ಮುಂದಿನ ಎರಡು ವರ್ಷಗಳಲ್ಲಿ ಆರು ಲಕ್ಷ ಹಳ್ಳಿಗಳಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕ!
ಬೆಂಗಳೂರು, ಆ. 17: ಬೃಹತ್ ಪ್ರಮಾಣದ 'ಭಾರತ್ ನೆಟ್' ಯೋಜನೆ ಅನುಷ್ಠಾನಗೊಳ್ಳುತ್ತಿದ್ದು ಮುಂದಿನ ಎರಡು ವರ್ಷಗಳಲ್ಲಿ ಪ್ರತಿಯೊಂದು ಗ್ರಾಮವನ್ನೂ ಡಿಜಿಟಲ್ ಸಂಪರ್ಕದ ಮೂಲಕ ಜೋಡಿಸಲಾಗುವುದು. ಬ್ರಾಡ್‌ಬ್ಯಾಂಡ್ ಅಂತರ್ಜಾಲ 6 ಲಕ್ಷ ಹಳ್ಳಿಗಳನ್ನು ತಲುಪಲಿದ್ದು, 2.8 ಲಕ್ಷ ಗ್ರಾಮಗಳು ಈಗಾಗಲೇ ಇದರಡಿ ಸಂಪರ್ಕ ಪಡೆದಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಜನಾಶೀರ್ವಾದ ಯಾತ್ರೆ ಕುರಿತು ವಿವರಿಸಿ ಶಿವಮೊಗ್ಗದಲ್ಲಿ ಮಂಗಳವಾರ ಮಾತನಾಡಿದ ಅವರು, "ಇದಲ್ಲದೆ ಡಿಜಿಟಲ್ ವಿಲೇಜ್ ಪರಿಕಲ್ಪನೆಯೂ ಜಾರಿಯಲ್ಲಿದೆ. 5 ಸಾವಿರ ಗ್ರಾಮಗಳ ಪ್ರತಿ ಮನೆಗೆ ಕಡಿಮೆ ಬೆಲೆಯ ಉಪಕರಣದ ಮೂಲಕ ಮಾದರಿ ಯೋಜನೆ ಜಾರಿಗೊಳ್ಳುತ್ತಿದೆ. ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೊಂದು ಡಿಜಿಟಲ್ ವಿಲೇಜ್ ಇರುತ್ತದೆ" ಎಂದು ವಿವರಿಸಿದರು.
ಮನೆಯಿಂದಲೇ ಕೆಲಸ ಪರಿಕಲ್ಪನೆಯಿಂದ ಬೆಂಗಳೂರಿನ ಮೇಲಿನ ಉದ್ಯೋಗದ ಒತ್ತಡ ಕಡಿಮೆ ಆಗಲಿದೆ. ಉದ್ಯೋಗಾವಕಾಶಗಳು ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧೆಡೆ ಹಂಚಿಹೋಗಲಿವೆ. ಕೋವಿಡೋತ್ತರ ವಾಸ್ತವ ಇದಾಗಿದೆ. ಶಿವಮೊಗ್ಗ ಸೇರಿ ವಿವಿಧ ಜಿಲ್ಲೆಗಳಿಗೆ ಇದೊಂದು ವಿಶೇಷ ಅವಕಾಶ. ಕೌಶಲ-ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ರಾಜ್ಯಕ್ಕೆ ಒದಗಿಸಲು ತಾವು ಬದ್ಧವಿರುವುದಾಗಿ ಇದೇ ವೇಳೆ ವಿವರಿಸಿದರು.

ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ ಒಂದೆರಡು ದಿನಗಳಲ್ಲಿ ಆಗಲಾರದು. ಆದರೆ, ಕೋವಿಡ್ ನಂತರ ವಿಶ್ವದ ವಿವಿಧ ದೇಶಗಳು ಈಗ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಭಾರತದತ್ತ ನೋಡುತ್ತಿವೆ. 2014ರಲ್ಲಿ ದೇಶದ ಇಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆಯು 1.9 ಲಕ್ಷ ಕೋಟಿ ಇತ್ತು. 2020ರಲ್ಲಿ ಅದು 5.3 ಲಕ್ಷ ಕೋಟಿಗೆ ಏರಿದೆ. ಉತ್ಪಾದನೆ ಕ್ಷೇತ್ರದಲ್ಲಿ ಚೀನಾ ಬದಲು ಭಾರತ ಮುಂಚೂಣಿ ನೆಲೆಯಲ್ಲಿದೆ ಎಂದರು.
ಬಳಕೆದಾರರ ರಕ್ಷಣೆ-ಹಿತಾಸಕ್ತಿ ಕಾಪಾಡುವ ಹೊಸ ಕಾಯಿದೆಗಳನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾರಿಗೊಳಿಸಲಾಗುತ್ತಿದೆ. ತಂತ್ರಜ್ಞಾನ ಕೌಶಲದ ಶಿಕ್ಷಣ ಇಂದಿನ ಅಗತ್ಯವಾಗಿದೆ. ನೂತನ ಶಿಕ್ಷಣ ನೀತಿಯು (ಎನ್‍ಇಪಿ) ಉದ್ಯೋಗಾವಕಾಶಗಳನ್ನು ನೀಡಲಿದೆ ಎಂದರು. ಇದರಡಿ ಕೌಶಲ್ಯ ಸಂಬಂಧಿ ಶಿಕ್ಷಣಕ್ಕೆ ಅವಕಾಶವಿದೆ ಎಂದು ರಾಜೀವ್ ಚಂದ್ರಶೇಖರ್ ವಿವರಿಸಿದರು.
ಐಟಿಐಗಳು, ಜನ್ ಶಿಕ್ಷಾ ಸಂಸ್ಥಾನ್, ಪ್ರಧಾನಿ ಕೌಶಲ ಕೇಂದ್ರ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಕಳೆದ 5 ವರ್ಷಗಳಲ್ಲಿ 2 ಕೋಟಿ ಯುವಜನರು ಕೌಶಲಾಭಿವೃದ್ಧಿ ಮಾಡಿಕೊಂಡಿದ್ದಾರೆ. ಕಡಿಮೆ ಕಾಲಾವಧಿಯ ಕೋರ್ಸ್ ಮಾಡಿಕೊಂಡವರಲ್ಲಿ ಶೇ 60 ಜನರು ಉದ್ಯೋಗಾವಕಾಶ ಪಡೆದುಕೊಳ್ಳುತ್ತಿದ್ದಾರೆ. ಸರಕಾರಿ ಐಟಿಐಯ ಶೇ 82 ವಿದ್ಯ್ಯಾರ್ಥಿಗಳು ಉದ್ಯೋಗ ಪಡೆದರೆ, ಖಾಸಗಿ ಐಟಿಐ ತರಬೇತಾದ ಶೇ 55ರಿಂದ 60 ವಿದ್ಯಾರ್ಥಿಗಳು ಉದ್ಯೋಗ ಪಡೆಯುತ್ತಿದ್ದಾರೆ ಎಂದರು. ಈ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಲು ಯತ್ನ ನಡೆದಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವವದಲ್ಲಿ ಕಳೆದ 7 ವರ್ಷಗಳಲ್ಲಿ ಭಾರತವು ಅದ್ವಿತೀಯ ಸಾಧನೆ ಮಾಡಿದೆ. ಇನ್ನು ಮುಂದಿನ 25 ವರ್ಷಗಳ ಕಾಲ ಬಿಜೆಪಿ ಆಡಳಿತದಲ್ಲಿ ಇರಬೇಕು. ಆಗ 2047ರಲ್ಲಿ ದೇಶವು ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಆಯುಷ್ಮಾನ್ ಭಾರತ್, ಜಲಜೀವನ್ ಮಿಷನ್, ಡಿಜಿಟಲ್ ಗ್ರಾಮ, ಅಂತ್ಯೋದಯ-ಇವೆಲ್ಲವೂ ದೇಶದ ಕಟ್ಟಕಡೆಯ ಮನುಷ್ಯರ ಕಲ್ಯಾಣಕ್ಕಾಗಿ ರೂಪಿಸಲ್ಪಟ್ಟಿವೆ. ಬಿಜೆಪಿ ಅತ್ಯುತ್ತಮ ಆಡಳಿತ ನೀಡುತ್ತಿದ್ದು, ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ ಎಂದು ವಿವರಿಸಿದರು.
ಕರ್ನಾಟಕದ ಬಿಜೆಪಿ ಸರಕಾರವು ಕೋವಿಡ್, ನೆರೆಯಂಥ ಸವಾಲುಗಳನ್ನು ಎದುರಿಸಿದರೂ ಅತ್ಯುತ್ತಮವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಜೊತೆ ಸಮನ್ವಯದೊಂದಿಗೆ ದೇಶ ಮತ್ತು ನಾಡಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.
Recommended Video
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications