SWR: ರಾಜಧಾನಿ ಡೈಲಿ ಎಕ್ಸ್‌ಪ್ರೆಸ್ ನಿಲುಗಡೆ, ಹುಬ್ಬಳ್ಳಿ-ಎಂಜಿಆರ್ ಎಕ್ಸ್‌ಪ್ರೆಸ್ ರೈಲು ಸಮಯ ಪರಿಷ್ಕರಣೆ
ಬೆಂಗಳೂರು, ಜುಲೈ 23: ಬೆಂಗಳೂರಿನಿಂದ ಬೇರೆ ಬೇರೆ ಮಾರ್ಗಗಳಲ್ಲಿ ನಿತ್ಯ ಅನೇಕ ರೈಲುಗಳು ಸಂಚಾರ ನಡೆಸುತ್ತವೆ. ಪ್ರಯಾಣಿಕರ ಬೇಡಿಕೆ, ಆದ್ಯತೆ ಹಾಗೂ ದೈನಂದಿನ ಜನದಟ್ಟಣೆ, ಹಳಿ ಕಾಮಗಾರಿ ನೋಡಿಕೊಂಡು ನೈಋತ್ಯ ರೈಲ್ವೆ ಅಧಿಕಾರಿಗಳು ಒಂದಷ್ಟು ಬದಲಾವಣೆ ಮಾಡುತ್ತಿರುತ್ತಾರೆ. ಅದೇ ರೀತಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ನಿಲುಗಡೆ ಹಾಗೂ ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್‌ನಿಂದ ಹೊರಡುವ ರೈಲಿನ ಸಮಯ ಪರಿಷ್ಕರಣೆ ಮಾಡಲಾಗಿದೆ. ಈ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು ಗಮನಿಸಬೇಕು.
ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಪ್ರಾಯೋಗಿಕ ನಿಲುಗಡೆಯನ್ನು ಮುಂದಿನ 06 ತಿಂಗಳ ಅವಧಿಗೆ ಮುಂದುವರಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ. ಇದರಿಂದ ಈ ಭಾಗದ ಪ್ರಯಾಣಿಕರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

* ಕೆಎಸ್‌ಆರ್ ಬೆಂಗಳೂರು ಹಜರತ್ ನಿಜಾಮುದ್ದೀನ್ ರಾಜಧಾನಿ ಡೈಲಿ ಎಕ್ಸ್‌ಪ್ರೆಸ್ ರೈಲು (22691) 2025 ಜುಲೈ 27ರಿಂದ ಯಾದಗಿರಿ ನಿಲ್ದಾಣದ ನಿಲುಗಡೆಯನ್ನು ಮುಂದುವರಿಸಲಿದೆ. ಅದೇ ರೀತಿ ಹಜರತ್ ನಿಜಾಮುದ್ದೀನ್ - ಕೆಎಸ್‌ಆರ್ ಬೆಂಗಳೂರು ರಾಜಧಾನಿ ಡೈಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22692) ಜುಲೈ 26 ರಿಂದ ಯಾದಗಿರಿಯಲ್ಲಿ ತನ್ನ ನಿಲುಗಡೆ ಮುಂದುವರಿಸಲಿದೆ.
ಈ ಪ್ರಾಯೋಗಿಕ ನಿಲುಗಡೆಯ ಮುಂದುವರಿಕೆಯು ಯಾದಗಿರಿ ಮತ್ತು ಸುತ್ತಮುತ್ತಲಿನ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ದೆಹಲಿ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ. ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ರೈಲು ಸಂಪರ್ಕ ಸಾಧ್ಯವಾದಂತಾಗುತ್ತದೆ.
ಹುಬ್ಬಳ್ಳಿ ಚೆನ್ನೈ ಎಕ್ಸ್ ಪ್ರೆಸ್'ನ ಸಮಯ ಪರಿಷ್ಕರಣೆ
* ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಸಂಚರಿಸುವ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17313) ರೈಲಿನ ಗುಂತಕಲ್ ನಿಲ್ದಾಣದ ಆಗಮನ ಮತ್ತು ನಿರ್ಗಮನ ಸಮಯವನ್ನು ದಕ್ಷಿಣ ಮಧ್ಯ ರೈಲ್ವೆಯು ಪರಿಷ್ಕರಿಸಿದೆ.
ಈ ರೈಲು, ಇದುವರೆಗೆ ಗುಂತಕಲ್ ನಿಲ್ದಾಣಕ್ಕೆ ಬೆಳಗಿನ ಜಾವ 03:00 ಗಂಟೆಗೆ ಆಗಮಿಸಿ, 03:05 ಗಂಟೆಗೆ ನಿರ್ಗಮಿಸುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, 2025 ಜುಲೈ 25 ರಿಂದ ಪ್ರಾರಂಭವಾಗುವ ಪ್ರಯಾಣದಿಂದ ಈ ರೈಲು ಗುಂತಕಲ್ ನಿಲ್ದಾಣಕ್ಕೆ 03:05 ಗಂಟೆಗೆ ಆಗಮಿಸಿ, 03:10 ಗಂಟೆಗೆ ನಿರ್ಗಮಿಸಲಿದೆ ಎಂದು ಪ್ರಕಟಣೆಯಲ್ಲಿ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications