Cabinet Reshuffle: ದೆಹಲಿ ಭೇಟಿ ವೇಳೆ ಸಿದ್ದರಾಮಯ್ಯಗೆ ನಿರಾಸೆ: ಜ.14ರ ಸಂಕ್ರಾಂತಿ ಬಳಿಕ ಸಂಪುಟ ಪುನರ್‌ರಚನೆ ಸಾಧ್ಯತೆ
ನವದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ವಿಷಯ ಚರ್ಚೆಯಲ್ಲಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿತ್ತು. ಪಕ್ಷದ ಮಹತ್ವದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಪಕ್ಷದ ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಕಾಂಗ್ರೆಸ್ ವರಿಷ್ಠರ ಭೇಟಿಗೆ ಅವಕಾಶ ನೀಡದ್ದರಿಂದ ಸಿದ್ದರಾಮಯ್ಯ ಅವರಿಗೆ ನಿರಾಸೆ ಆಯಿತು.
ದೆಹಲಿಗೆ ಶುಕ್ರವಾರವೇ ತೆರಳಿದ್ದ ಸಿದ್ದರಾಮಯ್ಯ ಅವರು ನೆನ್ನೆ ಶನಿವಾರ (ಡಿಸೆಂಬರ್ 27) ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಾಕಾರಿಣಿ ಸಭೆಯಲ್ಲಿ ಪಾಲ್ಗೊಂಡರು. ಅವರೊಂದಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಸುಖುವಿಂದರ್ ಸಿಂಗ್ ಸುಖು ಸೇರಿ ಹಲವಾರು ಹಿರಿಯ ನಾಯಕರು ಪಾಲ್ಗೊಂಡಿದ್ದರು. ವೋಟ್ ಚೋರಿ, ಎಂನರೇಗಾ ಹೆಸರು ಬದಲಾವಣೆ, ಹೋರಾಟಗಳ ಕುರಿತು ಚರ್ಚಿಸಲಾಯಿತು.

ಇದೇ ವೇಳೆ ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕವಾಗಿ ಸಭೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚರ್ಚಿಸಲಿದ್ದಾರೆ. ನಾಯಕತ್ವ ಬದಲಾವಣೆ ಗೊಂದಲಗಳ ಬಗ್ಗೆ ಮಾತನಾಡಿ ಪರಿಹಾರ ಕಂಡು ಕೊಳ್ಳುತ್ತಾರೆ. ರಾಜ್ಯ ರಾಜಕಾರಣದಲ್ಲಿ ಹೊಸ ಬೆಳವಣಿಗೆ ನಡೆಯಲಿವೆ ಎಂದೆಲ್ ಊಹಿಸಲಾಗಿತ್ತು. ಆದರೆ ಪಕ್ಷದ ವಿವಿಧ ಕಾರ್ಯಗಳನ್ನು ರಾಹುಲ್ ಗಾಂಧಿ ಅವರು ಕಾರ್ಯ ನಿರತರಾಗಿದ್ದರು. ಅಲ್ಲದೇ ಎರಡು ವಾರಗಳ ವಿದೇಶಿ ಪ್ರವಾಸಕ್ಕೆ ತೆರಳುವವರಿದ್ದರು. ಹೀಗಾಗಿ ರಾಹುಲ್ ಗಾಂಧಿಯವರ ಭೇಟಿಗೆ ಅವಕಾಶ ಸಿಗಲಿಲ್ಲ.
ಸಂಕ್ರಾಂತಿ ಬಳಿಕ ರಾಜ್ಯ ಸಚಿವ ಸಂಪುಟ ಪುನರ್‌ರಚನೆ
ಸದ್ಯ ಸಿಎಂಗೆ ಮಾತ್ರವೇ ದೆಹಲಿಗೆ ಆಹ್ವಾನ ನೀಡಲಾಗಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಕರೆದಿರಲಿಲ್ಲ. ಮುಂದಿನ ತಿಂಗಳು ಜನವರಿ ಮಧ್ಯದಲ್ಲಿ ರಾಷ್ಟ್ರ ರಾಜಧಾನಿಗೆ ಸಿದ್ದರಾಮಯ್ಯ ಅವರು ಮತ್ತೆ ಭೇಟಿ ನೀಡುವ ಸಾಧ್ಯತೆಗಳಿವೆ. ಆಗ ಸಂಕ್ರಾಂತಿ ಹಬ್ಬದ ನಂತರ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆಗೆ ಅನುಮೋದನೆ ಪಡೆಯುವುದು ಹಾಗೂ ನಾಯಕತ್ವ ಬದಲಾವಣೆ ಬಗ್ಗೆ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ಅನುಮೋದನೆ ನೀಡಿದಲ್ಲಿ ಮಾರ್ಚ್ ಕರ್ನಾಟಕ ಬಜೆಟ್ ಅಧಿವೇಶನ 2026 ಮೊದಲೇ ಸುಮಾರು 10 ಸಚಿವರ ಬದಲಾವಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಹೊಸ ವರ್ಷಕ್ಕೆ ರಾಜ್ಯ ರಾಜಕಾರಣದಲ್ಲಿ ಮಹತ್ವ ಬದಲಾವಣೆ ನಿರೀಕ್ಷಿಸಲಾಗಿದೆ.
ಕೇರಳ ಸಿಎಂಗೆ ತಿರುಗೇಟು: ಜಿಬಿಎ ನಡೆ ಸಮರ್ಥನೆ
ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆ ನಿವಾಸಿಗಳನ್ನು ಅಕ್ರಮವಾಗಿ ತೆರವು ಮಾಡಲು ಕರ್ನಾಟಕ ಸರ್ಕಾರ ಬುಲ್ಡೋಜರ್ ನ್ಯಾಯ ಅನುಸರಿಸುತ್ತಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಹೇಳಿದ್ದರು. ಇದಕ್ಕೆ ದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಕೋಗಿಲು ಬಡಾವಣೆಯಲ್ಲಿ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಅದು ಜನ ವಸತಿಗೆ ಯೋಗ್ಯವಾದ ಸ್ಥಳ ಅಲ್ಲ. ಹೀಗಾಗಿ ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ಬೇರೆಡೆಗೆ ಸ್ಥಳಾಂತರ ಆಗುವಂತೆ ನೋಟೀಸ್ ನೀಡಿದ್ದರೂ ಅವರು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಆ ಜಾಗದಿಂದ ತೆರವುಗೊಳಿಸಲಾಗಿದೆ.
ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯ ತ್ಯಾಜ್ಯ ವಿಲೇವಾರಿ ಸ್ಥಳದಲ್ಲಿ ಹಲವರು ಅತಿಕ್ರಮವಾಗಿ ಗುಡಿಸಲು ನಿರ್ಮಿಸಿಕೊಂಡಿದ್ದರು, ಅದು ಜನ ವಸತಿಗೆ ಯೋಗ್ಯವಾದ ಸ್ಥಳವಾಗಿರಲಿಲ್ಲ. ಅಲ್ಲಿನ ಕುಟುಂಬಗಳಿಗೆ ಹಲವು ಬಾರಿ ಬೇರೆಡೆಗೆ ಸ್ಥಳಾಂತರ ಆಗುವಂತೆ ನೋಟೀಸ್ ನೀಡಿದ್ದರೂ ಅವರು ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರನ್ನು ಆ…
— Siddaramaiah (@siddaramaiah) December 27, 2025
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಅವರ ಜೊತೆ ಮಾತನಾಡಿದ್ದೇನೆ. ತೆರವು ಮಾಡಲಾದ ಕುಟುಂಬಗಳಿಗೆ ತಾತ್ಕಾಲಿಕ ಆಶ್ರಯ, ಊಟ ಇನ್ನಿತರೆ ವ್ಯವಸ್ಥೆ ಮಾಡಿಕೊಡುವಂತೆ ಸೂಚನೆ ನೀಡಿದ್ದೇನೆ. ಅಲ್ಲಿ ಅತಿಕ್ರಮವಾಗಿ ವಾಸವಿದ್ದ ಬಹುತೇಕರು ವಲಸೆ ಕಾರ್ಮಿಕರು, ಸ್ಥಳೀಯ ನಿವಾಸಿಗಳಲ್ಲ, ಆದರೂ ಕೂಡ ಮಾನವೀಯತೆ ದೃಷ್ಟಿಯಿಂದ ಅವರಿಗೆ ಸೂಕ್ತ ವಸತಿ ವ್ಯವಸ್ಥೆ ಮಾಡಿಕೊಡುತ್ತೇವೆ.
ಬುಲ್ಡೋಜರ್ ನ್ಯಾಯಕ್ಕೂ, ಅಕ್ರಮ ಒತ್ತುವರಿ ತೆರವಿಗೂ ಅಜಗಜಾಂತರ ವ್ಯತ್ಯಾಸವಿದೆ. ಪಿಣರಾಯಿ ವಿಜಯನ್ ಅವರು ವಾಸ್ತವ ಸಂಗತಿಗಳ ಅರಿವಿಲ್ಲದೆ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದರು.












Click it and Unblock the Notifications