ಸಿಎಂ ಕೈ ಸೇರಿದ ಡಿಕೆಶಿ ವಿರುದ್ಧದ ಚಾರ್ಚ್ ಶೀಟ್
ಧಾರವಾಡ, ಜ.8 : ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಚಾರ್ಚ್ ಶೀಟ್ ಅನ್ನು ಬಿಡುಗಡೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೂ 111 ಪುಟಗಳ ದಾಖಲೆಗಳನ್ನು ಕಳುಹಿಸಿದ್ದಾರೆ. ಈ ಮೂಲಕ ಸಿಎಂ ಅವರ ಸವಾಲಿಗೆ ಉತ್ತರ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಚಾರ್ಚ್ ಶೀಟ್ ದಾಖಲಾಗಿಲ್ಲ. ಅಂತಹ ದಾಖಲೆಗಳಿದ್ದರೆ ತಮಗೆ ನೀಡಲಿ ಎಂದು ಸಿಎಂ ಸಿದ್ದರಾಮಯ್ಯ ಹಿರೇಮಠ ಅವರಿಗೆ ಸವಾಲು ಹಾಕಿದ್ದರು. ಧಾರವಾಡದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಹಿರೇಮಠ, ಶಿವಕುಮಾರ್ ಮೇಲಿನ 'ದೋಷಾರೋಪ ಪಟ್ಟಿ'ಯನ್ನು ಬಿಡುಗಡೆ ಮಾಡಿದರು, ಸ್ಪೀಡ್‌ಪೋಸ್ಟ್‌ನಲ್ಲಿ ಸಿಎಂಗೆ ಇದನ್ನು ಕಳುಹಿಸುತ್ತಿರುವುದಾಗಿ ತಿಳಿಸಿದರು.

ಇಂಧನ ಸಚಿವ ಡಿಕೆ ಶಿವಕುಮಾರ್ ಮೇಲಿನ ಆರೋಪಗಳಿಗೆ ಸಂಬಂಧಿಸಿದ ಸಮಗ್ರ ವಿವರಗಳವುಳ್ಳ 111 ಪುಟಗಳ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಕಳುಹಿಸುತ್ತಿದ್ದೇನೆ. ಇವುಗಳನ್ನು ಪರಿಶೀಲಿಸಿದ ಬಳಿಕವಾದರೂ, ಸಿದ್ದರಾಮಯ್ಯ ಮತ್ತು ಹೈ ಕಮಾಂಡ್ ನಾಯಕರು ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಹಿರೇಮಠ ಹೇಳಿದರು.
ಯಾವುದು ಈ ಚಾರ್ಚ್ ಶೀಟ್ : ಎಸ್.ಆರ್.ಹಿರೇಮಠ ಸಿಎಂಗೆ ಸಲ್ಲಿಸಿರುವ ದಾಖಲೆಗಳಲ್ಲಿ ಬೆಂಗಳೂರು ನಗರ ವಿಭಾಗದ ಲೋಕಾಯುಕ್ತ ಡಿವೈಎಸ್‌ಪಿ ಡಿ. ಪಾಲಾಕ್ಷಯ್ಯ ಸಲ್ಲಿಸಿರುವ ದೋಷಾರೋಪ ಪಟ್ಟಿಯಿದೆ. ಬೆನ್ನಿಗಾನಹಳ್ಳಿಯ ಅಕ್ರಮ ಭೂ ಕಬಳಿಕೆ ಪ್ರಕರಣದಲ್ಲಿ ಡಿಕೆ ಶಿವಕುಮಾರ್ ಅವರನ್ನು ಒಂದನೇ ಆರೋಪಿಯನ್ನಾಗಿ ಮಾಡಲಾಗಿದೆ. ಈ ಕುರಿತು ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷೆನ್ಸ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಡಿಕೆ ಶಿವಕುಮಾರ್ ವಿರುದ್ಧ ದಾಖಲೆ ನೀಡುವಂತೆ ಸಿಎಂ ಸವಾಲು ಹಾಕಿದ್ದರು ಅದರಂತೆ ಅವರಿಗೆ ದಾಖಲೆ ಕಳುಹಿಸಿಕೊಟ್ಟಿದ್ದೇನೆ. ಡಿಕೆ ಶಿವಕುಮಾರ್ ಅವರನ್ನು ಸಂಪುಟದಿಂದ ಕೈ ಬಿಟ್ಟು, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ಅವರ ಮೇಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲಿ ಎಂದು ಹಿರೇಮಠ ಒತ್ತಾಯಿಸಿದರು. [ಹಿರೇಮಠ ಅವರಿಗೆ ಒನ್ ಇಂಡಿಯಾ ಪ್ರಶಸ್ತಿ]
ಡಿಕೆ ಶಿವಕುಮಾರ್ ಹೇಳಿದ್ದೇನು : ತಮ್ಮ ವಿರುದ್ಧ ಎಸ್.ಆರ್.ಹಿರೇಮಠ ದಾಖಲೆ ಬಿಡುಗಡೆ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಡಿಕೆ ಶಿವಕುಮಾರ್, ಬೆನ್ನಿಗಾನಹಳ್ಳಿ ಡಿ-ನೋಟಿಫಿಕೇಷನ್ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಎಸ್.ಆರ್. ಹಿರೇಮಠ ತಡೆಹಿಡಿಯಲಾದ ಆರೋಪಪಟ್ಟಿಯ ದಾಖಲೆ ಬಿಡುಗಡೆ ಮಾಡುವ ಮೂಲಕ ಅನಾವಶ್ಯಕವಾಗಿ ವಿಷಯ ಕೆದಕುತ್ತಿದ್ದಾರೆ ಎಂದು ಹೇಳಿದ್ದಾರೆ.












Click it and Unblock the Notifications