Vinay Kulkarni: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು
Vinay Kulkarni: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಸಂಜಯ್ ಕರೋಲ್ ಅವರಿದ್ದ ಪೀಠವು ಈ ಆದೇಶವನ್ನು ಹೊರಡಿಸಿದೆ.

ಈ ಮೂಲಕ ದೀರ್ಘಕಾಲದಿಂದ ನ್ಯಾಯಾಂಗ ಹೋರಾಟ ನಡೆಸುತ್ತಿದ್ದ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾಮೀನು ನೀಡುವ ವೇಳೆ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದ್ದು, ವಿಚಾರಣೆಗೆ ಸಹಕರಿಸುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿದೆ. ಅಲ್ಲದೆ, ಎರಡು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ. ವಿನಯ್ ಕುಲಕರ್ಣಿ ಪರ ವಕೀಲ ಶರಣಗೌಡ ಪಾಟೀಲ್ ವಾದ ಮಂಡನೆ ಮಾಡಿದ್ಧಾರೆ.
ಪ್ರಕರಣದ ಹಿನ್ನೆಲೆ
ಈ ಘಟನೆ 2016ರ ಜೂನ್‌ನಲ್ಲಿ ನಡೆದಿದೆ. ಧಾರವಾಡ ನಗರದ ಜಿಮ್‌ವೊಂದರಲ್ಲಿ ಯೋಗೀಶ್ ಗೌಡ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಈ ಪ್ರಕರಣವು ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಆರಂಭದಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದರೂ, ನಂತರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತು. ತನಿಖೆ ವೇಳೆ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪದಡಿ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿತ್ತು. ಆರೋಪಗಳನ್ನು ಅವರು ನಿರಂತರವಾಗಿ ತಳ್ಳಿ ಹಾಕಿದ್ದಾರೆ.
ಈ ಪ್ರಕರಣದಲ್ಲಿ ಹಲವು ಬಾರಿ ಜಾಮೀನು ಅರ್ಜಿಗಳು, ನ್ಯಾಯಾಲಯದ ವಿಚಾರಣೆಗಳು, ವಿಚಾರಣಾ ಸ್ಥಳ ಬದಲಾವಣೆ ಸೇರಿದಂತೆ ಅನೇಕ ಕಾನೂನು ಪ್ರಕ್ರಿಯೆಗಳು ನಡೆದಿವೆ. ಈ ಮೂಲಕ ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿವಿಧ ರಾಜಕೀಯ ಪಕ್ಷಗಳ ನಾಯಕರಿಂದ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಸುಪ್ರೀಂ ಕೋರ್ಟ್‌ನ ಜಾಮೀನು ಆದೇಶದ ಬಳಿಕ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ
ಈ ಹಿಂದೆ ನೀಡಲಾಗಿದ್ದ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು ಇತ್ತೀಚೆಗೆ ಜನಪ್ರತಿನಿಧಿಗಳ ಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಿರುವ ಆರೋಪ ಅಡಿರಯಲ್ಲಿ ವಿನಯ್ ಕುಲಕರ್ಣಿ ಅವರ ಜಾಮೀನು ರದ್ದುಪಡಿಸಬೇಕೆಂದು ಸಿಬಿಐ ಕೋರಿತ್ತು. ಈ ಹಿನ್ನೆಲೆ ಅವರ ಜಾಮೀನು ರದ್ದುಪಡಿಸಲಾಗಿತ್ತು. ಅದನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡಿದ್ದರು.












Click it and Unblock the Notifications