Sringeri: ಮತ ಮರುಎಣಿಕೆಯಲ್ಲಿ ಅಕ್ರಮ ಬಯಲು, ಬಿಜೆಪಿಗೆ ಗೆಲುವು: 'ಮತಗಳ್ಳ' ಇವರೇ ಎಂದ ಆರ್.ಅಶೋಕ್
ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ ನಡೆದ ಬಳಿಕ 'ಮತಗಳ್ಳತನ', ಮತದಾನದಲ್ಲಿ ಅಕ್ರಮದ ಆರೋಪಗಳು ಕೇಳು ಬರುತ್ತಿವೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಹಲವರು ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ರಾಜ್ಯದ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಸ್ಥಾನ ಅಸಿಹಿಂಧುಗೊಂಡಿದೆ. ಇದಕ್ಕೆ ಕಾರಣ ಅಕ್ರಮ ಗೆಲುವು ಎಂಬ ಆರೋಪ ಕೇಳಿ ಬಂದಿದೆ.
ಇದೇ ವಿಚಾರಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಕ್ಸ್ ಪೋಸ್ಟ್ ಮಾಡಿ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. 'ಶೃಂಗೇರಿಯಲ್ಲಿ ಕಾಂಗ್ರೆಸ್ ಅಸಿಂಧು - ಸತ್ಯಕ್ಕೆ ಜಯ! 'ವೋಟ್ ಚೋರ್ ಕೌನ್ ಹೈ? ರಾಹುಲ್ ಗಾಂಧಿ ಹೈ!' ಎಂದು ಅವರು ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದಲ್ಲಿ 2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸದರಿ ಶೃಂಗೇರಿ ಕ್ಷೇತ್ರದಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸುವ ಮೂಲಕ ಜನಾದೇಶವನ್ನು ಕಸಿದುಕೊಳ್ಳಲಾಗಿತ್ತು. ಅಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಮನವಿಯನ್ನು ತಿರಸ್ಕರಿಸಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡರನ್ನು ವಿಜೇತರೆಂದು ಘೋಷಿಸಲಾಗಿತ್ತು. ಅಲ್ಲಿಂದ ಕಾಂಗ್ರೆಸ್ ಶಾಸಕರೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
ಈ ಗೆಲುವಿನ ವಿರುದ್ಧ ಬಿಜೆಪಿ ಡಿ.ಎನ್. ಜೀವರಾಜ್ ಅಧಿಕಾರ ಬಲಕ್ಕೆ ಮಣಿಯದ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಆರ್. ನಟರಾಜ್ ಅವರ ಪೀಠವು ನೀಡಿದ ಐತಿಹಾಸಿಕ ಆದೇಶದಂತೆ ಮೇ 2ರಂದು ಕ್ಷೇತ್ರದ ಮತಗಳ ಮರು ಎಣಿಕೆ ನಡೆಯಿತು. ಅಲ್ಲಿ ಕಾಂಗ್ರೆಸ್ ಪಕ್ಷದ ಮೋಸ ಬಯಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಆರ್.ಅಶೋಕ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದೆ. ಜನಾದೇಶಕ್ಕೆ ಮೋಸ ಮಾಡಿ ಅಕ್ರಮವಾಗಿ ಗೆಲುವು ಸಾಧಿಸಲು ಅಧಿಕಾರ ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ನ್ಯಾಯಾಂಗ ನೀಡಿದ ತಕ್ಕ ಉತ್ತರ.
ಕಳೆದ ಮೂರು ವರ್ಷಗಳಿಂದ ಅನರ್ಹವಾಗಿ ಅಧಿಕಾರ ಅನುಭವಿಸಿದ ಕಾಂಗ್ರೆಸ್‌ಗೆ ಈಗ ಮುಖಭಂಗವಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಗೆಲುವಲ್ಲ, ಇದು ಪ್ರಜಾಪ್ರಭುತ್ವದ ಗೆಲುವು. ಶೃಂಗೇರಿಯ ಮತದಾರರ ಮತದ ಮೌಲ್ಯಕ್ಕೆ ಸಂದ ಜಯ. ನ್ಯಾಯದೇವತೆಯ ಮೇಲೆ ವಿಶ್ವಾಸವಿಟ್ಟು ಸಂವಿಧಾನಾತ್ಮಕವಾಗಿ ಹೋರಾಡಿ ನ್ಯಾಯ ಪಡೆದ ಡಿ.ಎನ್. ಜೀವರಾಜ್ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಸತ್ಯಮೇವ ಜಯತೇ! ಎಂದು ಪೋಸ್ಟ್ ಮಾಡಿದ್ದಾರೆ.
ಮರು ಎಣಿಕೆಗೂ ರಾಹುಲ್ ಗಾಂಧಿಗೂ ಏನು ಸಂಬಂಧ?
ಬಿಜೆಪಿ ಅಧಿಕಾರ ಹಿಡಿದ ರಾಜ್ಯಗಳಲ್ಲಿ ಅಕ್ರಮ ನಡೆದಿದೆ. ಚುಣಾವಣೆ ಆಯೋಗದಂತಹ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದೆ. ಎದುರಾಳಿ ಪಕ್ಷಗಳನ್ನು ಈ ಮೂಲಕ ಹಣಿಯುತ್ತಿದೆ ಎಂದೆಲ್ಲ ಆರೋಪಿಸಲಾಗಿತ್ತು. ಈ ಬಗ್ಗೆ ಚುನಾವಣೆ ಪೂರ್ವ ಅನೇಕ ವೇದಿಕೆ ಕಾರ್ಯಕ್ರಮಗಳಲ್ಲಿ ಸ್ವತಃ ರಾಹುಲ್ ಗಾಂಧಿ ಅವರು ದೂರಿದ್ದರು. ಜೊತೆಗೆ 'ವೋಟ್ ಚೋರಿ' ಎಂಬ ಅಭಿಯಾನ ಸಹ ನಡೆಸಿದ್ದರು.
ಶೃಂಗೇರಿ ಕ್ಷೇತ್ರ ಮರು ಎಣಿಕೆಯಲ್ಲಿ ಬಿಜೆಪಿಗೆ ಗೆಲುವು ಧಕ್ಕಿದೆ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ನಾಯಕರ ಮತ ಗಳ್ಳತನ ಆರೋಪವನ್ನು ಆರ್.ಅಶೋಕ್ ಅವರು ನೆನಪಿಸಿ ಕಾಲೇಳೆದಿದ್ದಾರೆ. ಮತದಾನ ಅಕ್ರಮ ಕುರಿತು ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ.
ಶೃಂಗೇರಿ ಕ್ಷೇತ್ರ: 2023ರಲ್ಲಿ ಅಭ್ಯರ್ಥಿಗಳ ಸೋಲು ಗೆಲುವು
* ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಗಳಿಕೆ ಮತ- 59,171 (ಗೆಲುವು)
* ಬಿಜೆಪಿ ಡಿ.ಎನ್. ಜೀವರಾಜು ಗಳಿಕೆ ಮತ- 58,970 (ಸೋಲು)
* ಗೆಲುವಿನ ಅಂತರ ಕೇವಲ 201ಮತಗಳು
ಇದೀಗ ಮರು ಎಣಿಕೆಯಲ್ಲಿ ಅಕ್ರಮವಾಗಿ ತಿರಸ್ಕರಿಸಿದ ಮತಗಳು ಸೇರಿ ಮರು ಎಣಿಕೆ ಆಗಿದ್ದು, ಬಿಜೆಪಿ ಗೆದ್ದು ಬೀಗಿದೆ. ಅವರ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಮೂರು ವರ್ಷದಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್ ರಾಜೇಗೌಡರ ಶಾಸಕ ಸ್ಥಾನ ರದ್ದಾಗಿದೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.













Click it and Unblock the Notifications