ಆರು ತಿಂಗಳಿಂದ ನಿಂತೇ ಹೋಗಿದ್ದ ರೇಷನ್ ಕಾರ್ಡ್ ವಿತರಣೆಗೆ ಮರುಜೀವ
Recommended Video

ಬೆಂಗಳೂರು, ಸೆಪ್ಟೆಂಬರ್ 24: ರಾಜ್ಯದ ಜನತೆಗೊಂದು ಸಿಹಿಸುದ್ದಿ. ಕಳೆದ ಆರು ತಿಂಗಳಿನಿಂದ ನಿಂತೇ ಹೋಗಿದ್ದ ಪಡಿತರ ಚೀಟಿ ವಿತರಣೆ ಪ್ರಕ್ರಿಯೆಗೆ ಮರು ಜೀವ ಬಂದಿದೆ.
ರಾಜ್ಯದಲ್ಲಿ ಆನ್‌ಲೈನ್ : ಮೂಲಕ ಪಡಿತರ ಚೀಟಿಗಾಗಿ ಸಲ್ಲಿಕೆಯಾಗಿರುವ ಸರಿಸುಮಾರು 8.29 ಲಕ್ಷ ಅರ್ಜಿಗಳ ವಿಲೇವಾರಿ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೆ ಚಾಲನೆ ನೀಡಿದೆ. ಇದೇ ವೇಳೆ ಹೊಸ ಅರ್ಜಿಗಳ ಸಲ್ಲಿಕೆಗೆ ಅವಕಾಶವನ್ನೂ ನೀಡಲಾಗಿದೆ.
2017ರಲ್ಲಿ ರಾಜ್ಯ ಸರ್ಕಾರ ಆನ್‌ಲೈನ್ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಆಹ್ವಾನಿಸಿ, ಪಡಿತರ ಚೀಟಿ ವಿತರಣೆ ಕಾರ್ಯ ಆರಂಭಿಸಿತ್ತು. ಆದರೆ 2018ರ ಮಾರ್ಚ್ 27ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಅಧಿಸೂಚನೆ ಪ್ರಕಟಗೊಂಡು ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಅರ್ಜಿಗಳ ವಿಲೇವಾರಿ ಸ್ಥಗಿತಗೊಂಡಿತ್ತು.

ಈ ಹಿನ್ನೆಲೆಯಲ್ಲಿ 2017ರಿಂದ ಬಾಕಿ ಇರುವ ಆನ್‌ಲೈನ್ ಹೊಸ ಪಡಿತರ ಚೀಟಿ ಅರ್ಜಿಗಳ ವಿಲೇವಾರಿಗೆ ಚಾಲನೆ ನೀಡಲು ಸುತ್ತೋಲೆ ಹೊರಡಿಸಲಾಗಿದ್ದು, ಕುಟುಂಬದ ಮುಖ್ಯಸ್ಥರ ಆದಾಯ ದೃಢೀಕರಣ ಪ್ರಮಾಣಪತ್ರ ಪಡೆದು, ಅದರ ಪರಿಶೀಲನೆ ನಡೆಸಿ, ಸ್ಥಳ ತನಿಖೆ ನಡೆಸಿ, ನಿಯಮಾನುಸಾರ ಅರ್ಜಿ ಮೇಲೆ ಕ್ರಮಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಇದೇ ವೇಳೆ ಆನ್‌ಲೈನ್ ಮೂಲಕ ಹೊಸ ಅರ್ಜಿಗಳ ಸ್ವೀಕಾರ, ಚಾಲ್ತಿಯಲ್ಲಿರುವ ಪಡಿತರ ಚೀಟಿಗಳ ಮಾರ್ಪಾಟು, ಸೇರ್ಪಡೆ, ರದ್ದುಗೊಳಿಸುವಿಕೆ, ವಿಳಾಸ ಬದಲಾವಣೆ ಇತ್ಯಾದಿ ಪ್ರಕ್ರಿಯೆಗಳಿಗೂ ಚಾಲನೆ ನೀಡಲು ಇಲಾಖೆ ಆದೇಶಿಸಿದೆ.












Click it and Unblock the Notifications