ಪಂಚಮಸಾಲಿ ಮೀಸಲಾತಿ; ಜ.13 ರಂದು ಬಸವರಾಜ ಬೊಮ್ಮಾಯಿ ಶಿಗ್ಗಾವಿಯಲ್ಲಿನ ಮನೆ ಮುಂದೆ ಸತ್ಯಾಗ್ರಹ: ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ, ಜನವರಿ 10: ಮೀಸಲಾತಿ ಹುಸಿ ಭರವಸೆ ಕೊಟ್ಟು ಹೋರಾಟದ ದಾರಿ ತಪ್ಪಿಸಿದ ಸರಕಾರಕ್ಕೆ ಬಿಸಿ ಮುಟ್ಟಿಸಲು ಜನವರಿ 13 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿಯಲ್ಲಿನ ಮನೆ ಮುಂದೆ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಣಿದ ಸರಕಾರ ಸಮುದಾಯಕ್ಕೆ ಪ್ರತ್ಯೇಕ ಗುಂಪು ರಚಿಸಿ ಮೀಸಲಾತಿ ಸೌಲಭ್ಯ ಕಲ್ಪಿಸುವ ಭರವಸೆ ಕೊಟ್ಟು ಹೋರಾಟ ನಿಲ್ಲಿಸಿದ್ದರು. ನಂತರ ಡಿ.29 ರಂದು ಸಚಿವ ಸಂಪುಟ ಸಭೆ ಕರೆದು ಕೈಗೊಂಡ ನಿರ್ಧಾರಗಳ ಕುರಿತು ಇಂದಿಗೂ ಅಧಿಸೂಚನೆ ಹೊರಡಿಸದೆ ಸ್ವತಃ ಸರಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋರಾಟದ ದಿಕ್ಕು ತಪ್ಪಿಸಿರುವುದರಿಂದ ಸಚಿಚ ಸಂಪುಟದ ನಿರ್ಣಯಗಳನ್ನು ನಾವು ತಿರಸ್ಕರಿಸಿದ್ದೇವೆ.
ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುವ ನಿರ್ಧಾರ ಮಾಡಲಾಗಿದ್ದು, ಜ.13 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿಯ ಸಿಎಂ ಮನೆಯಿಂದಲೇ ಹೋರಾಟ ಆರಂಭಿಸುತ್ತೇವೆ. ಶಿಗ್ಗಾವಿ ಹೋರಾಟವನ್ನೆ ಸಂಕ್ರಾಂತಿ ಎಂದು ಆಚರಿಸೋಣ. ನ್ಯಾಯ ಸಿಕ್ಕರೆ ಮಾತ್ರ ನಿಜವಾಗಿ ಹಬ್ಬ ಆಚರಿಸೋಣ ಎಂದು ಸಮುದಾಯ ಜನತೆಗೆ ಸೂಚನೆ ನೀಡಲಾಗಿದೆ ಎಂದರು.

ಇನ್ನೂ ವಾಲ್ಮೀಕಿ ಸಮುದಾಯದ ಬೇಡಿಕೆಗೆ ವಾರದಲ್ಲಿಯೇ ಅಧಿಸೂಚನೆ ಹೊರಡಿಸಿರುವ ಸರಕಾರ ಮತ್ತು ಸಿಎಂ ಪಂಚಮಸಾಲಿ ಮೀಸಲಾತಿ ಹೋರಾಟ ವಿಷಯದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಹುಸಿ ಭರವಸೆ ಕೊಟ್ಟಿರುವ ಸರಕಾರ ಮಾತು ಉಳಿಸಿಕೊಳ್ಳಲ ಜನವರಿ 12 ರ ವರೆಗೆ ಇನ್ನೂ 48 ಗಂಟೆಗಳ ಕಾಲಾವಕಾಶವಿದೆ. ತಕ್ಷಣ ಮೀಸಲಾತಿ ವಿಷಯವಾಗಿ ಕೈಗೊಂಡ ನಿರ್ಣಯಗಳ ಕುರಿತು ಅಧಿಸೂಚನೆ ಹೊರಡಿಸಬೇಕು ಎಂದು ಎಚ್ಚರಿಕೆ ನೀಡಿದ ಶ್ರೀಗಳು, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಅಡ್ಡಿ ಮಾಡುತ್ತಿರುವ ಸಚಿವರು, ಶಾಸಕರು ಮತ್ತು ಪ್ರಭಾವಿಗಳ ಪಟ್ಟಿ ಕೂಡ ಶಿಗ್ಗಾವಿಯಲ್ಲಿ ನಡೆಯುವ ಸತ್ಯಾಗ್ರಹ ಸಂದರ್ಭದಲ್ಲಿಯೇ ಬಿಡುಗಡೆ ಮಾಡುತ್ತೇವೆ.

ಸರಕಾರದ ಜತೆಗೆ ಅಡ್ಡಿ ಮಾಡಿದವರ ವಿರುದ್ಧ ಯಾವ ರೀತಿ ಹೋರಾಟ ನಡೆಸಬೇಕು ಎನ್ನುವ ರೂಪರೇಷೆ ಕೂಡ ಕೈಗೊಳ್ಳಲಾಗುವುದು ಎಂದು ಬಸವಜಯ ಮೃತ್ಯಂಜಯ ಸ್ವಾಮೀಜಿ ಹೇಳಿದರು.
ಇನ್ನೂ ಈ ವೇಳೆ ಸಮುದಾಯ ಮುಖಂಡರಾದ ಪಂಚನಗೌಡ ದ್ಯಾಮನಗೌಡರ, ಅಡವೇಶ ಇಟಗಿ, ಆರ್.ಕೆ.ಪಾಟೀಲ್, ರಾಮನಗೌಡ ಪಾಟೀಲ್, ರಾಜು ಮಗದುಮ್ಮ, ಗುಂಡು ಪಾಟೀಲ್ ಸೇರಿದಂತೆ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.












Click it and Unblock the Notifications