3 ಗಂಟೆಗೆ ಸಿದ್ದರಾಮಯ್ಯ ರಾಜೀನಾಮೆ: ದಿಢೀರ್ ಇಂದೋರ್‌ಗೆ ಹೋದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದು ಬಹುತೇಕ ಅಂತಿಮವಾಗಿದೆ. ಇದೀಗ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯುತ್ತಿದ್ದು, ಇಂದು ಮೂರು ಗಂಟೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಲಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ ಎಂ. ಪಟ್ಟಣ ಅವರು, ನನಗಿರುವ ಮಾಹಿತಿಯ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 28ರ ಗುರುವಾರ ಮಧ್ಯಾಹ್ನ ರಾಜೀನಾಮೆ ಕೊಡಲಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಕೊಡಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸೂಚನೆ ಕೊಟ್ಟಿದ್ದಾರೆ. ಈ ಅವಕಾಶ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸಿಗಬಹುದು. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಾಗ ಹೋಗಲಿದ್ದೇವೆ. ಒಳ್ಳೆಯ ಸಮರ್ಥ ನಾಯಕನನ್ನು ಎಲ್ಲರೂ ಸೇರಿ ಆಯ್ಕೆ ಮಾಡಲಿದ್ದೇವೆ ಎಂದು ಅವರು ಹೇಳಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದೋರ್‌ಗೆ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದರು. ಎರಡು ಬಾರಿ ಭೇಟಿಗೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು. ರಾಜ್ಯಪಾಲರು ಸಹ ಸಿದ್ದರಾಮಯ್ಯ ಅವರಿಗೆ ಮಧ್ಯಾಹ್ನ 3 ಗಂಟೆಗೆ ಸಮಯ ಸಹ ಕೊಟ್ಟಿದ್ದರು. ಆದರೆ ಇದೀಗ ರಾಜ್ಯಪಾಲರು ಏಕಾಏಕಿ ಇಂದೋರ್‌ಗೆ ತೆರಳಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ - ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತಮ್ಮ ಪತ್ನಿಯ ಆರೋಗ್ಯದಲ್ಲಿ ಏರಪೇರು ಆಗಿರುವುದರಿಂದ ಬುಧವಾರ ತಡ ರಾತ್ರಿ ದಿಢೀರ್ ಇಂದೋರ್‌ಗೆ ಹೋಗಿದ್ದಾರೆ. ಅವರು ಮರಳಿ ಬರುವ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ ಎಂದು ಲೋಕಭವನದ ಮೂಲಗಳು ತಿಳಿಸಿವೆ.

ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಕಾರ್ಯದರ್ಶಿಗಳಿಗೆ ರಾಜೀನಾಮೆ ಪತ್ರ ಕೊಡುವ ಸಾಧ್ಯತೆ ಇದೆ. ಆದರೆ ಕಾರ್ಯದರ್ಶಿಗಳು ರಾಜ್ಯಪಾಲರಂತೆ ಅಧಿಕಾರ ಹೊಂದಿರುವುದಿಲ್ಲ. ಅರ್ಜಿಗಳನ್ನು ಸ್ವೀಕರಿಸಬಹುದು. ರಾಜೀನಾಮೆ ಅಂಗೀಕಾರವು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬಂದ ನಂತರವೇ ಆಗಲಿದೆ ಎಂದು ಹೇಳಲಾಗಿದೆ.












Click it and Unblock the Notifications