ಎಂಟಿಬಿ ಎದೆ ಬಗೆದು ನೋಡೋಕೆ ಆಗುತ್ತದೆಯೇ? : ಸಿದ್ದರಾಮಯ್ಯ
ಬೆಂಗಳೂರು, ಜುಲೈ 12 : 'ನನ್ನ ಎದೆ ಬಗೆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಇರುತ್ತಾರೆ'. ಇದು ವಸತಿ ಸಚಿವ, ಹೊಸಕೋಟೆ ಶಾಸಕ ಎಂ. ಟಿ. ಬಿ. ನಾಗರಾಜ್ ಅವರು ಜನವರಿಯಲ್ಲಿ ನೀಡಿದ್ದ ಹೇಳಿಕೆ. ಈಗ ಜುಲೈ ತಿಂಗಳು ಎಲ್ಲವೂ ಬದಲಾಗಿದೆ. ಎಂ. ಟಿ. ಬಿ. ನಾಗರಾಜ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಆಪ್ತ ಶಿಷ್ಯನ ಈ ನಡೆ ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ. 'ಈಗ ನಾನು ಅವರ ಎದೆ ಬಗೆದು ನೋಡೋಕೆ ಆಗುತ್ತದೆಯೇ?' ಎಂದು ಶುಕ್ರವಾರ ಸಿದ್ದರಾಮಯ್ಯ ಅವರು ಮಾಧ್ಯಮಗಳ ಮುಂದೆ ಮಾತನಾಡುವಾಗ ಹೇಳಿದರು.
ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ನನ್ನ ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂತ ಎಂ. ಟಿ. ಬಿ. ನಾಗರಾಜ್ ಹೇಳ್ತಿದ್ರು. ಅವ್ರೇ ರಾಜೀನಾಮೆ ಕೊಟ್ಟಿದ್ದಾರೆ, ಈಗ ನಾನು ಅವರ ಎದೆ ಬಗೆದು ನೋಡೋಕೆ ಆಗುತ್ತದೆಯೇ?' ಎಂದು ಪ್ರಶ್ನಿಸಿದರು.

'ಶಾಸಕರ ಅನರ್ಹತೆಯ ಬಗ್ಗೆ ಸಭಾಧ್ಯಕ್ಷರು ನಿರ್ಣಯ ಕೈಗೊಳ್ಳುತ್ತಾರೆ. ಎರಡು ಪಕ್ಷಗಳ ನಾಯಕರು ಚರ್ಚಿಸಿ ವಿಶ್ವಾಸಮತ ಯಾಚನೆಯ ನಿರ್ಧಾರಕ್ಕೆ ಬಂದಿದ್ದೇವೆ, ಅದರಲ್ಲಿ ಯಶಸ್ವಿ ಕೂಡ ಆಗುತ್ತೇವೆ' ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
'ನಾವೇನು ಬಿಜೆಪಿಯವರಂತೆ ಅಪರೇಷನ್, ಸರ್ಜರಿ ಇಂತಹ ಹೀನ ರಾಜಕಾರಣ ಮಾಡುವವರಲ್ಲ. ವಿಶ್ವಾಸ ಮತ ಸಾಬೀತು ಹೇಗೆ ಮಾಡುತ್ತೇವೆ? ಎಂದು ಕಾದು ನೋಡಿ ಅಷ್ಟೆ' ಎಂದು ಖಡಕ್ ಆಗಿ ತಿಳಿಸಿದರು.
'ರಾಜಕಾರಣ ಇರೋದು ಜನ ಸೇವೆ ಮಾಡಲು ಎಂಬುದನ್ನೇ ಕೆಲವರು ಮರೆತಿದ್ದಾರೆ. ಅಂಥವರಿಗೆ ಕಾಲವೇ ತಕ್ಕ ಉತ್ತರ ನೀಡಲಿದೆ. ರೋಷನ್ ಬೇಗ್ ಅವರನ್ನು ಅಮಾನತ್ತು ಮಾಡಲಾಗಿದೆ. ರಾಮಲಿಂಗಾ ರೆಡ್ಡಿ ಅವರ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಅತೃಪ್ತ ಶಾಸಕರನ್ನ ಅನರ್ಹಗೊಳಿಸಲು ಸ್ಪೀಕರ್‌ಗೆ ಮನವಿ ಸಹ ಮಾಡಿದ್ದೇವೆ' ಎಂದರು.
'ಸಿದ್ದಾಂತವಿಲ್ಲದ ಜೊಳ್ಳುಗಳೆಲ್ಲ ಹಾರಿ ಹೋಗಿದ್ದು, ನಮ್ಮ ಪಕ್ಷ ಹಿಂದಿಗಿಂತ ಈಗ ಮತ್ತಷ್ಟು ಸದೃಢವಾಗಿದೆ ಎಂಬ ಖುಷಿಯಿದೆ' ಎಂದು ಸಿದ್ದರಾಮಯ್ಯ ಹೇಳಿದರು.












Click it and Unblock the Notifications