ಖಾಸಗಿ ಶಾಲೆಗಳನ್ನ ಮುಚ್ಚಿಸುವುದು ನಮ್ಮ ಉದ್ದೇಶವಲ್ಲ, ಸರ್ಕಾರಿ ಶಾಲೆಗಳ ಬಲಪಡಿಸುವುದು ನಮ್ಮ ಆದ್ಯತೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ರಾಜ್ಯದಲ್ಲಿ ಸಣ್ಣ ಹಾಗೂ ಬಜೆಟ್ ಶಾಲೆಗಳು ಮುಚ್ಚುತ್ತಿವೆಯೇ? ಶಿಕ್ಷಣ ಕ್ಷೇತ್ರ ಕಾರ್ಪೊರೇಟ್ ಕುಳಗಳ ಪಾಲಾಗುತ್ತಿದೆಯೇ? ನಿಯಮಗಳ ಹೆಸರಿನಲ್ಲಿ ಖಾಸಗಿ ಶಾಲೆಗಳ ಕುತ್ತಿಗೆ ಹಿಸುಕಲಾಗುತ್ತಿದೆಯೇ? ಇದರ ಜೊತೆಗೆ ಶಿಕ್ಷಣ ಇಲಾಖೆಯ ಕಠಿಣ ನಿಯಮಗಳು ಹಾಗೂ ಅಧಿಕಾರಿಗಳ ಭ್ರಷ್ಟಾಚಾರವೇ ಇದಕ್ಕೆಲ್ಲ ಕಾರಣ ಎಂಬ ಆರೋಪಗಳು ಬೇರೆ.. ಹೀಗೆ ಶಿಕ್ಷಣ ಕ್ಷೇತ್ರದ ಸುತ್ತ ಸದ್ಯ ಗಿರಕಿ ಹೊಡೆಯುತ್ತಿರುವ ಇಂತಹ ಹತ್ತಾರು ಬಿಸಿಬಿಸಿ ಚರ್ಚೆಗಳಿಗೆ ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಖಡಕ್ ಉತ್ತರ ನೀಡಿದ್ದಾರೆ.
'ಖಾಸಗಿ ಶಾಲೆಗಳನ್ನ ಮುಚ್ಚಿಸುವುದು ಸರ್ಕಾರದ ಉದ್ದೇಶ ಖಂಡಿತಾ ಅಲ್ಲ, ಬದಲಾಗಿ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಹಾಗೂ ಸುರಕ್ಷಿತ ಶಿಕ್ಷಣ ಒದಗಿಸುವುದು ನಮ್ಮ ಪ್ರಮುಖ ಗುರಿ' ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಶಿಕ್ಷಣ ಇಲಾಖೆಯ ಸುತ್ತ ನಡೆಯುತ್ತಿರುವ ಚರ್ಚೆಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಒನ್ ಇಂಡಿಯಾ ಕನ್ನಡದೊಂದಿಗೆ ಮಾತನಾಡಿ ಉತ್ತರಿಸಿದ್ದಾರೆ. ಇಲಾಖೆಯ ಮೇಲಿರುವ ಆರೋಪಗಳನ್ನ ಸಾರಾಸಗಟಾಗಿ ತಳ್ಳಿಹಾಕಿದ ಸಚಿವರು, "ನಾನು ಅಧಿಕಾರ ವಹಿಸಿಕೊಂಡ ಮೇಲೆ ಖಾಸಗಿ ಶಾಲೆಗಳಿಗೆ ಇದ್ದ ಹಲವು ಕಠಿಣ ನಿಯಮಗಳನ್ನ ಸಡಿಲಿಸಿದ್ದೇನೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಶಾಲಾ ಕಟ್ಟಡ ಶಿಥಿಲಗೊಂಡಿದ್ದರೆ, ಕನಿಷ್ಠ 15 ವರ್ಷಗಳ ಬಾಡಿಗೆ ಒಪ್ಪಂದದೊಂದಿಗೆ ಹೊಸ ಆವರಣಕ್ಕೆ ಸ್ಥಳಾಂತರಗೊಳ್ಳಲು ಅವಕಾಶ ನೀಡಲಾಗಿದೆ. ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್ ಮೂಲಕ ಮಾಡಲಾಗಿದ್ದು, ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಹಾಕಲಾಗಿದೆ.
ಆದರೂ, ಮಕ್ಕಳಿಗೆ ಮೂಲಸೌಕರ್ಯ ಮತ್ತು ಸುರಕ್ಷತೆ ಒದಗಿಸುವುದು ಶಾಲೆಗಳ ಜವಾಬ್ದಾರಿ. ಕಠಿಣ ನಿಯಮಗಳನ್ನ ಗಾಳಿಗೆ ತೂರಿ ಶಾಲೆ ನಡೆಸಿದರೆ ಮಾತ್ರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು" ಎಂದು ಎಚ್ಚರಿಸಿದರು.
ಬಜೆಟ್ ಶಾಲೆಗಳು ಮುಚ್ಚಿ, ಶಿಕ್ಷಣ ಕ್ಷೇತ್ರವು ಸಂಪೂರ್ಣವಾಗಿ ಕಾರ್ಪೊರೇಟ್ ವಲಯದ ಹಿಡಿತಕ್ಕೆ ಸಿಲುಕುತ್ತಿದೆಯೇ ಎಂಬ ಕಳವಳಕ್ಕೆ ಉತ್ತರಿಸಿದ ಅವರು, "ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಶುಲ್ಕದ ಹೊರೆಯಾಗದಂತೆ ತಡೆಯಲು ಪ್ರತಿ ಗ್ರಾಮ ಪಂಚಾಯಿತಿಗೊಂದು 'ಕರ್ನಾಟಕ ಪಬ್ಲಿಕ್ ಸ್ಕೂಲ್' (KPS) ಆರಂಭಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ.
ಕೆಪಿಎಸ್ ಮೂಲಕ ಎಲ್.ಕೆ.ಜಿ ಯಿಂದ 12ನೇ ತರಗತಿಯವರೆಗೆ ಸಂಪೂರ್ಣ ಉಚಿತ ಹಾಗೂ ಖಾಸಗಿ ಶಾಲೆಗಳಿಗೆ ಸರಿಸಮಾನವಾದ ಮೂಲಸೌಕರ್ಯವುಳ್ಳ ಶಿಕ್ಷಣ ನೀಡಲಾಗುವುದು. ಪ್ರತಿ ಶಾಲೆಯಲ್ಲಿ 1,200ಕ್ಕೂ ಹೆಚ್ಚು ಮಕ್ಕಳಿಗೆ ದಾಖಲಾತಿ ಅವಕಾಶವಿರುತ್ತದೆ.
ಒಂದು ವೇಳೆ ಸಣ್ಣ ಖಾಸಗಿ ಶಾಲೆಗಳು ಮುಚ್ಚಿ, ಅಲ್ಲಿನ ವಿದ್ಯಾರ್ಥಿಗಳು ಬೀದಿಗೆ ಬೀಳುವ ಆತಂಕವಿದ್ದರೆ, ಆ ಮಕ್ಕಳು ಕೆಪಿಎಸ್ ಅಥವಾ ಸರ್ಕಾರಿ ಶಾಲೆಗಳಿಗೆ ವರ್ಷದ ಯಾವುದೇ ಸಮಯದಲ್ಲಿ ಬೇಕಾದರೂ ಸೇರಬಹುದು. ಯಾವುದೇ ಒಂದು ಮಗು ಕೂಡ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಲು ನಮ್ಮ ವ್ಯವಸ್ಥೆ ಸಜ್ಜಾಗಿದೆ" ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳಿಗೆ ಕೋವಿಡ್ ನಂತರ ಎದುರಾಗಿರುವ ಆರ್ಥಿಕ ಸಂಕಷ್ಟ ಹಾಗೂ ಆರ್.ಟಿ.ಇ ಮರುಪಾವತಿ ವಿಳಂಬದ ಬಗ್ಗೆಯೂ ಮಧುಬಂಗಾರಪ್ಪ ಅವರು ಪ್ರತಿಕ್ರಿಯಿಸಿದರು. "ಖಾಸಗಿ ಶಾಲೆಗಳ ವಾಸ್ತವಿಕ ಕಷ್ಟ ನಮಗೆ ಅರ್ಥವಾಗುತ್ತದೆ. ಆರ್.ಟಿ.ಇ ಬಾಕಿಯನ್ನ ನಿಯಮಾನುಸಾರ ಪರಿಶೀಲಿಸಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.
ಆದರೆ, ಸರ್ಕಾರದ ಹಣದಿಂದ ಖಾಸಗಿ ಶಾಲೆಗಳಿಗೆ ಆರ್ಥಿಕ ಶಕ್ತಿ ತುಂಬುವುದು ನಮ್ಮ ನೀತಿಯಲ್ಲ. ನಮ್ಮ ಸಂಪೂರ್ಣ ಗಮನ ಏನಿದ್ದರೂ ಸರ್ಕಾರಿ ಶಾಲೆಗಳನ್ನ ಬಲಪಡಿಸುವತ್ತ ಇದೆ" ಎಂದು ಹೇಳಿದರು.
ಕೊನೆಯದಾಗಿ, ಪೋಷಕರು ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳತ್ತ ಹೆಚ್ಚು ಒಲವು ತೋರುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, "ರಾಜ್ಯ ಪಠ್ಯಕ್ರಮದ ಬಗ್ಗೆ ಪೋಷಕರು ಯಾವುದೇ ಕೀಳರಿಮೆ ಬೆಳೆಸಿಕೊಳ್ಳಬೇಕಿಲ್ಲ. ಏಕೆಂದರೆ ಭಾಷಾ ವಿಷಯ ಮತ್ತು ಸಮಾಜ ವಿಜ್ಞಾನ ಹೊರತುಪಡಿಸಿ, ಉಳಿದೆಲ್ಲಾ ವಿಷಯಗಳನ್ನ ರಾಷ್ಟ್ರೀಯ ಮಟ್ಟದ ಪಠ್ಯಕ್ರಮಕ್ಕೆ ಸರಿಸಮಾನವಾಗಿ ಉನ್ನತೀಕರಿಸಲಾಗಿದೆ.
ಈ ಬಾರಿಯ ಸಿಇಟಿ(CET) ಫಲಿತಾಂಶವೇ ನಮ್ಮ ಪಠ್ಯಕ್ರಮದ ತಾಕತ್ತನ್ನು ತೋರಿಸಿದೆ. ಇಂಜಿನಿಯರಿಂಗ್ ವಿಭಾಗದ ಟಾಪ್ 10 ರ‍್ಯಾಂಕ್‌ಗಳಲ್ಲಿ 9 ರ‍್ಯಾಂಕ್, ಹಾಗೂ ಕೃಷಿ ವಿಭಾಗದ ಎಲ್ಲಾ 10 ಅಗ್ರ ರ‍್ಯಾಂಕ್‌ಗಳನ್ನು ನಮ್ಮ ರಾಜ್ಯ ಪಠ್ಯಕ್ರಮವನ್ನಾ ಓದಿದ ವಿದ್ಯಾರ್ಥಿಗಳೇ ಮುಡಿಗೇರಿಸಿಕೊಂಡಿದ್ದಾರೆ. ಮೊದಲ 100 ರ‍್ಯಾಂಕ್‌ಗಳಲ್ಲಿ 79 ರ‍್ಯಾಂಕ್ ನಮ್ಮವರದ್ದೇ ಸಾಧನೆ. ಮುಂದಿನ ದಿನಗಳಲ್ಲಿ ರಾಜ್ಯ ಪಠ್ಯಕ್ರಮದ ಗುಣಮಟ್ಟ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.


Click it and Unblock the Notifications
