ಬ್ರ್ಯಾಂಡ್ ಆಗಿರುವ ಬೆಂಗಳೂರನ್ನು ಬ್ಯಾಡ್ ಬೆಂಗಳೂರು ಮಾಡುವ ಕುತಂತ್ರ: ಬಿಜೆಪಿ ಟೀಕೆ
ಬೆಂಗಳೂರು, ಅಕ್ಟೋಬರ್ 26: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮಹತ್ವಕಾಂಕ್ಷಿ ಬ್ರ್ಯಾಂಡ್ ಆಗಿರುವ ಬೆಂಗಳೂರು ಯೋಜನೆಯನ್ನು ಬ್ಯಾಡ್ ಯೋಜನೆ ಎಂದು ಬಿಜೆಪಿ ಟೀಕಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿರುವ ಬಿಜೆಪಿ, ಸಂಪದ್ಭರಿತವಾಗಿದ್ದ ಕರ್ನಾಟಕವನ್ನು ಭರಪೂರವಾಗಿ ಲೂಟಿ ಹೊಡೆಯಲೆಂದೇ ರಾಜ್ಯದ ಜನತೆಯ ಕಿವಿ ಮೇಲೆ ಕಲರ್ ಕಲರ್ ಹೂವಿಟ್ಟು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ಒಂದು ಹಗಲು ದರೋಡೆ, ಇದು ಈಗಾಗಲೇ "ಬ್ರ್ಯಾಂಡ್" ಆಗಿರುವ ಬೆಂಗಳೂರನ್ನು "ಬ್ಯಾಡ್ ಬೆಂಗಳೂರು" ಮಾಡುವ ಕುತಂತ್ರ ಎಂದು ಟೀಕಿಸಿದೆ.

ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರಿನಾದ್ಯಂತ ಪಿಕ್‌ನಿಕ್ ಮಾಡುವ ಡಿಸಿಎಂ ಡಿಕೆ ಶಿವಕುಮಾರ್ ಅವರು, ಬೆಂಗಳೂರಿನ ಬ್ರ್ಯಾಂಡ್ ಕುಗ್ಗಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆಯೇ ಹೊರತು, ಅವರ ಬ್ರ್ಯಾಂಡ್ ಬೆಂಗಳೂರು ಯೋಜನೆಯಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿಗರಿಗೆ ನಯಾಪೈಸೆ ಲಾಭವಿಲ್ಲ, ಬದಲಿಗೆ ನಷ್ಟವೇ ಅಧಿಕ ಎಂದು ಬಿಜೆಪಿ ಆರೋಪಿಸಿದೆ.
ಅಸಲಿಗೆ ಬ್ರ್ಯಾಂಡ್ ಬೆಂಗಳೂರಿಗೆ ಡಿಸಿಎಂ ಡಿ. ಕೆ. ಶಿವಕುಮಾರ್ ಘೋಷಿಸುತ್ತಿರುವ ಯೋಜನೆಗಳೆಲ್ಲವೂ ನಗರವನ್ನು ಬೇಕಾಬಿಟ್ಟಿಯಾಗಿ ಲೂಟಿ ಮಾಡುವ ಯೋಜನೆಗಳಾಗಿವೆ. ಆ ಎಲ್ಲಾ ಯೋಜನೆಗಳು ಕಾರ್ಯಗತವಾದರೆ ಅದರ ಲಾಭಾರ್ಥಿಗಳು ಕೇವಲ ಡಿ. ಕೆ. ಶಿವಕುಮಾರ್ ಮತ್ತವರ ಪಟಾಲಂ.
ಡಿ. ಕೆ. ಶಿವಕುಮಾರ್ ಅವರು ಈ ಐದು ತಿಂಗಳಲ್ಲಿ ಪಟಾಲಂ ಕಟ್ಟಿಕೊಂಡು ನಗರವನ್ನು ಐದಾರು ಬಾರಿ ತಿರುಗಿದ್ದಾರೆಯೇ ಹೊರತು, ಇದುವರೆಗೂ ನಗರದ ಅಭಿವೃದ್ಧಿಗೆ ನೀಲನಕ್ಷೆ ತಯಾರಿಸಲು ಸಾಧ್ಯವಾಗಿಲ್ಲ. ಇದು ಡಿ. ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಯಾವುದೇ ಪ್ರಾಮಾಣಿಕ ಕಾಳಜಿ ಇಲ್ಲ ಎಂಬುದರ ಸೂಚಕ ಎಂದು ಹೇಳಿದೆ.
ಬೆಂಗಳೂರಿನಲ್ಲಿ 190 ಕಿ.ಮೀ ಉದ್ದದ, ₹85,000 ಕೋಟಿ ವೆಚ್ಚದ ಸುರಂಗ ನಿರ್ಮಾಣವನ್ನು ಬಿ.ಬಿ.ಎಂ.ಪಿ. ಯಿಂದ ನಿರ್ಮಿಸುತ್ತಾರಂತೆ. ಇದು ಅನಾಯಾಸವಾಗಿ ಒಂದಷ್ಟು ಸುರಂಗ ತೋಡುವ ಕಂಪನಿಗಳಿಂದ ಅಡ್ವಾನ್ಸ್ ಕಮಿಷನ್ ಪಡೆಯುವ ಯೋಜನೆ ಹೊರತು ಮತ್ತೇನಲ್ಲ. ಈಗಾಗಲೇ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಅನುದಾನ ಇಲ್ಲ, ಪೌರ ಕಾರ್ಮಿಕರಿಗೆ ಸಂಬಳ ಸಹ ಕೊಡಲು ಸರ್ಕಾರದ ಬಳಿ ಹಣವಿಲ್ಲ, ಅಂತಹದರಲ್ಲಿ ಈಗ ಸುರಂಗ ಮಾರ್ಗ ಮಾಡುತ್ತೇವೆಂದು ಹೇಳುತ್ತಿರುವುದು ಜನತೆಯ ಕಿವಿ ಮೇಲೆ ಇಡುತ್ತಿರುವ ಮತ್ತೊಂದು ಹೂವು ಎಂದು ವ್ಯಂಗ್ಯವಾಡಿದೆ.
ಇನ್ನು ಬೆಂಗಳೂರಿನ ಅರ್ಕಾವತಿ ಮತ್ತು ಕುಮುದ್ವತಿ ನದಿ ಪಾತ್ರದ ಬಫರ್ ಜೋನ್‌ಗಳನ್ನು ಶೇಕಡ 50 ರಷ್ಟು ಕಡಿಮೆ ಮಾಡಲು ಹೊರಟಿರುವ ಯೋಜನೆ ಸಹ ಡಿಸಿಎಂ ಡಿ. ಕೆ. ಶಿವಕುಮಾರ್ ತಮ್ಮ ಜೇಬನ್ನು ತುಂಬಿಸಿಕೊಳ್ಳಲು ಹೊರಟಿರುವ ಮತ್ತೊಂದು ಯೋಜನೆ. ಈಗಾಗಲೇ ಬಫರ್ ಜೋನ್‌ಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಲೇಔಟ್‌ಗಳು, ಕಟ್ಟಡಗಳನ್ನು ಅಧಿಕೃತ ಮಾಡಿ, ಭೂಗಳ್ಳರಿಗೆ, ಲ್ಯಾಂಡ್ ಮಾಫಿಯಾದವರಿಗೆ ಬೆಂಗಳೂರನ್ನು ಬರೆದು ಕೊಡುವ ಹೊಸ ಮಾರ್ಗ ಎಂದು ಆರೋಪಿಸಿದೆ.
ಬೆಂಗಳೂರಿನ 10 ಎಕರೆ ಪ್ರದೇಶದಲ್ಲಿ ಸ್ಕೈಡೆಕ್ ನಿರ್ಮಾಣ ಮಾಡಲು ಹೊರಟಿರುವುದು ಸಹ, ಸಾರ್ವಜನಿಕರ ತೆರಿಗೆ ಹಣವನ್ನು ಮನಸೋಯಿಚ್ಛೆ ಪೋಲು ಮಾಡಿ, ಮತ್ತೊಂದಿಷ್ಟು ಕಮಿಷನ್ ಹಾಗೂ ಬೆಲೆಬಾಳುವ ಜಾಗವನ್ನು ಹೊಡೆಯುವ ಯೋಜನೆ. ಇದರಿಂದ ಬೆಂಗಳೂರು ನಗರದ ಮೂಲಭೂತಸೌಕರ್ಯಕ್ಕೆ ನಯಾಪೈಸೆ ಸಹಕಾರಿಯಲ್ಲ. ಇದು ಬೆಂಗಳೂರು ನಗರವನ್ನು ಅಂದಗಾಣಿಸುವ ಯೋಜನೆಯಲ್ಲ, ಬದಲಿಗೆ ಬೆಂಗಳೂರು ನಗರದ ಸೌಂದರ್ಯವನ್ನು ಮತ್ತು ಈಗಾಗಲೇ ಇರುವ ಮೂಲಸೌಕರ್ಯಗಳನ್ನು ಹಾಳು ಮಾಡುವ ಯೋಜನೆ ಎಂದು ಟೀಕಿಸಿದೆ.
ಇದೆಲ್ಲಕ್ಕಿಂತ ಅಚ್ಚರಿಯೆಂದರೆ, ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತಿರುವುದು, ಇದರಲ್ಲಿ ಕನಕಪುರದ ಜನರ ಹಿತದೃಷ್ಟಿಗಿಂತ ಡಿ. ಕೆ. ಶಿವಕುಮಾರ್ ಅವರ ಸ್ವಾರ್ಥವೇ ಎದ್ದು ಕಾಣುತ್ತಿದೆ. "ರಿಪಬ್ಲಿಕ್ ಆಫ್ ಕನಕಪುರ" ಹೆಸರಿನಲ್ಲಿ ಬಹುತೇಕ ಕನಪುರವನ್ನೇ ಬೇನಾಮಿ ಹೆಸರಿನಲ್ಲಿ ಡಿಕೆ ಸಹೋದರರು ಖರೀದಿಸಿದ್ದಾರೆಂಬುದು ಕನಕಪುರದ ಪ್ರತಿ ಬಂಡೆಗಳಲ್ಲಿಯೂ ಕೇಳಿ ಬರುತ್ತಿರುವ ಪಿಸು ಪಿಸು-ಗುಸು ಗುಸು.
ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸ ಹೊರಟಿರುವುದು ಸಹ ತಮ್ಮ ಆಸ್ತಿ ಮೌಲ್ಯವನ್ನು ಹೆಚ್ಚಿಸಿಕೊಳ್ಳುವುದಲ್ಲದೆ ಮತ್ತೇನು..?? ಒಟ್ಟಿನಲ್ಲಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಯಾವುದೇ ಯೋಜಿತ ಹೊಸ ಚಿಂತನೆಯಿಲ್ಲದೆ, ರಿಯಲ್ ಎಸ್ಟೇಟ್ ಹಾಗೂ ಲ್ಯಾಂಡ್ ಮಾಫಿಯಾದವರ ಕೈಗೊಂಬೆಯಾಗಿ ಅದಕ್ಕೆ ಬ್ರ್ಯಾಂಡ್ ಬೆಂಗಳೂರು ಎಂಬ ಮುಖವಾಡ ತೊಟ್ಟಿದ್ದಾರೆ. ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರನ್ನು ಇನ್ನೆಷ್ಟು "ಬ್ಯಾಡ್" ಮಾಡುತ್ತಾರೆಂಬುದೇ ಸದ್ಯ ಬೆಂಗಳೂರಿನ ನಿವಾಸಿಗಳಲ್ಲಿ ಮಡುಗಟ್ಟಿರುವ ಭಯ ಎಂದು ಬಿಜೆಪಿ ಶಂಕಿಸಿದೆ.












Click it and Unblock the Notifications