Namo Trains: ಕರ್ನಾಟಕದ ಇಲ್ಲಿ ನಮೋ ರೈಲು, 10 ಮೆಮು ರೈಲು ಸಂಚಾರ?, ರೈಲ್ವೆ ಹೊಸ ಯೋಜನೆಗಳು
ಹುಬ್ಬಳ್ಳಿ , ಫೆಬ್ರವರಿ 04: ಕರ್ನಾಟಕ ರಾಜ್ಯ ರೈಲ್ವೆ ವ್ಯಾಪ್ತಿಯಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಯೋಜನೆಗಳು, ಹೊಸ ಮಾರ್ಗಗಳ ಸ್ಥಾಪನೆ, ಡಬಲಿಂಗ್ ಕೆಲಸಗಳಿಗೆ ವೇಗ ಸಿಕ್ಕಿದೆ. ರಾಜ್ಯದ ವಿವಿಧ ಮಾರ್ಗಗಳಲ್ಲಿ ಹೊಸದಾಗಿ 'ನಮೋ ರೈಲು (Namo Trains) ಹಾಗೂ ಮೆಮು ರೈಲು'ಗಳನ್ನು (MEmu Trains) ಓಡಿಸುವ ಉದ್ದೇಶ ರೈಲ್ವೆ ಇಲಾಖೆ ಹೊಂದಿದೆ. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ 51,479 ಕೋಟಿ ರೂ.ಮೀಸಲಿಡಲಾಗಿದೆ.
ಹೊಸ ರೈಲುಗಳು ಓಡಿಸುವ ಕುರಿತು ಅಧಿಕೃತ ಮಾಹಿತಿಯನ್ನು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಡಾ. ಮಂಜುನಾಥ ಕನಮಡಿ ಅವರು ತಿಳಿಸಿದರು. ಹೊಸ ಮಾರ್ಗ, ಡಬಲಿಂಗ್, ವರ್ಕ್ ಶಾಪ್‌ಗಳ ಅಭಿವೃದ್ಧಿ ಸೇರಿದಂತೆ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚು ಹಣ ಮೀಸಲಿಡಲಾಗಿದೆ.

ಭಾರತದ ಎಲ್ಲ ಭಾಗಗಳಲ್ಲಿ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಕಡಿಮೆ ಅಂತರವಿರುವ ಮಾರ್ಗಗಳ ನಡುವೆ 'ನಮೋ ರೈಲು' (Namo Train) ಓಡಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದರು.
ಕಡಿಮೆ ಅಂತರದ ಮಾರ್ಗದಲ್ಲಿ ನಮೋ ರೈಲು
ಕರ್ನಾಟಕದಲ್ಲಿ 100, 150, 200 ಕಿಲೋ ಮೀಟರ್ ಅಂತರಗಳ ರೈಲು ನಿಲ್ದಾಣಗಳ ಮಧ್ಯೆ 'ನಮೋ ರೈಲುಗಳನ್ನು' ಭವಿಷ್ಯದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ರಾಜ್ಯದ ಬೆಂಗಳೂರು-ಮೈಸೂರು ಸೇರಿ ವಿವಿಧ ಕಡಿಮೆ ಅಂತರದ ನಿಲ್ದಾಣಗಳ ಮಧ್ಯೆ ಈ ರೈಲುಗಳನ್ನು ಓಡಿಸುವ ಉದ್ದೇಶ ರೈಲ್ವೆ ಇಲಾಖೆ ಹೊಂದಿದೆ ಎಂದು ಹೇಳಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ರೈಲ್ವೆ ಯೋಜನೆಗಳಿಗೆಂದು 7,564 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಯುಪಿಎ ಸರ್ಕಾರದ ಅವಧಿಯ ಕೊನೇ ವರ್ಷದಲ್ಲಿ ನೀಡಿದ ಅನುದಾನಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಶೇಕಡಾ ರೈಲ್ವೆಗೆ ಅನುದಾನ ಶೇಕಡಾ 9 ಪಟ್ಟು ಅಧಿಕವಾಗಿ ಸಿಕ್ಕಿದೆ.

ಕರ್ನಾಟಕ ರೈಲ್ವೆಯಲ್ಲಿ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಸಾಮರ್ಥ್ಯ ದುರ್ಬಲಗೊಂಡಿರುವ ರೈಲು ಹಳಿಗಳನ್ನು ಹಂತ ಹಂತವಾಗಿ ಬದಲಾಯಿಸಲಾಗುತ್ತಿದೆ. ಮುಂದಿನ 4-5 ವರ್ಷಗಳಲ್ಲಿ ಎಲ್ಲೆಡೆ ಹೊಸ ಹಳಿಗಳನ್ನು ಅಳವಡಿಸಲಾಗುವುದು. ವಿದ್ಯುದೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 15 ಕಿಮೀ ಮಾತ್ರ ವಿದ್ಯುದೀಕರಣ ಕಾಮಗಾರಿ ನಡೆಯುತ್ತಿತ್ತು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಪ್ರತಿ ವರ್ಷ 300 ಕಿಮೀಗೂ ಹೆಚ್ಚು ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ 1,652 ಕಿಮೀ ಹೊಸ ರೈಲ್ವೆ ಮಾರ್ಗ
2014ರ ನಂತರ ಕರ್ನಾಟಕದಲ್ಲಿ 1,652 ಕಿಮೀ ಹೊಸ ರೈಲ್ವೆ ಮಾರ್ಗಗಳನ್ನು ಅಳವಡಿಸಲಾಗಿದೆ. ಇಡೀ ಶ್ರೀಲಂಕಾದ ವಿಸ್ತೀರ್ಣದಷ್ಟು ರೈಲ್ವೆ ಮಾರ್ಗ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ಆಗಿದೆ. ಹಲವಾರು ಹೊಸ ಮಾರ್ಗ ಸೇರಿದಂತೆ ನೂತನ ಯೋಜನೆಗಳನ್ನು ಕೈಗೊಳ್ಳಲಾಗುವುದು. ಇದಕ್ಕೆ ಬಜೆಟ್‌ನಲ್ಲಿಯೇ ಹಣ ಮೀಸಲಿಡಬೇ ಕು ಎಂಬುದೇನಿಲ್ಲ. ರೈಲ್ವೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸಿದ್ಧವಾಗಿರುತ್ತದೆ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಭಾರತದಲ್ಲಿ ಹೊಸ ಮಾರ್ಗ, ಡಬಲಿಂಗ್, ವರ್ಕ್ ಶಾಪ್‌ಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ 51,479 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ರಾಜ್ಯದ ರೈಲ್ವೆ ಮೂಲ ಸೌಲಭ್ಯಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಕರ್ನಾಟಕದಲ್ಲಿ 10 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ 100 ಹೊಸ ಅಮೃತ ಭಾರತ ಹಾಗೂ 200 ಹೊಸ ವಂದೇ ಭಾರತ್ ರೈಲುಗಳು ಸಂಚರಿಸಲಿವೆ ಎಂದು ಸಚಿವರು ಹೇಳಿದರು.
ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗ
ಬಳಿಕ ಮಾತನಾಡಿದ ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್, ಧಾರವಾಡ-ಬೆಳಗಾವಿ ನೂತನ ರೈಲು ಮಾರ್ಗಕ್ಕಾಗಿ ಸರ್ಕಾರ ಅಗತ್ಯ ಭೂಮಿ ಹಸ್ತಾಂತರ ಮಾಡುವುದು ಬಾಕಿ ಇದೆ. ಅಗತ್ಯ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಪ್ರಗತಿಯಲ್ಲಿದೆ. ಶೀಘ್ರವೇ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
ರಾಜ್ಯದ 10 ಮಾರ್ಗಗಳಲ್ಲಿ ಮೆಮು ರೈಲು
ಕರ್ನಾಟಕದ 10 ಮಾರ್ಗಗಳಲ್ಲಿ ಮೆಮು ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹುಬ್ಬಳ್ಳಿ-ಗೋವಾ ಮಧ್ಯದಘಟ್ಟ ಪ್ರದೇಶದಲ್ಲಿ ಡಬಲಿಂಗ್ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಪಿಂಕ್ ಬುಕ್ (ವಿವರ ಮಾಹಿತಿ ಪುಸ್ತಕ) ಕೈ ಸೇರಿದ ನಂತರ ಈ ಬಾರಿಯ ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ ನೀಡಿದ ಕೊಡುಗೆಗಳ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ ಎಂದು ಅಧಿಕಾರಿ ಕನಮಡಿ ಮಾಹಿತಿ ನೀಡಿದರು.












Click it and Unblock the Notifications