ಎಸ್‌ಎಸ್‌ಎಲ್‌ಸಿ; ಮೌಲ್ಯಮಾಪಕರ ಸಂಭಾವನೆ ಪರಿಷ್ಕರಣೆ
ಬೆಂಗಳೂರು, ಏಪ್ರಿಲ್ 24; ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ಸೋಮವಾರದಿಂದ ಆರಂಭವಾಗಿದೆ. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಮೇ 2ನೇ ವಾರದಲ್ಲಿ 10ನೇ ತರಗತಿ ಫಲಿತಾಂಶ ನೀಡುವ ಗುರಿಯನ್ನು ಶಿಕ್ಷಣ ಇಲಾಖೆ ಹೊಂದಿದೆ.
2023ರ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸುವ ಮೌಲ್ಯಮಾಪಕರು ಮತ್ತು ಸಿಬ್ಬಂದಿಯ ಸಂಭಾವನೆ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ದೇಶಕರು (ಪರೀಕ್ಷೆಗಳು) ಗೋಪಾಲಕೃಷ್ಣ ಹೆಚ್. ಎನ್. ಈ ಕುರಿತು ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನ ಕಾರ್ಯದಲ್ಲಿ ಭಾವಹಿಸುವ ಮೌಲ್ಯಮಾಪಕರು/ ಸಿಬ್ಬಂದಿಯ ಸಂಭಾವನೆ ಭತ್ಯೆಯ ದರಗಳನ್ನು ಉಲ್ಲೇಖಿತ ಆದೇಶಗಳಂತೆ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಮೌಲ್ಯ ಮಾಪನ ಕೇಂದ್ರದ ಜಂಟಿ ಮುಖ್ಯ ಅಧೀಕ್ಷಕರು/ ಉಪ ಅಧೀಕ್ಷಕರ ಸಂಭಾವನೆ ಒಟ್ಟಾರೆ ಪರಿಷ್ಕರಣೆಯಾಗಿದೆ.
ಈ ಹಿಂದೆ ಜಂಟಿ ಮುಖ್ಯ ಪರಿವೀಕ್ಷಕರು 7270 ರೂ. ಪಡೆಯುತ್ತಿದ್ದರು. ಅದನ್ನು 7634 ರೂ.ಗಳಿಗೆ ಪರಿಷ್ಕರಣೆ ಮಾಡಲಾಗಿದೆ. ಅಲ್ಲದೇ ಉಪ ಮುಖ್ಯ ಪರೀಕ್ಷಕರು 5464 ರೂ. ಪಡೆಯುತ್ತಿದ್ದರು. ಸಂಭಾವನೆ ಪರಿಷ್ಕರಣೆ ಬಳಿಕ 5737 ರೂ.ಗಳಿಗೆ ಏರಿಕೆಯಾಗಿದೆ.

ಮೌಲ್ಯ ಮಾಪನ ದರಗಳು; ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಪ್ರಥಮ ಭಾಷೆ ರೂ. 23 ರಿಂದ 24, ದ್ವಿತೀಯ ಭಾಷೆ/ ತೃತೀಯ ಭಾಷೆ ರೂ. 21 ರಿಂದ 22 ಮತ್ತು ಐಚ್ಛಿಕ ವಿಷಯಗಳು ರೂ. 21 ರಿಂದ 22ಕ್ಕೆ ಏರಿಕೆ ಮಾಡಲಾಗಿದೆ.
ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆಗಳನ್ನು ಸಹ ಏರಿಕೆ ಮಾಡಲಾಗಿದೆ. ದಿನಭತ್ಯೆ (ಬೆಂಗಳೂರು) 596 ರೂ. ಇರುವುದು, 626ಕ್ಕೆ ಏರಿಕೆಯಾಗಿದೆ. ದಿನಭತ್ಯೆ (ಇತರ ಸ್ಥಳಗಳಲ್ಲಿ) 469 ರಿಂದ 492ಕ್ಕೆ ಏರಿಕೆಯಾಗಿದೆ. ಪರಿಷ್ಕೃತ ಆದೇಶದ ಬಳಿಕ ಸ್ಥಳೀಯ ಭತ್ಯೆ (ಬೆಂಗಳೂರು) 234 ರಿಂದ 246ಕ್ಕೆ ಏರಿಕೆಯಾಗಿದೆ. ಸ್ಥಳೀಯ ಭತ್ಯೆ (ಇತರ ಸ್ಥಳಗಳು) 189 ರಿಂದ 198ಕ್ಕೆ ಏರಿಕೆಯಾಗಿದೆ.
ಕ್ಯಾಂಪ್ ಕಸ್ಟೋಡಿಯನ್ ಸಂಭಾವನೆ 4515 ರಿಂದ 4741 ರೂ.ಗೆ ಏರಿಕೆಯಾಗಿದೆ. ಕ್ಯಾಂಪ್ ಸಹಾಯಕರು 1260 ರಿಂದ 1323ಕ್ಕೆ ಏರಿಕೆಗೊಂಡಿದೆ. 'ಡಿ' ದರ್ಜೆ ಸಿಬ್ಬಂದಿಗಳ ಭತ್ಯೆ 630 ರಿಂದ 662ಕ್ಕೆ ಹೆಚ್ಚಳ ಮಾಡಲಾಗಿದೆ.
ತಡವಾಗಿ ಮೌಲ್ಯ ಮಾಪನ ಆರಂಭ; 2023ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಏಪ್ರಿಲ್ 21ರಿಂದ ನಡೆಯಲಿದೆ ಎಂದು ಈ ಹಿಂದೆ ಘೋಷಣೆ ಮಾಡಲಾಗಿತ್ತು. ಆದರೆ ತಡವಾಗಿ ಅಂದರೆ ಏಪ್ರಿಲ್ 24ರಿಂದ ಆರಂಭಿಸಲಾಗಿದೆ. ದ್ವಿತೀಯ ಪಿಯುಸಿ ಮಾದರಿಯಲ್ಲಿಯೇ ಎಸ್‌ಎಸ್ಎಲ್‌ಸಿ ಫಲಿತಾಂಶವನ್ನು ನೀಡಲಾಗುತ್ತದೆ. ಮೇ 2ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದೆ. ಶಿಕ್ಷಕರು ಚುನಾವಣಾ ಕಾರ್ಯ, ತರಬೇತಿಯಲ್ಲಿಯೂ ತೊಡಗಿದ್ದಾರೆ. ಇದರ ನಡುವೆಯೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಚುನಾವಣಾ ಕಾರ್ಯಕ್ಕೆ ತೊಂದರೆಯಾಗದಂತೆ ಮೌಲ್ಯ ಮಾಪನ ಕಾರ್ಯ ಕೈಗೊಂಡಿದೆ.
ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆ ಮಾರ್ಚ್ 30 ರಿಂದ ಏಪ್ರಿಲ್ 15ರ ತನಕ ನಡೆದಿತ್ತು. ಕಳೆದ ವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೀ ಉತ್ತರಗಳನ್ನು ಬಿಡುಗಡೆ ಮಾಡಿ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಸೋಮವಾರದಿಂದ ರಾಜ್ಯದ 236 ಕೇಂದ್ರಗಳಲ್ಲಿ 8.42 ಲಕ್ಷ ವಿದ್ಯಾರ್ಥಿಗಳ ಉತ್ತರ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಆರಂಭಿಸಲಾಗಿದೆ.












Click it and Unblock the Notifications