ಸ್ಟಿಂಗ್ ಆಪರೇಷನ್: ಮೂರು ಕಾಸಿಗೆ ಹರಾಜಾದ ರಾಜ್ಯ ಶಾಸಕರ ಮರ್ಯಾದೆ!

Written By:
Subscribe to Oneindia Kannada

ಹಣ ನೋಡಿದರೆ ಹೆಣವೂ ಬಾಯಿ ಬಿಡುತ್ತೆ ಎನ್ನುವ ಕಾಲವಿದು, ಹಾಗಿರುವಾಗ 'ಕುದುರೆ ವ್ಯಾಪಾರ' ನಡೆಸಲು ಭರ್ಜರಿ ಅವಕಾಶ ಹುಟ್ಟುಹಾಕಿರುವ ರಾಜ್ಯಸಭಾ ಚುನಾವಣೆಯ ಅವಕಾಶವನ್ನು ರಾಜಕಾರಣಿಗಳು ಬಿಡ್ತಾರಾ?

ಚುನಾವಣೆಯ ವೇಳೆ ಹಣ, ಹೆಂಡಕ್ಕಾಗಿ ತಮ್ಮ ಅಮೂಲ್ಯ ಮತಗಳನ್ನು ಮಾರಿಕೊಳ್ಳುವ ಮತದಾರರಿಗೂ, ಬಹುಮತ ಸಾಬೀತು ಪಡಿಸುವ ಸಮಯದಲ್ಲಿ ಹಣದ ಬೇಡಿಕೆಯಿಡುವ ಇಂತಹ ಜನಪ್ರತಿನಿಧಿಗಳ ನಡುವೆ ಏನಿದೆ ವ್ಯತ್ಯಾಸ?

ಹಣದ ಹಿಂದೆ ಬಿದ್ದ ಇಂತಹ ಕೆಲವು ರಾಜಕೀಯ ಮುಖಂಡರಿಂದ, ಇಡೀ ರಾಜಕೀಯ ವ್ಯವಸ್ಥೆಯನ್ನೇ ಸಂಶಯ ದೃಷ್ಟಿಯಿಂದ ನೋಡುವಂತಾಗಿದೆ. ನಿಯತ್ತಿನ ರಾಜಕಾರಣಿಗಳಿಗೂ ಬೆಲೆಯಿಲ್ಲದಂತಾಗಿದೆ.

ರಾಜ್ಯಸಭಾ ಚುನಾವಣೆಯ ಹೊಸ್ತಿಲಲ್ಲಿ ಇಂಡಿಯಾ ಟುಡೇ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ರಾಜ್ಯದ ನಾಲ್ವರು ಶಾಸಕರು ಮತಕ್ಕಾಗಿ ಕೋಟಿ ಕೋಟಿ ಹಣದ ಆಮಿಷವೊಡ್ಡಿರುವ 'ದುರಂತಕಾರಿ' ದೃಶ್ಯಾವಳಿಗಳು ರೆಕಾರ್ಡ್ ಆಗಿದೆ.

ಕ್ರಾಸ್ ವೋಟಿಂಗ್ ಆಗುವ ಸಾಧ್ಯತೆಯಿದೆ ಎನ್ನುವ ಗುಪ್ತಚರ ವರದಿಯ ಬೆನ್ನಲ್ಲೇ, ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಹಿರಂಗಗೊಂಡಿರುವುದರಿಂದ, ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಶಾಸಕರುಗಳನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಲು ರೆಸಾರ್ಟ್ ರಾಜಕಾರಣದ ಮೊರೆಹೋದರೂ ಆಶ್ಚರ್ಯ ಪಡಬೇಕಾಗಿಲ್ಲ.

ನಮ್ಮಲ್ಲಿ ಐವರು ಅತೃಪ್ತರಿದ್ದರೆ, ನಿಮ್ಮಲ್ಲಿ ಐವತ್ತು ಶಾಸಕರಿದ್ದಾರೆ, ಅವರೆಲ್ಲರೂ ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ನೀಡಿದ್ದ ಹೇಳಿಕೆಯ ಒಳಮರ್ಮ ಏನಿರಬಹುದು ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

ಸ್ಟಿಂಗ್ ಆಪರೇಷನ್ ನಲ್ಲಿ ಸಿಕ್ಕಿಬಿದ್ದಿರುವ ರಾಜ್ಯದ ನಾಲ್ವರು 'ಘನಂದಾರಿ' ಶಾಸಕರ ಪಟ್ಟಿ ಸ್ಲೈಡಿನಲ್ಲಿದೆ..

ಐದು ಕೋಟಿ ಆಫರ್

ಐದು ಕೋಟಿ ಆಫರ್

ಮಹಿಳಾ ಪತ್ರಕರ್ತರೊಬ್ಬರು ಇಂಡಿಯಾ ಟುಡೇ ಪರವಾಗಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ, ನಾಲ್ವರು ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಮತಕ್ಕಾಗಿ ಐದು ಕೋಟಿ ರೂಪಾಯಿ ಬೇಡಿಕೆ ಇಡುತ್ತಿರುವ ದೃಶ್ಯ ಸೆರೆಯಾಗಿದೆ.

ಬಸವಕಲ್ಯಾಣ

ಬಸವಕಲ್ಯಾಣ

ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದ ಜೆಡಿಎಸ್ ಶಾಸಕ ಮಲ್ಲಿಕಾರ್ಜುನ ಖೂಬಾ ಐದು ಕೋಟಿ ರೂಪಾಯಿ ಡಿಮಾಂಡ್ ಮಾಡುತ್ತಿರುವ ದೃಶ್ಯಾವಳಿ ಕಾರ್ಯಾಚರಣೆಯ ವೇಳೆ ಸೆರೆಯಾಗಿದೆ.

ಆಳಂದ

ಆಳಂದ

ಕುಟುಕು ಕಾರ್ಯಾಚರಣೆಯಲ್ಲಿ ಹೊರಬಿದ್ದ ಇನ್ನೊಂದು ಹೆಸರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪರಮಾಪ್ತರಾದ, ಗುಲ್ಬರ್ಗ ಜಿಲ್ಲೆ ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ ಆರ್ ಪಾಟೀಲ್. ಈ ವಿಚಾರ ಹೊರಬೀಳುತ್ತಿದ್ದಂತೇ ಆಳಂದದಲ್ಲಿ ಕೇಬಲ್ ಟಿವಿ ಸಂಪರ್ಕ ಕಡಿತಗೊಂಡಿದೆ. ಡಿಜಿಟಲ್ ಸೆಟ್ ಅಪ್ ಬಾಕ್ಸ್ ಕೈಕೊಡ್ತೋ ಅಥವಾ ಮುಂಜಾಗ್ರತಾ ಕ್ರಮವಾಗಿ ಪಾಟೀಲ್ ಸಹಚರರು ಕೇಬಲ್ ಸಂಪರ್ಕ ಕಡಿತಗೊಳಿಸಿದರೋ ತಿಳಿದು ಬಂದಿಲ್ಲ.

ವರ್ತೂರು ಪ್ರಕಾಶ್

ವರ್ತೂರು ಪ್ರಕಾಶ್

ನಾನು ಸಿದ್ದರಾಮಯ್ಯನವರ ಶಿಷ್ಯ, ಅವರ ಅಭಿಮಾನಿ ಎಂದು ಹೇಳುತ್ತಲೇ ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಸಡ್ಡು ಹೊಡೆದು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿದ್ದ ವರ್ತೂರು ಪ್ರಕಾಶ್, ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ವಾಹಿನಿಗಳಲ್ಲಿ ಬರುತ್ತಿರುವ ವರದಿಯನ್ನು ಸಿಎಂ ಕಚೇರಿಯಲ್ಲೇ ನೋಡಿದ್ದೇನೆ. ನಾನು ಅಂಥವನಲ್ಲ.. ಅಂಥವನಲ್ಲ.. ಎಂದು ವರ್ತೂರು ಪ್ರಕಾಶ್ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದಾರೆ.

ಲಾಸ್ಟ್ ಬಟ್ ನಾಟ್ ಲೀಸ್ಟ್

ಲಾಸ್ಟ್ ಬಟ್ ನಾಟ್ ಲೀಸ್ಟ್

ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಈ ಪಟ್ಟಿಯಲ್ಲಿದ್ದಾರೆ. ಇವರು ಹಣ ಡಿಮಾಂಡ್ ಮಾಡುತ್ತಿರುವ, ನಂತರ ಇವರ ಅಳಿಯ ಹತ್ತು ಕೋಟಿ ಡಿಮಾಂಡ್ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sting Operation: Karnataka MLAs sell votes for cash ahead of Rajya Sabha Elections 2016. The operation, conducted by India Today, also shows several other MLAs discussing the prices of votes that can get the candidates nominated to the Rajya Sabha.
Please Wait while comments are loading...