ರಾಜಕೀಯ ಬದ್ಧವೈರಿ ಕುಮಾರಸ್ವಾಮಿಗೆ ಅಭಿನಂದನೆ ತಿಳಿಸಿದ ಸುಮಲತಾ
ಮಂಡ್ಯ, ಜೂನ್ 05: ಮಂಡ್ಯ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಮಂಡ್ಯ ಟಿಕೆಟ್ ಕೈ ತಪ್ಪಿದ್ದು, ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರ ಪರ ಚುನಾವಣಾ ಪ್ರಚಾರದಿಂದ ದೂರ ಉಳಿಸಿದ್ದರು. ಇದೀಗ ಹಾಲಿ ಸಂಸದ ಎಚ್ಡಿ ಕುಮಾರಸ್ವಾಮಿ ಅವರಿಗೆ ಸುಮಲತಾ ಅಂಬರೀಶ್ ಅಭಿನಂದನೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಾಜಿ ಸಂಸದೆ ಸುಮಲತಾ ಅಂಬರೀಶ್, ಮತಗಳು ಆಮಿಷ, ಮಾರಾಟಕ್ಕೆ ಇಲ್ಲ ಎಂದು ತೋರಿಸಿದ್ದಾರೆ. ಮತ ಮಾರಾಟಕ್ಕಿಲ್ಲ ಎಂದು ಮಂಡ್ಯದ ಜನತೆ ತೋರಿಸಿದ್ದಾರೆ. ಪುಕ್ಸಟ್ಟೆ ಭಾಗ್ಯಗಳ ಮೂಲಕ ಜನರನ್ನು ವಂಚಿಸಲು ಆಗಲ್ಲ. ಮಂಡ್ಯ ಜನತೆಗೆ ಮೋಸ ಮಾಡಲು ಆಗಲ್ಲವೆಂದು ಸಾಬೀತಾಗಿದೆ. ಆದ್ದರಿಂದ ಮಂಡ್ಯ ಜಿಲ್ಲೆಯ ಜನರಿಗೂ ಸಹ ಅಭಿನಂದನೆ. ಮೋದಿ ನಾಯಕತ್ವದಲ್ಲಿ ಕೆಲಸ ಮಾಡಲು ಆಯ್ಕೆಯಾದ ಮಂಡ್ಯದ ನೂತನ ಸಂಸದ ಕುಮಾರಸ್ವಾಮಿ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಬರೆದುಕೊಂಡು ಶುಭ ಹಾರೈಸಿದ್ದಾರೆ.

ಭಾರತದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ!
10 ವರ್ಷಗಳ ಐತಿಹಾಸಿಕ ಆಡಳಿತ, ಅಭಿವೃದ್ಧಿಯ ದಾಖಲೆಯೊಂದಿಗೆ ಭಾರತೀಯರು ಮತ್ತೊಮ್ಮೆ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಬಹುದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿ ಸತತವಾಗಿ 3ನೇ ಬಾರಿ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ ಎಂದು ಸುಮಲತಾ ತಿಳಿಸಿದ್ದಾರೆ.
ಆದರಣೀಯ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ, ನೀವು ಪ್ರತಿ ಭಾರತೀಯ ಹೃದಯಕ್ಕೆ ಐಕ್ಯತೆಯ ಮತ್ತು ಹೆಮ್ಮೆಯ ಸಂಕೇತವಾಗಿದ್ದೀರಿ. ನಮ್ಮ ದೇಶ ಮತ್ತು ಜನತೆಯು ನಿಮ್ಮ ಮೇಲೆ ಇಟ್ಟಿರುವ ಅಚಲವಾದ ಬದ್ಧತೆ ನಿಮ್ಮ ಅಭಿವೃದ್ಧಿ ಕಾರ್ಯಗಳ ಪ್ರತಿಬಿಂಬವಾಗಿದೆ. ಫಲಿತಾಂಶ ಅತ್ಯುತ್ತಮವಾಗಿಲ್ಲದಿದ್ದರೂ, ಇದು ಕಾರ್ಯಕರ್ತರು ಹಾಗೂ ಮುಖಂಡರ ಮತ್ತಷ್ಟು ಶ್ರಮ ಹಾಗೂ ಅವಲೋಕನಕ್ಕೆ ನಾಂದಿಯಾಗಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ.
ನೀವು ಅನನ್ಯವಾದ ಸ್ವಾರ್ಥವಿಲ್ಲದ ತ್ಯಾಗ, ಸಾಮಾಜಿಕ ಜೀವನ ಮತ್ತು ನಿಷ್ಠೆಗೆ ಮಾದರಿಯಾಗಿದ್ದೀರಿ. ಭಾರತವನ್ನು ಅಭಿವೃದ್ಧಿಯ ಹೊಸ ದಿಕ್ಕಿನತ್ತ ಸಾಗಿಸಲು ನಿಮ್ಮ ನಾಯಕತ್ವದ ಅವಶ್ಯಕತೆ ಸದಾ ನಮಗಿದೆ. ನಿಮ್ಮ ದೂರದರ್ಶಿ ಯೋಜನೆಗಳು ಈ ಮೂರನೇ ಅವಧಿಯಲ್ಲೂ ಮುಂದುವರಿಯಲಿ ಎಂದು ಸುಮಲತಾ ಹೇಳಿದ್ದಾರೆ.
140 ಕೋಟಿ ಭಾರತೀಯರು ಮತ್ತು ಪ್ರಪಂಚದಾದ್ಯಂತ ಪ್ರತಿ ಭಾರತೀಯರ ಆಕಾಂಕ್ಷೆಗಳ ಸಾಕಾರಕ್ಕಾಗಿ ನೀವು ಮತ್ತೆ ಪ್ರಧಾನಮಂತ್ರಿ ಆಗಿ ಆಯ್ಕೆಯಾಗಿರುವುದಕ್ಕೆ ಹಾರ್ದಿಕ ಅಭಿನಂದನೆಗಳು. ನಿಮ್ಮ ನಾಯಕತ್ವವು ನಿರಂತರವಾಗಿ ರಾಷ್ಟ್ರಹಿತಕ್ಕಾಗಿ ದುಡಿಯಲು ಪ್ರೇರೇಪಿಸುತ್ತದೆ.
ನೀವು ನಮ್ಮ ಪ್ರಧಾನಿ ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ. ನಿಜವಾದ ನಾಯಕ ಹೇಗಿರಬೇಕು ಎಂಬುದನ್ನು ಪ್ರಪಂಚಕ್ಕೆ ಸಾಬೀತುಪಡಿಸಿದಕ್ಕೆ ಮತ್ತೊಮ್ಮೆ ಅಭಿನಂದನೆಗಳು. ಪ್ರಧಾನಿಯಾಗಿ ಐತಿಹಾಸಿಕ ತೃತೀಯ ಅವಧಿಗೆ ನಿಮಗೆ ಶುಭ ಹಾರೈಕೆಗಳು ಎಂದು ಸುಮಲತಾ ಅವರು ತಿಳಿಸಿದ್ದಾರೆ.












Click it and Unblock the Notifications