ಸಸ್ಪೆನ್ಸ್ ಆಗಿಯೇ ಉಳಿದ ವಿಪಕ್ಷ ನಾಯಕನ ಆಯ್ಕೆ; ಕೊನೆ ಕ್ಷಣದಲ್ಲಿ ಹೊಸ ಹೆಸರು, ಯಾರಿಗೆ ಚಾನ್ಸ್?
ಬೆಂಗಳೂರು, ಜುಲೈ 03: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಕಚ್ಚಾಟ ಜೋರಾಗಿದೆ. ಪಕ್ಷದ ಸೋಲಿನ ಕುರಿತು ಹಲವು ರೀತಿ ಚರ್ಚೆಗಳ ಜೊತೆಗೆ ಆರೋಪ ಪ್ರತ್ಯಾರೋಪ ಹೆಚ್ಚಾಗಿದ್ದು, ಇದೀಗ ವಿಪಕ್ಷ ನಾಯಕನ ಆಯ್ಕೆಯೇ ಹೈಕಮಾಂಡ್ ಗೆ ದೊಡ್ಡ ಸವಾಲಾಗಿದೆ.
ಹೌದು, ಕಾಂಗ್ರೆಸ್ ಸರ್ಕಾರ ಸೋಮವಾರದಿಂದ ಬಜೆಟ್ ಅಧಿವೇಶನವೂ ಪ್ರಾರಂಭವಾಗಿದೆ ಆದರೆ, ಮೂರು ವರ್ಷಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿ, ಸೋಲು ಅನುಭವಿಸಿದ ಬಿಜೆಪಿಗೆ ಇನ್ನು ಶಾಸಕಾಂಗ ಪಕ್ಷದ ನಾಯಕ ಸಿಕ್ಕಿಲ್ಲ. ವಿಪಕ್ಷ ನಾಯಕನ ಸ್ಥಾನ ಅಲಂಕರಿಸುವ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮತ್ತಷ್ಟು ಕಗ್ಗಂಟಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ವಿಪಕ್ಷ ನಾಯಕನ ಆಯ್ಕೆ ಮಾಡುವುದಾಗಿ ಬಿಜೆಪಿಯ ಹಿರಿಯ ನಾಯಕರು ಹೇಳಿದ್ರು, ಅದರಂತೆ ಅಧಿವೇಶನ ಒಳಗೆ ವಿಪಕ್ಷ ನಾಯಕರ ಆಯ್ಕೆಯಾಗುತ್ತೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಸುಳ್ಳಾಗಿದೆ.

ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ಸ್ಥಾನಕ್ಕಾಗಿ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒಲಿಯಬಹುದೆಂಬುದು ಒಂದು ಲೆಕ್ಕಾಚಾರವಿದೆ. ಆದರೆ, ಆಡಳಿತ ಪಕ್ಷವನ್ನು ಎದುರಿಸುವಂತಹ ಸಮರ್ಥ ವಿಪಕ್ಷ ನಾಯಕ ಬೇಕು ಎನ್ನುವ ಲೆಕ್ಕಾಚಾರ ಬಿಜೆಪಿ ಪಾಳಯಲ್ಲಿ ಶುರುವಾಗಿದೆ. ಇತ್ತ ಹೀನಾಯ ಸೋಲಿಗೆ ಈ ಹಿಂದೆ ಬಸವರಾಜ ಬೊಮ್ಮಾಯಿ ಕೊಟ್ಟ ಆಡಳಿತ ವೈಖರಿಯೇ ಕಾರಣ ಎಂಬ ಟೀಕೆ ಹೆಚ್ಚಾಗಿದ್ದು, ಬಿಜೆಪಿಗೆ ಬಸವರಾಜ ಬೊಮ್ಮಾಯಿ ಆಯ್ಕೆ ಅನಿವಾರ್ಯವಾಗಬಹುದು ಎನ್ನಲಾಗಿದೆ.
ಇತ್ತ ಆಡಳಿತದ ಪಕ್ಷದಲ್ಲಿರುವ ಕಾಂಗ್ರೆಸ್ ನಾಯಕರನ್ನ ಎದುರಿಸಲು ಬಿಜೆಪಿಯಲ್ಲಿ ಸಮರ್ಥ ನಾಯಕರ ಕೊರತೆ ಎದ್ದು ಕಾಣುತ್ತಿದ್ದು, ಬಸವರಾಜ ಬೊಮ್ಮಾಯಿ ಅವರನ್ನ ಹೊರತು ಪಡಿಸಿದರೇ ಪಕ್ಷ ನಿಷ್ಠರು ಹಾಗೂ ಮೂಲ ಬಿಜೆಪಿಗರಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅಥವಾ ಸುನಿಲ್ ಕುಮಾರ್ ಸಹ ರೇಸ್ ನಲ್ಲಿ ಇದ್ದಾರೆ. ಮಾಜಿ ಸಚಿವ ಡಾ ಸಿಎನ್ ಅಶ್ವತ್ಥ ನಾರಾಯಣ ಅವರ ಹೆಸರು ಕೂಡ ಕೇಳಿಬಂದಿದೆ. ಲಿಂಗಾಯತರಿಗೆ ಆದ್ಯತೆ ನೀಡಿದಲ್ಲಿ ಬಸವರಾಜ ಬೊಮ್ಮಾಯಿ ವಿಪಕ್ಷ ನಾಯಕನ ಹುದ್ದೆ ಅಲಂಕರಿಸಲಿದ್ದಾರೆ. ಇತರೆ ಸಮುದಾಯಗಳಿಗೆ ಆದ್ಯತೆ ನೀಡಬೇಕೆಂದರೆ ವಿ ಸುನಿಲ್ ಕುಮಾರ್ ಹೆಸರು ಮೊದಲಿದ್ದು, ಬಳಿಕ ಡಾ ಸಿಎನ್ ಅಶ್ವತ್ಥ ನಾರಾಯಣ ಅವರ ಹೆಸರಿದೆ.

ಇತ್ತ ವಿಪಕ್ಷ ನಾಯಕರ ಆಯ್ಕೆ ಸೇರಿದಂತೆ ಪಕ್ಷದ ನಾಯಕರ ಆರೋಪ ಹಾಗೂ ಪ್ರತ್ಯಾರೋಪಗಳ ವಿಚಾರವಾಗಿ ಜೆ ಪಿ ನಡ್ಡಾ ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ದೆಹಲಿಗೆ ಕರೆಸಿಕೊಂಡು ಮಾಹಿತಿಯನ್ನ ಕಲೆ ಹಾಕಿದೆ. ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಸಸ್ಪೆನ್ಸ್ ಮುಂದುವರೆದಿದ್ದು, ಪಕ್ಷದ ರಾಷ್ಟ್ರೀಯ ನಾಯಕರಾದ ವಿನೋದ್ ತಾವಡೆ ಮತ್ತು ಮನ್ಸುಖ್ ಮಾಂಡವಿಯಾ ಅವರು ವೀಕ್ಷಕರಾಗಿ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರಿಗೆ ವರದಿ ನೀಡಲಿದ್ದಾರೆ. ಅದನ್ನು ಆಧರಿಸಿ ಪ್ರತಿಪಕ್ಷ ನಾಯಕನ ಆಯ್ಕೆಗೆ ನಿರ್ಧರಿಸಲಾಗಿದೆ. ಸಂಜೆ 6ಕ್ಕೆ ಬಿಜೆಪಿಯ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಅಲ್ಲಿ ಈ ಬಗ್ಗೆ ಚರ್ಚೆ ನಡೆದು ಘೋಷಣೆ ಮಾಡುವ ಸಾಧ್ಯತೆಯಿದೆ.
ಇನ್ನೂ ಮಂಗಳವಾರ ಬೆಳಗ್ಗೆ ಶಾಸಕಾಂಗ ಪಕ್ಷದ ಸಭೆ ನಡೆಸಿ ನಾಯಕನ ಆಯ್ಕೆ ಬಗ್ಗೆ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ವಿಧಾನಮಂಡಲದ ಜಂಟಿ ಅಧಿವೇಶನ ಪ್ರಾರಂಭವಾದರೂ, ಕೇವಲ ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡುವುದರಿಂದ ಇತರ ಕಾರ್ಯಕಲಾಪಗಳು ಇರುವುದಿಲ್ಲ. ಹೀಗಾಗಿ, ಸೋಮವಾರ ಪ್ರತಿಪಕ್ಷದ ನಾಯಕ ಇರದಿದ್ದರೂ ನಡೆಯಲಿದೆ, ಆದರೆ, ಮಂಗಳವಾರದಿಂದ ಅಧಿವೇಶನದ ಅಧಿಕೃತ ಸದನ ಆರಂಭವಾಗುವುದರಿಂದ ವಿರೋಧ ಪಕ್ಷದ ನಾಯಕನನ್ನು ಘೋಷಿಸುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ.












Click it and Unblock the Notifications