SSLC ಮರುಪರೀಕ್ಷೆಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲ: ಸಿಎಂ ಸಿಹಿಸುದ್ದಿ
ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. ಈ ಬಾರಿಯ ಫಲಿತಾಂಶದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನೇನು ಇದೇ ತಿಂಗಳಿನಲ್ಲಿ ನಡೆಯಲಿರುವ ಮರುಪರೀಕ್ಷೆ ಕುರಿತಾಗಿ ಖುದ್ದು ಸಿಎಂ ಸಿದ್ದರಾಮಯ್ಯ ಅವರು ಸಿಹಿಸುದ್ದಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅಭಿನಂದನೆಗಳು. ಕಳೆದ ಬಾರಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿಯ ಫಲಿತಾಂಶ ಶೇ 8ರಷ್ಟು ಪ್ರಗತಿ ಸಾಧಿಸಿದೆ ಎನ್ನುವುದು ಸಂತಸದ ವಿಚಾರ ಎಂದು ಶ್ಲಾಘಿಸಿದ್ದಾರೆ.

ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಥವಾ ಈಗ ಪಡೆದಿರುವ ಅಂಕಗಳಿಗಿಂತ ಉತ್ತಮ ಅಂಕ ಗಳಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ ಮತ್ತೆ ಪರೀಕ್ಷೆ ಬರೆಯುವ ಅವಕಾಶವನ್ನು ನಮ್ಮ ಸರ್ಕಾರ ಕಲ್ಪಿಸಲಿದೆ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಎಲ್ಲರೂ ಉತ್ತಮ ಅಂಕಗಳ ಜೊತೆ ಶೈಕ್ಷಣಿಕ ಜೀವನದ ಮುಂದಿನ ಗುರಿಯೆಡೆಗೆ ಹೆಜ್ಜೆಯಿರಿಸಿ ಎಂದು ಶುಭ ಹಾರೈಸಿದ್ದಾರೆ.
ರಾಜ್ಯದಲ್ಲಿ ಅತೀ ಕಡಿಮೆ ಫಲಿತಾಂಶದ ಸಾಧನೆ ಮಾಡಿರುವ ತಾಲೂಕುಗಳನ್ನು ಗುರುತಿಸುವ ಮೂಲಕ ಅಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ಆಯೋಜಿಸಲಾಗುವುದು. ಅಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೂ ಆದ್ಯತೆ ನೀಡಲಾಗುವುದು. ಈ ಬಗ್ಗೆ ಶಿಕ್ಷಣ ಸಚಿವರು ಮಾತ್ರವಲ್ಲ, ನಾನು ಕೂಡ ಖುದ್ದು ಗಮನ ಹರಿಸುತ್ತೇನೆ. ಸಮಾಜದ ಎಲ್ಲ ಬಗೆಯ ಅಸಮಾನತೆಗಳ ನಿವಾರಣೆಗೆ ಇರುವ ಪರಿಣಾಮಕಾರಿ ಮಾರ್ಗವೆಂದರೆ ಅದು ಶಿಕ್ಷಣ ಮಾತ್ರ. ಶಿಕ್ಷಣದ ಮೂಲಕ ಬದಲಾವಣೆ ತರಲು ನಾವು ಬದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಇದೇ ಮೇ 26ರಿಂದ ಜೂನ್ 2ರವರೆಗೆ ನಡೆಯಲಿದೆ. ಮುಖ್ಯ ಪರೀಕ್ಷೆಯಲ್ಲಿ ಫೇಲ್ ಆದವರು, ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವವರು ಹಾಗೂ ಖಾಸಗಿಯಾಗಿ ಮತ್ತೆ ಪರೀಕ್ಷೆ ತೆಗೆದುಕೊಳ್ಳುವವರು ಮೇ 10ರೊಳಗೆ ನೋಂದಣಿ ಮಾಡಿಕೊಳ್ಳುವಂತೆ ಇಲಾಖೆ ತಿಳಿಸಿದೆ.

ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ. ಆದರೆ ಫಲಿತಾಂಶ ವೃದ್ಧಿಸಿಕೊಳ್ಳಲು ಬಯಸುವವರು ಶುಲ್ಕ ಪಾವತಿಸಬೇಕು ಎಂದು ಹೇಳಲಾಗಿತ್ತು. ಆದರೆ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಅಥವಾ ಈಗ ಪಡೆದಿರುವ ಅಂಕಗಳಿಗಿಂತ ಇನ್ನೂ ಉತ್ತಮ ಅಂಕ ಗಳಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸದೆ, ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶ ನೀಡುವುದಾಗಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.
ಮರಳಿ ಯತ್ನಿಸಿದರೆ ಯಶಸ್ಸು
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ನಿಮ್ಮೆಲ್ಲರ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾಗದ ವಿದ್ಯಾರ್ಥಿಗಳು ಯಾವುದೇ ಆತಂಕ, ಹತಾಶೆಗೆ ಒಳಗಾಗುವುದು ಬೇಡ. ನಿಮ್ಮ ಮುಂದೆ ಮತ್ತೆ ಪರೀಕ್ಷೆ ಬರೆಯುವ ಅವಕಾಶಗಳಿವೆ. ಮರಳಿ ಯತ್ನಿಸಿದರೆ ಯಶಸ್ಸು ಖಂಡಿತ ಸಿಗಲಿದೆ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ದಾಖಲೆ ನಿರ್ಮಿಸಿದ್ದು, ಈ ಮಕ್ಕಳ ಸಾಧನೆ ಇತರರಿಗೆ ಮಾದರಿ ಎಂದಿದ್ದಾರೆ.












Click it and Unblock the Notifications