ಆಳಂದ 6000 ಮತಗಳವು : ಎಸ್‌ಐಟಿ ತನಿಖೆಗೆ ಸರ್ಕಾರ ಆದೇಶ
ಗದಗ, ಸೆಪ್ಟೆಂಬರ್ 20 : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಬಗ್ಗೆ ಮಾಡಿರುವ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿಯವರು ಅಳಂದ ಕ್ಷೇತ್ರದಲ್ಲಿ ಸುಮಾರು 6000 ಮತದಾರರ ಹೆಸರನ್ನು ಕೈಬಿಟ್ಟಿರುವ ಮತಗಳ್ಳತನದ ವಿಚಾರವನ್ನು ಉಲ್ಲೇಖಿಸಿದ್ದು, ಇದು ಸತ್ಯವಾಗಿದೆ. ಆಳಂದದಲ್ಲಿರುವ ಮತಗಳ್ಳತನ ಪ್ರಕರಣದ ಬಗ್ಗೆ ಎಸ್ ಐ ಟಿ ತನಿಖೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ರಾಜ್ಯದಲ್ಲಿ ನಡೆಸಲುದ್ದೇಶಿಸಿರುವ ಸಮೀಕ್ಷೆ ಕೇವಲ ಜಾತಿಸಮೀಕ್ಷೆಯಾಗಿರದೇ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಜನರ ಜಾತಿಯ ವಿವರ ಪಡೆಯುವ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ವಿವರ ಪಡೆದು, ಅವಕಾಶ ವಂಚಿತರಿಗೆ ಸಮಾನ ಅವಕಾಶಗಳನ್ನು ನೀಡಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಾತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ನಡಿ ವಿವಿಧ ಜಾತಿಗಳನ್ನು ಉಲ್ಲೇಖಿಸಲಾಗುವುದೇ ಎಂಬುದಕ್ಕೆ ಉತ್ತರಿಸಿ, ಇದರ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಲಾಗಿದ್ದು, ಅನಗತ್ಯವಿರುವ ಅಂಶಗಳನ್ನು ತೆಗೆದುಹಾಕಲು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ. ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನಷ್ಟೇ ಸರ್ಕಾರ ನೀಡಿದೆ. 1,75,000 ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕರ ನಿಯೋಜಿತರಾಗಿದ್ದಾರೆ. ಒಬ್ಬ ಶಿಕ್ಷಕರು ತಲಾ 150 ಮನೆಗಳಿಂದ ಮಾಹಿತಿ ಸಂಗ್ರಹಿಸಲಿದ್ದು, ಈ ಸಮೀಕ್ಷಾ ಕಾರ್ಯ 15 ದಿನಗಳ ಕಾಲ ನಡೆಯಲಿದೆ. ಸಮೀಕ್ಷೆಯಲ್ಲಿ ಧರ್ಮ, ಜಾತಿ, ಉಪಜಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಿದ್ದಾರೆ ಎಂದರು.
ಜಾತಿಗಣತಿಯ ಹಿಂದೆ ಷಡ್ಯಂತ್ರವಿದೆ ಎಂದು ವಚನಾನಂದ ಸ್ವಾಮೀಜಿಗಳು ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರವೂ ಜಾತಿಸಮೀಕ್ಷೆ ನಡೆಸಲಿದ್ದು, ಅದರಲ್ಲಿಯೂ ಷಡ್ಯಂತ್ರವಿರಲಿದೆಯೇ? ಸಮೀಕ್ಷೆಗೆ ಯಾವುದೇ ಸಚಿವರು ವಿರೋಧ ವ್ಯಕ್ತಪಡಿಸಿಲ್ಲ. ಸಮಾಜದಲ್ಲಿ ಸಮಾನತೆ ತರಲು ಬಡವರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕಾಗುತ್ತದೆ ಎಂದರು.
ಸಮೀಕ್ಷೆಯ ನಿರ್ಧಾರವನನ್ನು ಮರುಪರಿಶೀಲಿಸಲು ಮಾನ್ಯ ರಾಜ್ಯಪಾಲರು ಸೂಚನೆ ನೀಡುವಂತೆ ಬಿಜೆಪಿಯವರು ಮನವಿ ಸಲ್ಲಿಸಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆಯ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ಸಮೀಕ್ಷೆಯ ವಿಚಾರದಲ್ಲಿ ಜಾತಿ ಒಡೆಯುವ ಪ್ರಶ್ನೆಯೇ ಇಲ್ಲ ಎಂದರು. ಕುರುಬ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಬಗ್ಗೆ ಪ್ರತಿಕ್ರಯಿಸಿ, ಕುರುಬ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಶಿಫಾರಸ್ಸನ್ನು ಹಿಂದಿನ ಬಿಜೆಪಿ ಸರ್ಕಾರವೇ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರಸರ್ಕಾರ ವಾಪಸ್ಸು ಕಳಿಸಿದ್ದು, ಅದಕ್ಕೆ ವಿವರಣೆಯನ್ನು ಸರ್ಕಾರ ನೀಡಲಿದೆ. ಯಾವುದೇ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತದೆ ಎಂದರು.
ರಾಜ್ಯದಲ್ಲಿ ಭಾರಿ ಮಳೆಯಿಂದ ಬೆಳೆಹಾನಿ ಸಂಭವಿಸಿರುವ ಬಗ್ಗೆ ಉತ್ತರಿಸುತ್ತಾ, ರಾಜ್ಯದಲ್ಲಿ ಸಂಭವಿಸಿರುವ ಬೆಳೆಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಬೆಳೆ ಪರಿಹಾರ ನೀಡಲಾಗುವುದು. ಗದಗ ಜಿಲ್ಲೆಯಲ್ಲಿ ಇನ್ನೆರೆಡು ದಿನಗಳಲ್ಲಿ ಜಂಟಿಸಮೀಕ್ಷೆಯ ಪೂರ್ಣಗೊಳ್ಳಲಿದೆ ಎಂದರು.
ರಸ್ತೆಗುಂಡಿಗಳ ಬಗ್ಗೆ ಬಿಜೆಪಿಯವರು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಯಿಸಿ, ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಿರುವ ಕಾರಣ, ರಸ್ತೆಗಳು ಹಾಳಾಗಿರುವುದು ನಿಜ. ಈ ಬಗ್ಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಸಭೆ ನಡೆಸಿ , ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗುವುದು. ಬಿಜೆಪಿಯ ಅಧಿಕಾರಾವಧಿಯಲ್ಲಿ ಒಂದೂ ರಸ್ತೆಯನ್ನೂ ನಿರ್ಮಿಸಿಲ್ಲ ಹಾಗೂ ರಸ್ತೆಗುಂಡಿಯನ್ನೂ ಮುಚ್ಚಿರುವುದಿಲ್ಲ ಎಂದರು.












Click it and Unblock the Notifications