
ಅನಿವಾಸಿ ಕನ್ನಡಿಗರ ರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ಡಿ.ಕೆ.ಶಿವಕುಮಾರ್
ಬೆಂಗಳೂರು,ಡಿಸೆಂಬರ್ 9: ಅನಿವಾಸಿ ಕನ್ನಡಿಗರ ರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಸರ್ಕಾರಕ್ಕೆ ಇದುವರೆಗೂ ಒರ್ವ ಪ್ರತಿನಿಧಿಯನ್ನು ನೇಮಿಸಲು ಸಾಧ್ಯವಾಗಿಲ್ಲ. ಕೇರಳ ಈ ವಿಚಾರದಲ್ಲಿ ಬಹಳ ಕಾಳಜಿ ವಹಿಸಿದೆ. ಅನಿವಾಸಿ ಕನ್ನಡಿಗರು ಅಲ್ಲಿ ಕೆಲಸ ಮಾಡಿ ದೇಶಕ್ಕೆ ಸಂಪತ್ತು ತಂದುಕೊಟ್ಟಿದ್ದಾರೆ. ಅವರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಕೆಲವರು ಇಲ್ಲಿನ ಅನೇಕರಿಗೆ ಉದ್ಯೋಗ ಕೊಟ್ಟಿದ್ದಾರೆ ಎಂದರು.
ಕೋರ್ಟ್ ಅನುಮತಿ ಮೇರೆಗೆ ನಾನು ಶಾರ್ಜಾ ಪ್ರವಾಸ ಕೈಗೊಂಡು, ಮರಳಿದ್ದೇನೆ. ಅಲ್ಲಿ ಭಾರತೀಯ ಸಂಘದವರು 51ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಭಾರತೀಯರು ಹಾಗೂ ಕನ್ನಡ ಸಂಘಟನೆ ಸದಸ್ಯರು ರಾಜ್ಯದ ವಿಚಾರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಆ ದೇಶದಲ್ಲಿ ನಮ್ಮವರು ಅಲ್ಪಸಂಖ್ಯಾತರು. ಅವರು ಅಲ್ಲಿ ಬದುಕಿ, ಸಂಪಾದಿಸಿ ಇಲ್ಲಿಗೆ ಹಣ ಕಳುಸುತ್ತಿದ್ದಾರೆ. ಇಲ್ಲಿ ಉದ್ಯೋಗ ಸೃಷ್ಟಿಸಬೇಕಿದ್ದ ಸಮೂಹ ಬಹಳ ಆತಂಕದಿಂದ ಹೊರದೇಶಗಳಿಗೆ ವಲಸೆ ಹೋಗುತ್ತಿವೆ. ಇಲ್ಲಿ ಅಧಿಕಾರಿಗಳು ಹಾಗೂ ಸರ್ಕಾರದ ಕಿರುಕುಳದಿಂದ ನೊಂದು ಅಲ್ಲಿಗೆ ಸ್ಥಳಾಂತರ ಆಗುತ್ತಿದ್ದಾರೆ. ಅವರ ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ಅಲ್ಲಿರುವ ಅನಿವಾಸಿ ಭಾರತೀಯರ ರಕ್ಷಣೆಗೆ ವಿಶೇಷ ಸಚಿವಾಲಯ ಸ್ಥಾಪಿಸಲಾಗಿತ್ತು. ಕೋವಿಡ್ ಸಂದರ್ಭದಲ್ಲಿ ಅಲ್ಲಿನ ಸರ್ಕಾರ ಬಹಳ ಉತ್ತಮ ನೆರವು ನೀಡಿದೆ.
ಅಲ್ಲಿರುವ ಕನ್ನಡಿಗರ ಬೇಸರವೇನೆಂದರೆ, ಕೋವಿಡ್ ಸಮಯದಲ್ಲಿ ಅವರು ತವರಿಗೆ ಹಿಂದಿರುಗಲು ಯತ್ನಿಸಿದಾಗ ಅವರನ್ನು ಇಲ್ಲಿಗೆ ಬರಬೇಡಿ ಎಂದು ಹೇಳುವ ಮೂಲಕ ಅವರ ಮನಸ್ಸು ನೋಯಿಸಿದ್ದಾರೆ. ಅವರು ತಮ್ಮ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ಅವರ ಬೇಡಿಕೆಗಳನ್ನು ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸಲಾಗುವುದು. ವಿಶ್ವದ ಯಾವುದೇ ಭಾಗದಲ್ಲಿ ಇರುವ ಕನ್ನಡಿಗರ ರಕ್ಷಣೆಗೆ, ಅವರ ಜತೆ ಸಂಪರ್ಕ ಸಾಧಿಸಲು ಪ್ರತ್ಯೇಕ ಇಲಾಖೆ ಮಾಡಲಾಗುವುದು ಎಂದು ಅವರಿಗೆ ಮಾತು ನೀಡಿ ಬಂದಿದ್ದೇನೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೈಗೊಳ್ಳಲಾಗಿದ್ದ ಕ್ರಮವನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗಿ ಪ್ರತ್ಯೇಕ ಇಲಾಖೆ ಮಾಡಲಾಗುವುದು ಎಂದು ಅವರಿಗೆ ಹೇಳಿದ್ದೇನೆ. ರಾಜ್ಯದ ಒಂದೊಂದು ತಾಲೂಕಿನಿಂದಲೇ ಸಾವಿರಾರು ಜನ ತೆರಳಿ ಅಲ್ಲಿ ಸಂಘಟನೆ ಮಾಡಿಕೊಂಡಿದ್ದಾರೆ. ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ಯಮಿಗಳವರೆಗೂ ಅನೇಕರು ಅಲ್ಲಿ ದುಡಿಯುತ್ತಿದ್ದಾರೆ. ಅವರು ತಮ್ಮ ತಾಯ್ನಾಡಿನ ಸೇವೆ ಸಲ್ಲಿಸಲು ಉತ್ಸುಕರಾಗಿದ್ದು, ಅವರ ರಕ್ಷಣೆ ನಮ್ಮ ಕರ್ತವ್ಯವಾಗಿದೆ.