Sting Operation, ತಪ್ಪುಗಳು ಆಗಿರಬಹುದು! ಆ ಬಗ್ಗೆ ಬಹಿರಂಗ ಚರ್ಚೆ ಬೇಡ! ಮೌನವೇ ಉತ್ತಮ: ಪರಮೇಶ್ವರ್ ಹೀಗಂದಿದ್ದೇಕೆ?

Karnataka Sting Operation Row,: ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರ ತೆ ಪಡೆದುಕೊಳ್ಳುತ್ತಲೇ ಇದೆ. ಇದೀಗ ಪ್ರತಿಕ್ರಿಯಿಸಿದ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರು, 'ಸಾರ್ವಜನಿಕ ಜೀವನದಲ್ಲಿ ತಪ್ಪುಗಳು ಆಗಿರಬಹುದು. ಈ ಹಿಂದೆ ಇಂತಹ ಘಟನೆಗಳು ನಡೆದಿರಬಹುದು. ಆದರೆ ಈ ಮಟ್ಟಕ್ಕೆ ಪರಿಸ್ಥಿತಿ ತಲುಪಿರುವುದು ಸರಿಯಲ್ಲ' ಎನ್ನುವ ಮೂಲಕ ನಡೆದ ಬೆಳವಣಿಗೆ, ಕೇಳಿ ಬರುತ್ತಿರುವ ಆರೋಪಗಳನ್ನು ಪರಮೇಶ್ವರ್ ಪರೋಕ್ಷವಗಿ ಒಪ್ಪಿಕೊಂಡಂತಿದೆ.

ಇಂದು ಸೋಮವಾರ ಬೆಂಗಳೂರಿನಲ್ಲಿ ಸ್ಟಿಂಗ್ ಆಪರೇಷನ್ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, 'ಸ್ಟಿಂಗ್ ಆಪರೇಷನ್ ವಿವಾದ ಉತ್ತಮ ಬೆಳವಣಿಗೆಯಲ್ಲ' ಕೇಂದ್ರ ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ವ್ಯಕ್ತಿತ್ವ, ಸ್ಥಾನಮಾನ ಹಾಗೂ ತಮ್ಮ ಹೇಳಿಕೆಗಳು ಉಂಟುಮಾಡುವ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎಂದು ಸ್ಟಿಂಗ್ ಬಗ್ಗೆ ನಿರಂತರವಾಗಿ ಹೇಳಿಕೆ ನೀಡುತ್ತಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಕುರಿತು ಮಾತನಾಡಿದರು.

Sting Operation Row

'ಸಾರ್ವಜನಿಕ ಜೀವನದಲ್ಲಿ ತಪ್ಪುಗಳು ಆಗಿರಬಹುದು. ಈ ಹಿಂದೆ ಇಂತಹ ಘಟನೆಗಳು ನಡೆದಿರಬಹುದು. ಆದರೆ ಈ ಮಟ್ಟಕ್ಕೆ ಪರಿಸ್ಥಿತಿ ತಲುಪಿರುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ಬಗ್ಗೆ ಯೋಚಿಸಬೇಕು. ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಹಾಗೂ ಅಧಿಕಾರದಲ್ಲಿರುವವರನ್ನು ಒಳಗೊಂಡು ನಡೆಯುತ್ತಿರುವ ಈ ರೀತಿಯ ಸಾರ್ವಜನಿಕ ಆರೋಪ-ಪ್ರತ್ಯಾರೋಪಗಳು ಅಸಹ್ಯಕರ ಪರಿಸ್ಥಿತಿಗೆ ಕಾರಣವಾಗುತ್ತವೆ' ಎಂದು ಅವರು ಅಭಿಪ್ರಾಯಪಟ್ಟರು.

ಸಾರ್ವಜನಿಕವಾಗಿ ಚರ್ಚಿಸಬಾರದು! ಪರಮೇಶ್ವರ್

'ಸ್ಟಿಂಗ್‌ ವಿವಾದದ ಕುರಿತು ಪ್ರತಿಯೊಬ್ಬರೂ ಒಂದೊಂದು ಹೇಳಿಕೆ ನೀಡುತ್ತಾ ಹೋದರೆ ಅದು ಎಲ್ಲಿಗೆ ತಲುಪುತ್ತದೆ ಎಂಬುದನ್ನು ಯೋಚಿಸಬೇಕು. ಹೀಗಾಗಿ ಇಂತಹ ವಿಚಾರಗಳನ್ನು ಸಾರ್ವಜನಿಕವಾಗಿ ಹೆಚ್ಚು ಚರ್ಚಿಸುವುದು ಸೂಕ್ತವಲ್ಲ. ಈ ವಿಷಯದಲ್ಲಿ ಹೆಚ್ಚಿನ ಪ್ರತಿಕ್ರಿಯೆ ನೀಡುವುದಕ್ಕಿಂತ ಸುಮ್ಮನಿರುವುದೇ ಉತ್ತಮ' ಎಂದು ಹೇಳಿದರು.

ಸರ್ಕಾರದ ವರ್ಚಸ್ಸಿಗೆ ಧಕ್ಕೆ: ಡಿಸಿಎಂ ಕಳವಳ

ಸ್ಟಿಂಗ್ ಆಪರೇಷನ್ ವಿವಾದದಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಗೌರವವನ್ನು ಯಾವ ರೀತಿಯಲ್ಲಿ ಕಾಪಾಡಬೇಕು ಮತ್ತು ಜನಸಮುದಾಯಕ್ಕೆ ಸತ್ಯಾಂಶಗಳನ್ನು ಹೇಗೆ ತಿಳಿಸಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಸರ್ಕಾರದ ಎಲ್ಲರೂ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದರು.

ಯಾರಾದರೂ ಆರೋಪ ಮಾಡಿದ ತಕ್ಷಣ ಮತ್ತೊಬ್ಬರು ಪ್ರತಿಕ್ರಿಯಿಸುವುದು ಸೂಕ್ತವಲ್ಲ. ದೇಶದಲ್ಲಿ ಕಾನೂನು ವ್ಯವಸ್ಥೆಯಿದ್ದು, ಕಾನೂನಿನ ಚೌಕಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳಲಾಗುತ್ತದೆ. ಈ ಸಂಬಂಧ ಗೃಹ ಸಚಿವರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗಳೂ ಈ ಕುರಿತು ಮಾತನಾಡಿದ್ದಾರೆ. ಸರ್ಕಾರವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ದಲಿತ ನಾಯಕ ಸಿಎಂ? ಪರಂ ಹೇಳಿದ್ದೇನು

ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆಯಲ್ಲಿ ಇದೇ ಅವಧಿಯಲ್ಲಿ ದಲಿತ ಸಮುದಾಯದ ನಾಯಕರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸುವ ಸಾಧ್ಯತೆಗಳಿವೆ ಎಂಬ ಚರ್ಚೆ ಹಾಗೂ ಪರಮೇಶ್ವರ, ಪ್ರಿಯಾಂಕ್ ಖರ್ಗೆ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರುಗಳ ಪ್ರಸ್ತಾಪದ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಅಂತಹ ಯಾವುದೇ ಮಾಹಿತಿ ತಮ್ಮ ಬಳಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ದಲಿತ ನಾಯಕ ಸಿಎಂ ಎಂಬುದರ ಬಗ್ಗೆ ಪಕ್ಷದ ಹೈಕಮಾಂಡ್ ಯಾರೊಂದಿಗೆ ಮಾತನಾಡಿದೆ? ಯಾರಿಗೆ ಈ ಮಾಹಿತಿ ಇದೆ? ನನಗೇ ತಿಳಿಯದ ವಿಚಾರ ಮಾಧ್ಯಮದವರಿಗೆ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದರು. ಯಾವುದೇ ಚರ್ಚೆಗೆ ಕನಿಷ್ಠ ಆಧಾರವಾದರೂ ಇರಬೇಕು. ಆಧಾರವಿಲ್ಲದ ವಿಚಾರಗಳನ್ನು ಹುಟ್ಟುಹಾಕುವುದು ಸರಿಯಲ್ಲ ಎಂದು ತಿಳಿಸಿದರು.

2028ರಲ್ಲಿ ಎಚ್‌ಡಿಕೆ ಸಿಎಂ: ಈಗಲೇ ಹೇಳಲು ಆಗಲ್ಲ

2028ರಲ್ಲಿ ಯಾರು ಅಧಿಕಾರಕ್ಕೆ ಬರಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ಮರಳುವ ಹಾಗೂ 2028ರಲ್ಲಿ ಅಧಿಕಾರಕ್ಕೆ ಬರುವ ಕುರಿತು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, 2028ರಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದನ್ನು ಈಗಲೇ ಯಾರೂ ಹೇಳಲು ಸಾಧ್ಯವಿಲ್ಲ. ಅದನ್ನು ನಿರ್ಧರಿಸುವುದು ರಾಜ್ಯದ ಜನತೆ ಎಂದು ಹೇಳಿದರು.

ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ರಾಜಕೀಯಕ್ಕೆ ಮರಳಲು ಬಯಸಿದರೆ ಅವರನ್ನು ತಡೆಯುವವರು ಯಾರು? ಬೇಕಿದ್ದರೆ ನಾಳೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ರಾಜಕೀಯದಲ್ಲಿ ಸಕ್ರಿಯರಾಗಬಹುದು. ರಾಜಕೀಯದಲ್ಲಿ ಯಾರನ್ನೂ ಯಾರೂ ತಡೆಯಲು ಸಾಧ್ಯವಿಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+