ಲೇಖಕರ ಒಂದೂವರೆ ದಶಕಗಳ ಬೇಡಿಕೆ ಈಡೇರಿಸಿದ ರಾಜ್ಯ ಬಿಜೆಪಿ ಸರ್ಕಾರ!
ಬೆಂಗಳೂರು, ಫೆ. 22: ಲೇಖಕರು ಹಾಗೂ ಬರಹಗಾರರ ಒಂದೂವರೆ ದಶಕಗಳ ಬೇಡಿಕೆಯನ್ನು ರಾಜ್ಯ ಬಿಜೆಪಿ ಸರ್ಕಾರ ಈಡೇರಿಸಿದೆ. ಹೌದು ಸುಮಾರು 15 ವರ್ಷಗಳ ಬೇಡಿಕೆಯಾಗಿದ್ದ ಗ್ರಂಥಾಲಯ ಪುಸ್ತಕ ಖರೀದಿ ಮಿತಿಯನ್ನು ಹೆಚ್ಚಿಸಿ ಪ್ರಕಾಶಕರು ಮತ್ತು ಲೇಖಕರಿಗೆ ಪ್ರೋತ್ಸಾಹ ನೀಡುವ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ನಿರ್ಧಾರಕ್ಕೆ ಕಾರಣರಾದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ಅವರನ್ನು ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಟನೆ ಅಭಿನಂದಿಸಿದೆ.
ಗ್ರಂಥಾಲಯ ಪುಸ್ತಕ ಖರೀದಿ ನೀತಿಯನ್ನು ಒಂದು ಲಕ್ಷದಿಂದ ಎರಡೂವರೆ ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಬಹಳ ವರ್ಷಗಳ ತರುವಾಯ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಸಂಘದ ಪದಾಧಿಕಾರಿಗಳು ಸೋಮವಾರ ಸಚಿವ ಸುರೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಗೌರವಿಸಿ ಕೃತಜ್ಞತೆ ಸಲ್ಲಿಸಿದರು.

ಬರಹಗಾರರಿಗೆ ಪ್ರೇರಣೆ
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಆರ್. ದೊಡ್ಡೇಗೌಡ, ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಹಾಗೂ ಗೌರವ ಸಲಹೆಗಾರರಾದ ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ಈ ಬೇಡಿಕೆ ಬಹು ವರ್ಷದ ಬೇಡಿಕೆಯಾಗಿದ್ದು, ಈ ನಿರ್ಧಾರದಿಂದ ಪ್ರಕಾಶಕರು ಮತ್ತು ಬರಹಗಾರರಿಗೆ ಹೆಚ್ಚಿನ ಪ್ರೇರಣೆ ದೊರೆಯಲಿದೆ ಎಂದು ಹೇಳಿದರು.

ಪುಸ್ತಕ ಲೋಕದಲ್ಲಿ ಹೊಸ ದಿಸೆ
2005 ರಲ್ಲಿ 50 ಸಾವಿರದಿಂದ ಒಂದು ಲಕ್ಷ ರೂಪಾಯಿಹಳಿಗೆ ಹೆಚ್ಚಿಸಲಾಗಿತ್ತು. ಆ ನಂತರ ಎಲ್ಲ ಸರ್ಕಾರಗಳಿಗೂ ಹಲವು ಬಾರಿ ಮನವಿ ಮಾಡಿದರೂ ಯಾರೂ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ. ಆದರೆ ತಮ್ಮ ಅವಧಿಯಲ್ಲಿ ಇಂತಹ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿರುವುದು ಪುಸ್ತಕ ಲೋಕದಲ್ಲಿ ಒಂದು ಹೊಸ ದಿಸೆ ತೆರೆದುಕೊಳ್ಳಲಿದ್ದು, ಕನ್ನಡ ಬರಹಗಾರರಿಗೆ ಮತ್ತು ಪ್ರಕಾಶಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪುಸ್ತಕ ಖರೀದಿಗೆ ಅನುಮೋದನೆ
ಹಾಗೆಯೇ 2020-21ನೇ ಸಾಲಿನ ಪುಸ್ತಕ ಖರೀದಿ ಆಯವ್ಯಯಕ್ಕೆ ಅನುಮೋದನೆ ನೀಡಿರುವುದು ಈ ಸರ್ಕಾರದ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ನಿಡಸಾಲೆ ಪುಟ್ಟಸ್ವಾಮಯ್ಯ ಹೇಳಿದರು. ಕರೋನಾ ಹಿನ್ನೆಲೆಯಲ್ಲಿ ಈ ಸಾಲಿನ ಪುಸ್ತಕ ಖರೀದಿ ಅಯವ್ಯಯಕ್ಕೆ ಅನುಮೋದನೆ ದೊರೆಯದೇ ತೊಂದರೆಯಾಗಿತ್ತು, ಈ ಅನುಮೋದನೆಯಿಂದಾಗಿ ಪುಸ್ತಕ ಖರೀದಿಗೆ ಅವಕಾಶವಾಗಿದೆ ಎಂದು ಅವರು ಹೇಳಿದರು.

ಸಂಘದ ಪದಾಧಿಕಾರಿಗಳು
ಸಂಘದ ಪದಾಧಿಕಾರಿಗಳು ಸಚಿವ ಸುರೇಶ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಸಂಘದ ಗೌರವ ಸಲಹೆಗಾರ ಪ್ರೊ. ಮಲ್ಲೇಪುರಂ ವೆಂಕಟೇಶ್, ಕಾರ್ಯದರ್ಶಿ ಆರ್. ದೊಡ್ಡೇಗೌಡ, ಸಾಹಿತಿಗಳಾದ ರಾ.ನಂ. ಚಂದ್ರಶೇಖರ, ಡಾ. ಸುಕನ್ಯಾ ಮಾರುತಿ, ಡಾ. ಮಾಲತಿ ಶೆಟ್ಟಿ, ಜಾಣಗೆರೆ ವೆಂಕಟರಾಮಯ್ಯ, ಭಾಗ್ಯಲಕ್ಷ್ಮಿ ಮಗ್ಗೆ, ವಿಜಯಲಕ್ಷ್ಮಿ ಸತ್ಯಮೂರ್ತಿ, ಡಾ. ಕೆ. ಷರೀಫಾ, ಗೌರಮ್ಮ, ವಿಜಯಾಗುರುರಾಜ್, ಪದ್ಮಿನಿ ನಾಗರಾಜ್, ಮುರಳಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.