಲ್ಲ ಇಲ್ಲಿಗೆ ಹಾಕ್ಕೊಂಡು ಬರುವಂತಿಲ್ಲ ಎಂದು ಜೋರು ಮಾಡಿದ್ದಾರೆ' ಎಂದು ವಿವರಿಸಿದ್ದಾರೆ.
ಇದು ಕನ್ನಡಿಗರ ಹೆಮ್ಮೆ, ನನ್ನ ಗುರುತು!
'ಅಲ್ಲದೆ ಬೇರೆಯವರನ್ನು ತೋರಿಸಿ, ಅವರೆಲ್ಲರೂ ಇದನ್ನು ಹಾಕಿಕೊಂಡಿದ್ದಾರಾ? ಮತ್ತೆ ನೀನ್ಯಾಕೆ ಹಾಕೊಂಡಿದ್ದೀಯ? ಎಂದು ಕೇಳಿದರು. ಇದು ಕನ್ನಡಿಗರ ಹೆಮ್ಮೆ, ನನ್ನ ಗುರುತು, ಇದು ನನ್ನ ತಾಯಿ ಇದ್ದಂತೆ, ಇದರಿಂದ ಸಮಸ್ಯೆನಾ? ಕೊನೆಗೆ ನಾನು ಬ್ಯಾಡ್ಜ್ ತೆಗೆಯಬೇಕಾಯಿತು. ಇದರಿಂದ ಈ ಕಂಪನಿಯವರಿಗೆ ಏನು ಸಮಸ್ಯೆ ಎಂದು ನೀವೇ ಕೇಳಬೇಕು' ಎಂದು ಕಾರ್ತಿಕ್ ಕನ್ನಡಪರ ಹೋರಾಟಗಾರರು, ಕನ್ನಡಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
'ಇಲ್ಲಿ ಹೆಚ್ಚಾಗಿ ತಮಿಳಿಗರು ಹಾಗೂ ಕ್ರೈಸ್ತರೇ ಇದ್ದಾರೆ. ಈ ಕಂಪನಿಯಿಂದ ಸುತ್ತಮುತ್ತ ಇರುವ ಹಳ್ಳಿಯವರಿಗೂ ಪ್ರಯೋಜನ ಆಗುತ್ತಿದೆ. ಹಾಗಾಗಿ ನಾನು ಈ ಕಂಪನಿ ಬಗ್ಗೆ ಏನೂ ಕೆಟ್ಟದಾಗಿ ಮಾತನಾಡುತ್ತಿಲ್ಲ. ಆದರೆ, ಇದರ ಎಂಡಿ ಅಶೋಕ್ ಎಂಬುವವರು ಈ ಬ್ಯಾಡ್ಜ್ ತೆಗೆಯದಿದ್ದರೆ ಸೋಮವಾರದಿಂದ ಕೆಲಸಕ್ಕೇ ಬರಬೇಡ ಎಂದು ಧಮ್ಕಿ ಹಾಕಿದ್ದಾರೆ' ಎಂದು ಕಾರ್ತಿಕ್ ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 'ಇಂತಹ ನೈಜ ಕನ್ನಡಾಭಿಮಾನಿಗಳು ಸಿಗೋದು ಕಷ್ಟ. ಕನ್ನಡ ನೆಲದ ನಕ್ಷೆಯನ್ನೇ ಬಿಲ್ಲೆಯನ್ನಾಗಿ ತೊಡುವ ಅವರ ಮಹಾನ್ ಅಭಿಮಾನಕ್ಕೆ ಎಷ್ಟು ವರ್ಣಿಸಿದರೂ ಕಡಿಮೆ. ಅವರ ಬೆಂಬಲವಾಗಿ ಎಲ್ಲ ಕನ್ನಡಿಗರು ನಿಲ್ಲಬೇಕಿದೆ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.












Click it and Unblock the Notifications