Special Train: ಓಣಂ ಹಬ್ಬದ ಪ್ರಯುಕ್ತ ಮೈಸೂರು-ಕಣ್ಣೂರು-ಬೆಂಗಳೂರು ನಡುವೆ ವಿಶೇಷ ರೈಲುಗಳ ಸಂಚಾರ
ಬೆಂಗಳೂರು : ಕೇರಳಿಗರ ನಾಡಹಬ್ಬ ಓಣಂ ಸಮೀಪಿಸುತ್ತಿದ್ದಂತೆ, ನೆರೆರಾಜ್ಯದಲ್ಲಿ ನೆಲೆಸಿರುವ ಲಕ್ಷಾಂತರ ಮಲಯಾಳಿಗಳು ತಮ್ಮ ತವರಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾರೆ. ಪ್ರತಿ ವರ್ಷ ಹಬ್ಬದ ಸಂದರ್ಭದಲ್ಲಿ ಉಂಟಾಗುವ ವಿಪರೀತ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹಾಗೂ ಪ್ರಯಾಣಿಕರನ್ನ ಖಾಸಗಿ ಬಸ್‌ಗಳ ದುಬಾರಿ ದರದಿಂದ ಪಾರುಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಸುಗಮ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಮೈಸೂರು - ಕಣ್ಣೂರು - ಬೆಂಗಳೂರು ಕಂಟೋನ್ಮೆಂಟ್ ನಡುವೆ ತಲಾ ಎರಡು ಟ್ರಿಪ್‌ಗಳಂತೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ತೀರ್ಮಾನಿಸಿದೆ. ಇದರಿಂದ ಕರಾವಳಿ ಕೇರಳಕ್ಕೆ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಭಾರಿ ರಿಲೀಫ್ ಸಿಕ್ಕಂತಾಗಿದೆ.

ರೈಲು ಸಂಚಾರದ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಮೊದಲ ಟ್ರಿಪ್: ರೈಲು ಸಂಖ್ಯೆ 06227 ಮೈಸೂರು-ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ಆಗಸ್ಟ್ 25, 2026 (ಮಂಗಳವಾರ) ರಂದು ರಾತ್ರಿ 22:30 ಗಂಟೆಗೆ ಮೈಸೂರು ರೈಲು ನಿಲ್ದಾಣದಿಂದ ಹೊರಡಲಿದ್ದು, ಮರುದಿನ ಮಧ್ಯಾಹ್ನ 14:00 ಗಂಟೆಗೆ ಕಣ್ಣೂರು ತಲುಪಲಿದೆ. ಅಲ್ಲಿಂದ ಹಿಂತಿರುಗುವ ಮಾರ್ಗದಲ್ಲಿ, ರೈಲು ಸಂಖ್ಯೆ 06228 ಕಣ್ಣೂರು-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ಆಗಸ್ಟ್ 26, 2026ರಂದು ಸಂಜೆ 18:25 ಗಂಟೆಗೆ ಕಣ್ಣೂರಿನಿಂದ ತನ್ನ ಪ್ರಯಾಣ ಆರಂಭಿಸಿ, ಮರುದಿನ ಬೆಳಿಗ್ಗೆ 08:35 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವನ್ನು ತಲುಪಲಿದೆ.
ಎರಡನೇ ಟ್ರಿಪ್: ರೈಲು ಸಂಖ್ಯೆ 06229 ಮೈಸೂರು-ಕಣ್ಣೂರು ವಿಶೇಷ ಎಕ್ಸ್‌ಪ್ರೆಸ್ ಆಗಸ್ಟ್ 29, 2026 (ಶನಿವಾರ) ರಂದು ಮಧ್ಯರಾತ್ರಿ 23:55 ಗಂಟೆಗೆ ಮೈಸೂರಿನಿಂದ ಹೊರಟು, ಮರುದಿನ (ಭಾನುವಾರ) ಸಂಜೆ 17:50 ಗಂಟೆಗೆ ಕಣ್ಣೂರು ನಿಲ್ದಾಣವನ್ನು ತಲುಪಲಿದೆ. ಹಾಗೆಯೇ, ಹಿಂದಿರುಗುವಾಗ ರೈಲು ಸಂಖ್ಯೆ 06230 ಕಣ್ಣೂರು-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ಆಗಸ್ಟ್ 30, 2026 (ಭಾನುವಾರ) ರಂದು ಸಂಜೆ 19:45 ಗಂಟೆಗೆ ಕಣ್ಣೂರಿನಿಂದ ಹೊರಟು, ಸೋಮವಾರ ಬೆಳಿಗ್ಗೆ 10:00 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಮಾರ್ಗಮಧ್ಯದ ನಿಲುಗಡೆಗಳು
ಈ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿವೆ. ಮೈಸೂರಿನಿಂದ ಹೊರಡುವ ಈ ರೈಲು ಮಂಡ್ಯ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು, ಕೃಷ್ಣರಾಜಪುರಂ (ಕೆ.ಆರ್. ಪುರಂ), ಬಂಗಾರಪೇಟೆ ಜಂಕ್ಷನ್, ತಮಿಳುನಾಡಿನ ಸೇಲಂ ಜಂಕ್ಷನ್, ಈರೋಡ್ ಜಂಕ್ಷನ್, ತಿರುಪ್ಪೂರು, ಪೊದನೂರು ಜಂಕ್ಷನ್, ಕೇರಳದ ಪಾಲಕ್ಕಾಡ್ ಜಂಕ್ಷನ್, ಶೋರನೂರು ಜಂಕ್ಷನ್, ತಿರೂರು, ಕೋಝಿಕ್ಕೋಡ್, ವಡಕರ ಮತ್ತು ತಲಶ್ಶೇರಿ ನಿಲ್ದಾಣಗಳಲ್ಲಿ ನಿಲ್ಲಲಿದೆ. ಕಣ್ಣೂರಿನಿಂದ ಹಿಂತಿರುಗುವ ರೈಲು ಇದೇ ಮಾರ್ಗದಲ್ಲಿ ಚಲಿಸಿ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ.
ಬೋಗಿಗಳ ವಿವರ ಹಾಗೂ ಟಿಕೆಟ್ ಕಾಯ್ದಿರಿಸುವಿಕೆ
ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ಈ ವಿಶೇಷ ರೈಲುಗಳಲ್ಲಿ ಒಟ್ಟು 20 ಬೋಗಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ 1 ಎಸಿ ಟು-ಟೈಯರ್ ಬೋಗಿ, 2 ಎಸಿ ತ್ರೀ-ಟೈಯರ್ ಬೋಗಿಗಳು, 9 ಸ್ಲೀಪರ್ ಕ್ಲಾಸ್ ಬೋಗಿಗಳು, 6 ಸಾಮಾನ್ಯ ದ್ವಿತೀಯ ದರ್ಜೆ ಅಂದರೆ ಜನರಲ್ ಬೋಗಿಗಳು ಹಾಗೂ 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ ಎಂದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿರುವ ಗಿರೀಶ ಧರ್ಮರಾಜ ಕಲಗೊಂಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ವಿಶೇಷ ರೈಲುಗಳಿಗೆ ಐಆರ್‌ಸಿಟಿಸಿ ಅಧಿಕೃತ ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಕಾಯ್ದಿರಿಸುವಿಕೆ ಸೌಲಭ್ಯ ಲಭ್ಯವಿದ್ದು, ಹಬ್ಬದ ಸಂದರ್ಭದಲ್ಲಿ ಟಿಕೆಟ್‌ಗಳು ಬಹುಬೇಗನೆ ಬುಕಿಂಗ್ ಆಗುವ ಸಾಧ್ಯತೆಯಿರುವುದರಿಂದ ಪ್ರಯಾಣಿಕರು ಆದಷ್ಟು ಬೇಗ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳುವುದು ಸೂಕ್ತ ಎಂದು ರೈಲ್ವೆ ಇಲಾಖೆ ಸಲಹೆ ನೀಡಿದೆ.


Click it and Unblock the Notifications
