Srisailam Padayatra 2026: ಮಾರ್ಚ್ 3ರಿಂದ ಶ್ರೀಶೈಲ ಪಾದಯಾತ್ರೆ; ಭಕ್ತರಿಂದ 151 ಕೆ.ಜಿ ತೂಕದ ಪಂಚಲೋಹದ ಗಂಟೆ ಅರ್ಪಣೆ
ಜಗತ್ಪ್ರಸಿದ್ಧ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಈ ಬಾರಿ ವಿಶೇಷ ಕೊಡುಗೆಯೊಂದು ಸಲ್ಲಿಕೆಯಾಗುತ್ತಿದೆ. ಉತ್ತರ ಕರ್ನಾಟಕದ ಮರಗಾಲು ಮಲ್ಲಯ್ಯಗಳ ಸಂಘ ಮತ್ತು ಬೆಂಗಳೂರಿನ ಅಮ್ಮ ಫೌಂಡೇಶನ್ ವತಿಯಿಂದ ಸಿದ್ಧಪಡಿಸಲಾದ 151 ಕೆ.ಜಿ ತೂಕದ ಬೃಹತ್ ಪಂಚಲೋಹದ ಗಂಟೆಯನ್ನು ಮಾರ್ಚ್ 14ರಂದು ಮಲ್ಲಿಕಾರ್ಜುನ ಸ್ವಾಮಿಗೆ ಸಮರ್ಪಿಸಲಾಗುತ್ತಿದೆ. ಬಾಗಲಕೋಟೆ ಹಾಗೂ ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 150ಕ್ಕೂ ಹೆಚ್ಚು ಮರಗಾಲು ಮಲ್ಲಯ್ಯರ ಸ್ವಯಂ ಪ್ರೇರಣೆಯಿಂದ ಈ ಗಂಟೆ ನಿರ್ಮಾಣವಾಗಿದೆ.
ಇದಕ್ಕೆ ಬೆಂಗಳೂರಿನ ಅಮ್ಮ ಫೌಂಡೇಶನ್‌ನ ರೋಹಿತ್ ಕೆಂಪೇಗೌಡ ಅವರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ವಿಶೇಷ ಗಂಟೆಯ 'ಉತ್ಸವ ಯಾತ್ರೆ'ಗೆ ಮಾರ್ಚ್ 1ರಂದು ಚಿಕ್ಕೋಡಿ ತಾಲ್ಲೂಕಿನ ಯಡೂರಿನಲ್ಲಿ ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದು ಅಖಿಲ ಕರ್ನಾಟಕ ಮರಗಾಲು ಮಲ್ಲಯ್ಯಗಳ ಸಂಘದ ಮುಖಂಡರಾದ ಲಕ್ಷ್ಮಣ ಇಂಗುನವರ ಮಾಹಿತಿ ನೀಡಿದ್ದಾರೆ.

33ನೇ ವರ್ಷದ ಪಾದಯಾತ್ರೆ: ಮಾರ್ಚ್ 3ರಿಂದ ಚಾಲನೆ
ರಾಜ್ಯದಲ್ಲೇ ಮೊದಲ ಬಾರಿಗೆ ಶ್ರೀಶೈಲಕ್ಕೆ ಪಾದಯಾತ್ರೆ ಆರಂಭಿಸಿದ ಕೀರ್ತಿ ಹೊಂದಿರುವ ವಿಜಯಪುರದ ಜೋರಾಪುರ ಪೇಠದ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿಯು ತನ್ನ 33ನೇ ವರ್ಷದ ಯಾತ್ರೆಯನ್ನು ಹಮ್ಮಿಕೊಂಡಿದೆ. ಮಾರ್ಚ್ 3ರಿಂದ ಮಾರ್ಚ್ 17ರವರೆಗೆ ಹೋಳಿ ಹುಣ್ಣಿಮೆಯಿಂದ ಯುಗಾದಿಯವರೆಗೆ 15 ದಿನಗಳ ಕಾಲ ನಡೆಯುವ ಈ ಯಾತ್ರೆಯಲ್ಲಿ ಈ ಬಾರಿ 500ಕ್ಕೂ ಹೆಚ್ಚು ಭಕ್ತರು ಭಾಗವಹಿಸಲಿದ್ದಾರೆ.
ಮಾರ್ಚ್ 3ರಂದು ರಾತ್ರಿ ವಿಜಯಪುರದಿಂದ ಆರಂಭವಾಗುವ ಯಾತ್ರೆಯು ಬಸವನ ಬಾಗೇವಾಡಿ, ಕೊಣ್ಣೂರ ಕ್ರಾಸ್, ಹುಣಸಗಿ, ದೇವದುರ್ಗದ ಮಸರಕಲ್ಲ, ಕಲಮಲಾ, ಆಯಿಜ ಮತ್ತು ಆತ್ಮಕೂರ ಮಾರ್ಗವಾಗಿ ಸಾಗಿ ಮಾರ್ಚ್ 16ರಂದು ಶ್ರೀಶೈಲ ತಲುಪಲಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಕ್ತರು ರವೀಂದ್ರ ಸಿದ್ದಯ್ಯ ಕರ್ಪೂರಮಠ (8884447791) ಅಥವಾ ಶರಣಬಸಪ್ಪ ಚನ್ನಿಗಾವಿಶೆಟ್ರು (8618406986) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಭಕ್ತರಿಗಾಗಿ ಅನ್ನದಾಸೋಹ ಸೇವೆ
ಶ್ರೀಶೈಲಕ್ಕೆ ತೆರಳುವ ಸಾವಿರಾರು ಪಾದಚಾರಿ ಭಕ್ತರ ಅನುಕೂಲಕ್ಕಾಗಿ ಬನಹಟ್ಟಿಯ ಶ್ರೀ ಶ್ರೀಶೈಲ ಮಲ್ಲಿಕಾರ್ಜುನ ಅನ್ನದಾಸೋಹ ಸದ್ಭಕ್ತ ಮಂಡಳಿಯು ದ್ವಿತೀಯ ವರ್ಷದ ಬೃಹತ್ ಅನ್ನದಾಸೋಹವನ್ನು ಕೌಸಗಿ ಬಳಿ ಆಯೋಜಿಸಿದೆ. ಮಾರ್ಚ್ 7ರಿಂದ ಸತತ 4 ದಿನಗಳ ಕಾಲ. ಯುಗಾದಿ ಜಾತ್ರೆಯ ನಿಮಿತ್ತ ನಡೆಯುವ ಈ ಸೇವೆಗೆ ಭಕ್ತರು ತನು-ಮನ-ಧನಗಳಿಂದ ಸಹಕರಿಸಬೇಕೆಂದು ಸಮಿತಿ ವಿನಂತಿಸಿದೆ. ಈ ಬಾರಿಯ ಶ್ರೀಶೈಲ ಯುಗಾದಿ ಜಾತ್ರೆಯು ಉತ್ತರ ಕರ್ನಾಟಕದ ಭಕ್ತರ ಪಾಲಿಗೆ ಅತ್ಯಂತ ವಿಶೇಷವಾಗಿದ್ದು, ಪಂಚಲೋಹದ ಗಂಟೆಯ ನಾದ ಮತ್ತು ನೂರಾರು ಭಕ್ತರ ಪಾದಯಾತ್ರೆಯೊಂದಿಗೆ ಮಲ್ಲಿಕಾರ್ಜುನನ ಸನ್ನಿಧಿ ಕಳೆಗಟ್ಟಲಿದೆ.
ಹಿಂದೂ ಧರ್ಮದ ಪ್ರಕಾರ ಯುಗಾದಿ ಹೊಸ ವರ್ಷದ ಆರಂಭ. ಶ್ರೀಶೈಲದಲ್ಲಿ ಮಲ್ಲಿಕಾರ್ಜುನ (ಶಿವ) ಮತ್ತು ಭ್ರಮರಾಂಬೆ (ಶಕ್ತಿ) ನೆಲೆಸಿದ್ದಾರೆ. ಯುಗಾದಿಯ ಸಮಯದಲ್ಲಿ ಶ್ರೀಶೈಲದಲ್ಲಿ ನಡೆಯುವ ಮಹಾ ಜಾತ್ರೆ ಅತ್ಯಂತ ಪ್ರಸಿದ್ಧವಾದುದು. ಈ ಸಮಯದಲ್ಲಿ ಮಲ್ಲಿಕಾರ್ಜುನನು ಪಾರ್ವತಿಯನ್ನು ವಿವಾಹವಾದನು ಎಂಬ ನಂಬಿಕೆ ಇದೆ. ಈ ವೈವಾಹಿಕ ಸಂಭ್ರಮವನ್ನು ನೋಡಲು ಲಕ್ಷಾಂತರ ಭಕ್ತರು ಸಾಕ್ಷಿಯಾಗುತ್ತಾರೆ.
ಉತ್ತರ ಕರ್ನಾಟಕಕ್ಕೆ ಅವಿನಾಭಾವ ಸಂಬಂಧ
ಉತ್ತರ ಕರ್ನಾಟಕದ ಜನತೆಗೆ ಶ್ರೀಶೈಲ ಮಲ್ಲಯ್ಯ ಕೇವಲ ದೇವರಲ್ಲ, ಮನೆದೇವರು. ಮರಗಾಲು (ಉದ್ದನೆಯ ಮರದ ಕಾಲುಗಳು) ಕಟ್ಟಿ ನಡೆಯುವ ಕಲೆ ಒಂದು ವಿಶಿಷ್ಟ ಆಚರಣೆ. ಭಕ್ತರು ತಮ್ಮ ಹರಕೆಯ ಭಾಗವಾಗಿ ಅಥವಾ ದೇವರ ಮೇಲಿನ ಭಕ್ತಿಯ ಸಂಕೇತವಾಗಿ ಮರಗಾಲುಗಳನ್ನು ಧರಿಸಿ ಮಲ್ಲಯ್ಯನ ಉತ್ಸವಗಳಲ್ಲಿ ಭಾಗವಹಿಸುತ್ತಾರೆ. ಇದು ದೈಹಿಕ ಶಕ್ತಿ ಮತ್ತು ಆಧ್ಯಾತ್ಮಿಕ ಸಮರ್ಪಣೆಯ ಸಂಕೇತವಾಗಿದೆ. ವಿಜಯಪುರ, ಬಾಗಲಕೋಟೆ ಭಾಗದ ಜನರು ಮಲ್ಲಿಕಾರ್ಜುನನನ್ನು ತಮ್ಮ ಮನೆ ಅಳಿಯನೆಂದು ಭಾವಿಸುತ್ತಾರೆ. ಯುಗಾದಿ ಹಬ್ಬದ ನೆಪದಲ್ಲಿ ಅಳಿಯನ ಮನೆಗೆ (ಶ್ರೀಶೈಲಕ್ಕೆ) ಹೋಗಿ ಉಡುಗೊರೆ (ಗಂಟೆ, ವಸ್ತ್ರ ಇತ್ಯಾದಿ) ನೀಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ.













Click it and Unblock the Notifications