ವಿದ್ಯಾರ್ಥಿಗಳೇ & ಪೋಷಕರೇ ಕ್ರೀಡಾ ವಸತಿ ಶಾಲೆ ಮತ್ತು ನಿಲಯಗಳ ಪ್ರವೇಶಕ್ಕೆ ವಿಶೇಷ ಅವಕಾಶ!
ಬೆಂಗಳೂರು: ಕ್ರೀಡಾ ವಸತಿ ಶಾಲೆ ಮತ್ತು ನಿಲಯಗಳಿಗೆ ಪ್ರತಿವರ್ಷ ಆಯ್ಕೆ ಶಿಬಿರಗಳ ಮೂಲಕ ಕ್ರೀಡಾಪಟುಗಳ ಆಯ್ಕೆ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಭಾಗದ ಬಾಲಕ ಮತ್ತು ಬಾಲಕಿಯರಿಗೆ ಮತ್ತೊಂದು ವಿಶೇಷ ಅವಕಾಶ ನೀಡುವ ದೃಷ್ಟಿಯಿಂದ ಈಗ ಮಹತ್ವದ ನಿರ್ಧಾರ ಕೈಗೊಂಡು, 2025-26ನೇ ಸಾಲಿನಲ್ಲಿ ವಿಶೇಷ ಆಯ್ಕೆ ಶಿಬಿರವನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ.
ಯುವ ಸಬಲೀಕರಣ & ಕ್ರೀಡಾ ಇಲಾಖೆ ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಅಂದಹಾಗೆ ಯುವ ಸಬಲೀಕರಣ & ಕ್ರೀಡಾ ಇಲಾಖೆಯು ರಾಜ್ಯದಾದ್ಯಂತ ಒಟ್ಟಾರೆ 02 ಕ್ರೀಡಾ ವಸತಿ ಶಾಲೆ ಹಾಗೂ 32 ಕ್ರೀಡಾ ವಸತಿ ನಿಲಯ ಹೊಂದಿದೆ. ಈ ಕ್ರೀಡಾ ವಸತಿ ಶಾಲೆಗಳು ಹಾಗೇ ನಿಲಯಗಳಿಗೆ 5ನೇತರಗತಿ, 8ನೇ ತರಗತಿ ಮತ್ತು ಪ್ರಥಮ ಪಿಯುಸಿ ಹಂತದ ಕ್ರೀಡಾಪಟುಗಳಿಗೂ ಪ್ರವೇಶಾವಕಾಶ ನೀಡಲಾಗುತ್ತಿದೆ.

ಇನ್ನು ಇಲ್ಲಿ ಆಯ್ಕೆ ಆಗುವ ಕ್ರೀಡಾಪಟುಗಳಿಗೆ, ಹಲವು ವ್ಯವಸ್ಥೆ ನೀಡಲಾಗುತ್ತದೆ. ಉಚಿತ ಊಟೋಪಹಾರ, ವಸತಿ, ವೈಜ್ಞಾನಿಕ ಕ್ರೀಡಾ ತರಬೇತಿ ಸೇರಿ ಕ್ರೀಡಾ ಸಲಕರಣೆ ಹಾಗೂ ಕ್ರೀಡಾ ಸಮವಸ್ತ್ರವನ್ನು ನೀಡುವ ಜೊತೆಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ದಿನಭತ್ಯೆ & ಪ್ರಯಾಣ ಭತ್ಯೆ ಕೂಡ ಒದಗಿಸುವ ವ್ಯವಸ್ಥೆ ಇರುತ್ತದೆ.
ಕ್ರೀಡಾ ಶಿಬಿರಗಳು ನಡೆಯುವುದು ಯಾವಾಗ?
ಯುವ ಸಬಲೀಕರಣ & ಕ್ರೀಡಾ ಇಲಾಖೆ ವತಿಯಿಂದ ಕರ್ನಾಟಕದ ಹಲವು ಭಾಗದಲ್ಲಿ ಕ್ರೀಡಾ ಶಿಬಿರ ಹಮ್ಮಿಕೊಂಡಿದ್ದು. ಏಪ್ರಿಲ್ 15ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಸೇರಿ ಬಾಸ್ಕೆಟ್‌ಬಾಲ್, ವಾಲಿಬಾಲ್, ಫೆನ್ಸಿಂಗ್, ಆರ್ಚರಿ ಶಿಬಿರ ನಡೆಯಲಿದೆ. ಜೊತೆಯಲ್ಲೇ ಧಾರವಾಡದ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್ ವಾಲಿಬಾಲ್, ಸೈಕ್ಲಿಂಗ್‌ನ ಶಿಬಿರ ನಡೆಯಲಿದೆ.
ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕುಸ್ತಿ ಮತ್ತು ಕಬ್ಬಡಿ, ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಪುಟ್ಬಾಲ್, ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ, ಹಾಕಿ, ತುಮಕೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಮ್ನಾಸ್ಟಿಕ್ಸ್, ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜೂಡೋ ಆಯ್ಕೆಗಾಗಿ ಕ್ರೀಡಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಹಾಗೂ ಇನ್ನೊಂದು ಸುತ್ತಿನ ಕ್ರೀಡಾ ಶಿಬಿರ ಏಪ್ರಿಲ್ 17ಕ್ಕೆ ನಡೆಯಲಿದೆ.
ಕಲಬುರಗಿ ಜಿಲ್ಲೆಯಲ್ಲೂ ನಡೆಯಲಿದೆ ಶಿಬಿರ
ಅದೇ ರೀತಿ ಏಪ್ರಿಲ್ 17 ರಂದು ಕಲಬುರಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಕಬಡ್ಡಿ ಹಾಗೇ ಬೀದರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸೈಕ್ಲಿಂಗ್, ಬಳ್ಳಾರಿ ಪುಟ್ಬಾಲ್ ಕ್ರೀಡಾಂಗಣದಲ್ಲಿ ಪುಟ್ಬಾಲ್, ಗದಗ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ & ಚಿಕ್ಕಮಗಳೂರಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜುಡೋ ತರಬೇತಿ ಆಯ್ಕೆ ಶಿಬಿರಗಳನ್ನ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಯುವ ಸಹಾಯವಾಣಿ ಸಂಖ್ಯೆ 155265 ಅಥವಾ ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಉಪ/ಸಹಾಯಕ ನಿರ್ದೇಶಕರು, ಯುವ ಸಬಲೀಕರಣ & ಕ್ರೀಡಾ ಇಲಾಖೆ ಸಂಪರ್ಕಿಸಲು ತಿಳಿಸಲಾಗಿದೆ.












Click it and Unblock the Notifications