ಉಳ್ಳವನೇ ಭೂಮಿ ಒಡೆಯ ಅಂತಿದೆ ಬಿಜೆಪಿ: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು: ಉಳುವವನೇ ಭೂಮಿ ಒಡೆಯ ಎನ್ನುವುದನ್ನ ಬಿಜೆಪಿ ಉಲ್ಟಾ ಮಾಡಿದ್ದು, ಈಗ ಉಳ್ಳವನೇ ಭೂಮಿ ಒಡೆಯ ಅಂತಿದೆ ಬಿಜೆಪಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 108 ನೇ ಜನ್ಮ ದಿನಾಚರಣೆ, ಮತ್ತು ಅರಸು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವರಾಜ ಅರಸು ಅವರ ಕಾರ್ಯಕ್ರಮಗಳ ಅನುಕೂಲವನ್ನ ಪಡೆದ ಫಲಾನುಭವಿಗಳು ಮತ್ತು ಅವರ ಮಕ್ಕಳು ಶಾಶ್ವತವಾಗಿ ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯುವ ಸಮೂಹಕ್ಕೆ ಕರೆ ನೀಡಿದರು. ಕನ್ನಡ ನೆಲ ಸಾಮಾಜಿಕ ನ್ಯಾಯವನ್ನು ಕ್ರಾಂತಿಕಾರಿಯಾಗಿ ಜಾರಿ ಮಾಡಿದ ಇತಿಹಾಸವನ್ನು ಹೊಂದಿದೆ. ಬಸವಣ್ಣ ಅವರಿಂದ ಹಿಡಿದು ಕೃಷ್ಣರಾಜ ಒಡೆಯರು ಮತ್ತು ದೇವರಾಜ ಅರಸು ಅವರ ತನಕ ಸಾಮಾಜಿಕ ನ್ಯಾಯ ಒದಗಿಸಿದ ಚರಿತ್ರೆ ನಮ್ಮ ನಾಡಿಗೆ ಇದೆ. ಅಧಿಕಾರ ಮತ್ತು ಸಂಪತ್ತು ಕೆಲವರ ಕೈಯಲ್ಲಿ ಮಾತ್ರ ಇರಬಾರದು ಎನ್ನುವ ಆಶಯ ಬಸವಣ್ಣನವರ ಕಾಲದಿಂದಲೂ ಈ ನೆಲದಲ್ಲಿ ನೆಲೆಯೂರಿದೆ ಎಂದರು.

ಮೀಸಲಾತಿ ಜಾರಿ ಮಾಡುವ ಎದೆಗಾರಿಕೆ...
ಕಾಗೋಡು ಹೋರಾಟ ಮತ್ತು ಗೇಣಿ ಹೋರಾಟದ ಫಲಾನುಭವಿಗಳು ಮತ್ತು ಈಗಿನ ಪೀಳಿಗೆಯ ಯುವಕ ಯುವತಿಯರು ಇದನ್ನ ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ ನ್ಯಾಯದ ಪರವಾಗಿ ಇರಬೇಕು ಎಂದರು. ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಇದ್ರು ಅದು ಜಾರಿ ಆಗಿರಲಿಲ್ಲ. ರಾಜ್ಯದಲ್ಲಿ ದೇವರಾಜ ಅರಸ ಅವರು ಸಿಎಂ ಆಗಿ ಹಾವನೂರು ವರದಿ ತರಿಸಿಕೊಂಡು ಅದನ್ನು ಜಾರಿ ಮಾಡುವ ಎದೆಗಾರಿಕೆ ತೋರಿಸಿದರು. ಹೀಗೆ ಮಾಡುವಾಗ ಎಲ್ಲಾ ಜಾತಿ-ಸಮುದಾಯದ ವಿಶ್ವಾಸ ಗಳಿಸಿದ್ರು. ಈ ಮೂಲಕ ಅವರು ಸಂವಿಧಾನ ಬದ್ದವಾದ ಮೀಸಲಾತಿಯನ್ನ ಕನ್ನಡ ನೆಲದಲ್ಲಿ ಜಾರಿ ಮಾಡಿದರು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಅರಸು ಪ್ರಶಸ್ತಿ ನೀಡಿ ಗೌರವ
ಸಮಾಜವಾದಿ ಚಳವಳಿ ಮತ್ತು ಗೇಣಿ ಹೋರಾಟಗಾರ ಕಾಗೋಡು ತಿಮ್ಮಪ್ಪ ಅವರಿಗೆ ದೇವರಾಜ ಅರಸು ಪ್ರಶಸ್ತಿ ಲಭಿಸಿರುವುದು ಪ್ರಶಸ್ತಿ ಮೌಲ್ಯ ಹೆಚ್ಚಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಇದೇ ವೇಳೆ ಅಭಿಪ್ರಾಯಪಟ್ಟರು. ನಾನು ಮುಖ್ಯಮಂತ್ರಿ ಆಗಿರುವ ಅವಧಿಯಲ್ಲೇ ಈಗ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿ ಲಭಿಸಿರುವುದು ನನಗೆ ಅತ್ಯಂತ ಖುಷಿಯಾಗಿದೆ. ಬಹಳಷ್ಟು ಯುವ ನಾಯಕರನ್ನು ಕಾಗೋಡು ತಿಮ್ಮಪ್ಪ ಬೆಳೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸಿಎಂ ಸಿದ್ದರಾಮಯ್ಯ.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ಎಸ್ ತಂಗಡಗಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ , ಶಾಸಕ ಗೋಪಾಲಕೃಷ್ಣ ಬೇಳೂರು, ನಾಗರಾಜ ಯಾದವ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಉಪಸ್ಥಿತರಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಅರಸು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.












Click it and Unblock the Notifications