ನಟ ದರ್ಶನ್‌ಗೆ ಬಳ್ಳಾರಿ ಜೈಲಲ್ಲಿ ಅದೆಲ್ಲ ಚಾನ್ಸೇ ಇಲ್ಲ.. ಯಾಕೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಅವರನ್ನು ಒಂದೇ ಒಂದು ಫೋಟೋ ಇಂದು ಬಳ್ಳಾರಿ ಜೈಲಿನವೆರೆಗೆ ಕರೆದೊಯ್ದಿದೆ. ಜೈಲಿನಲ್ಲಿ ಸ್ಟೈಲಾಗಿ ಕಾಫಿ ಮಗ್ ಹಿಡ್ಕೊಂಡು, ಸಿಗರೇಟ್ ಸೇದಿಕೊಂಡು ಕುಳಿತಿದ್ದ ದರ್ಶನ್ ಫೋಟೋ ಲೀಕ್ ಆಗಿದ್ದೇ ನೋಡಿ..ಕಥೆ ರಾಜಧಾನಿ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದೆ.
ಈ ಫೋಟೋ ವೈರಲ್ ಆದ ಬೆನ್ನಲ್ಲೇ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಕೊಡಲಾಗುತ್ತಿದೆ ಎಂಬ ಆರೋಪಗಳು ಜೋರಾಗಿ ಕೇಳಿಬಂದವು. ಈ ಸಂಬಂಧ ಜೈಲಿನ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡು ಸಸ್ಪೆಂಡ್ ಕೂಡ ಮಾಡಿ ಆಯ್ತು. ಇದು ಸರ್ಕಾರಕ್ಕೂ ಮುಜುಗರ ತಂದೊಡ್ಡಿದ್ದರಿಂದ, ಈ ವಿಚಾರ ಹೀಗೆಯೇ ಬಿಟ್ಟರೆ ಮುಂದೆ ಮತ್ತಷ್ಟು ಅನಾಹುತಗಳು ಸಂಭವಿಸಬಹುದು ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ದರ್ಶನ್ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಸೂಚಿಸಿದ್ದರು.

ಅದರಂತೆ ಬಳ್ಳಾರಿ ಜೈಲಿಗೆ ದರ್ಶನ್ ಅವರು ಸ್ಥಳಾಂತರಿಸಲಾಗಿದೆ. ಇದರ ಜೊತೆಗೆ ಪರಪ್ಪನ ಅಗ್ರಹಾರದಲ್ಲಿ ನಡೆದ ಯಾವ ಘಟನೆಗಳೂ ಬಳ್ಳಾರಿಯಲ್ಲಿ ಮರುಕಳಿಸಬಾರದು ಎಂದು ಈ ಬಾರಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ದರ್ಶನ್ ಬೆಂಗಳೂರಿನಲ್ಲಿರುವಂತೆ ಬಳ್ಳಾರಿ ಜೈಲಿನಲ್ಲಿರಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಹೇಗೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಕಾರಾಗೃಹ ಹಿರಿಯ ಅಧಿಕಾರಿಗಳು ವಿಶೇಷ ರೂಲ್ಸ್ ಜಾರಿ ತಂದಿದ್ದಾರೆ. ಅದೇನಂದ್ರೆ, ದರ್ಶನ್ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಬೇಕು ಹಾಗೂ ಆ ಸೆಲ್‌ಗೆ 24x7 ಅವಧಿಗೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇರಿಸಬೇಕು. ಪ್ರತಿದಿನವೂ ಈ ರೆಕಾರ್ಡಿಂಗ್‌ಗಳನ್ನು ಸ್ಟೋರೇಜ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ದರ್ಶನ್ ಇರುವ ಸೆಲ್ ಕಾಯಲು ಪ್ರತ್ಯೇಕವಾಗಿ ಒಬ್ಬ ಅಧಿಕಾರಿ ಇರಲಿದ್ದಾರೆ. ಈ ಸೆಲ್‌ಗೆ ಜೈಲರ್ ಪ್ರತಿದಿನ ಭೇಟಿ ನೀಡಿ ಭದ್ರತೆಯನ್ನು ಚೆಕ್ ಮಾಡಲಿದ್ದಾರೆ. ಜೈಲಿನ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಸೆಲ್‌ಗೆ ಬೀಗ ಹಾಕುವುದು ಮತ್ತು ಬೀಗ ತೆಗೆಯುವುದು ನಡೆಯಲಿದೆ. ದರ್ಶನ್ ಸೆಲ್‌ಗೆ ನಿಯೋಜಿಸುವ ಅಧಿಕಾರಿ ಕಡ್ಡಾಯವಾಗಿ ಬಾಡಿವೋರ್ನ್' ಕ್ಯಾಮೆರಾ ಧರಿಸಲಿದ್ದಾರೆ. ಹಾಗಾಗಿ ದರ್ಶನ್ ಅವರ ಪ್ರತಿ ಚಲನವಲನವೂ ಕಣ್ಗಾವಲಿನಲ್ಲಿರಲಿದೆ.

ಭೇಟಿಗೆ ಯಾರಿಗೆಲ್ಲ ಅವಕಾಶ?: ಇನ್ನು ನಟ ದರ್ಶನ್ ಭೇಟಿ ವಿಚಾರದಲ್ಲೂ ಅಧಿಕಾರಿಗಳು ಖಡಕ್ ರೂಲ್ಸ್ ತಂದಿದ್ದಾರೆ. ದರ್ಶನ್ ಭೇಟಿಗೆ ಬರುವವರ ಪೈಕಿ ಅವರ ಪತ್ನಿ, ರಕ್ತಸಂಬಂಧಿ ಹಾಗೂ ವಕೀಲರ ಭೇಟಿಗೆ ಮಾತ್ರ ಅವಕಾಶ ಸಿಗಲಿದೆ. ಉಳಿದಂತೆ ಸಿನಿಮಾ ಚಿತ್ರರಂಗದ ಕಲಾವಿದರು, ಅಭಿಮಾನಿಗಳು ಅಥವಾ ರಾಜಕೀಯ ನಾಯಕರ ಭೇಟಿಗೆ ಅವಕಾಶ ಇರುವುದಿಲ್ಲ.
ಜೈಲಿನಲ್ಲಿ ಸಾಮಾನ್ಯರಂತೆ ಬರುವ ಕೈದಿಗಳಂತೆಯೇ ಅವರಿಗೆ ಕೊಡುವ ಸೌಲಭ್ಯಗಳನ್ನು ಮಾತ್ರ ನೀಡಬೇಕು. ಜೈಲಿನಲ್ಲಿ ದರ್ಶನ್ ಬೇರೆ ಕೈದಿಗಳ ಜೊತೆಗೆ ಸೇರುವಂತಿಲ್ಲ. ಈ ಬಗ್ಗೆ ಅಧಿಕಾರಿಗಳು ನಿಗಾ ಇಡಬೇಕು ಜೊತೆಗೆ ಜೈಲಿನ ಸುತ್ತಲೂ ಸೂಕ್ತ ಭದ್ರತೆ ಒದಗಿಸಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications