Karnataka: ಕಾಂಗ್ರೆಸ್‌ನಿಂದ 'ಗೂಂಡಾರಾಜ್' ಸ್ಥಾಪಿಸುವ ಪ್ರಕ್ರಿಯೆ ಆರಂಭ: ಸಂಸದ
ಬೆಂಗಳೂರು, ಏಪ್ರಿಲ್ 29: ಕರ್ನಾಟಕ ಕಾಂಗ್ರೆಸ್ ಪಕ್ಷದ ಮಿತಿ ಮೀರಿದ ಓಲೈಕೆಯಿಂದ ಈಗಾಗಲೇ ಕೆಲವು ನಿರ್ದಿಷ್ಟ ಸಮುದಾಯದ ಪುಂಡರು ಈ ನೆಲದ ಕಾನೂನಿನ ಮೇಲೆ ಸವಾರಿ ಮಾಡುತ್ತಿದ್ದಾರೆ. ಇಷ್ಟು ದಿನ ಅವರು ಮಾಡುತ್ತಿದ್ದರು, ಇದೀಗ ಮುಖ್ಯಮಂತ್ರಿ ಹಾಗೂ ರಾಜ್ಯ ಸಚಿವೆ ಪೊಲೀಸರ ಜೊತೆಗೆ ನಡೆದುಕೊಂಡ ರೀತಿ ಖಂಡನೀಯ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ದೂರಿದ್ದಾರೆ.
ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ವಿರುದ್ಧ ಬೆಳಗಾವಿಯಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪೊಲೀಸರೊಂದಿಗೆ ನಡೆದುಕೊಂಡ ರೀತಿ ಸರಿಯಲ್ಲ. ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಕೆಲವು ನಿರ್ದಿಷ್ಟ ಸಮುದಾಯದ ಪುಂಡರು ಅಹಿಕರತವಾಗಿ ವರ್ತಿಸಿದ್ದಾರೆ. ಅದಕ್ಕೆ ಪೂರಕವಾದ ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ. ದಾವಣಗೆರೆಯ ಚನ್ನಗಿರಿ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗಳ ಮೇಲೆ ದಾಳಿಗೆ ಸ್ಪಷ್ಟ ನಿದರ್ಶನ ಎಂದರು.

ಹುಬ್ಬಳ್ಳಿ ಗಲಭೆ ಕೇಸ್‌ನಲ್ಲಿಯೂ ಅತೀ ಗಂಭೀರ ಪ್ರಕರಣದಲ್ಲಿ ಭಾಗಿಯಾದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಸಂವಿಧಾನ ಹಾಗೂ ಇಲ್ಲಿನ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ತಂದಿತ್ತು. ಮಾತ್ರವಲ್ಲದೇ ಕಾಂಗ್ರಸ್ ಸರ್ಕಾರ ಗಲಭೆಕೋರರ ಬೆನ್ನಿಗೆ ನಿಂತಿತು.
ಗೂಂಡಾರಾಜ್ಯ ಸ್ಥಾಪಿಸುವ ಪ್ರಕ್ರಿಯೆ ಆರಂಭ
ಇದೀಗ ಸೋಮವಾರ ಬೆಳಗಾವಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಖಂಡನಾರ್ಹ ರೀತಿಯಲ್ಲಿ ನಡೆದುಕೊಂಡಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯ ಘನತೆ ಹಾಗೂ ಗೌರವವನ್ನು ತಗ್ಗಿಸಿ, ರಾಜ್ಯದಲ್ಲಿ ಗೂಂಡಾರಾಜ್ ಸ್ಥಾಪಿಸುವ ಪ್ರಕ್ರಿಯೆಯ ಮೊದಲ ಹೆಜ್ಜೆಯಂತೆ ಭಾಸವಾಗುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ರಾಜ್ಯದಲ್ಲಿ ಈಗಾಗಲೇ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿಪಡಿಸಲು, ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕಾಗಿದ್ದು ರಾಜ್ಯ ಸರ್ಕಾರ. ಆದರೆ ಸರ್ಕಾರವೇ ಇಂದು ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಯತ್ನ ನಡೆಸಿದ್ದು ನಾಚಿಗೇಡಿನ ವಿಚಾರ ಎಂದು ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡೆ ಟೀಕಿಸಿದರು.
ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಿಕೊಡಲಾಗಿದೆ. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿದ್ದಾರೆ. ರಾಜ್ಯದ ಪೋಲೀಸ್ ಇಲಾಖೆಯನ್ನು ದುರ್ಬಲಗೊಳಿಸಲಾಗಿದೆ. ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಸುವ ಕಾಂಗ್ರೆಸ್ ಸರ್ಕಾರದ ಟೂಲ್‌ಕಿಟ್ ಅನ್ನು ಇಂದಿನ ಬೆಳಗಾವಿಯ ಪ್ರಕರಣ ಬಯಲುಮಾಡಿದೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಈ ನೆಲದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ, ಕುಂದುಂಟಾದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಜಗದೀಶ್ ಶೆಟ್ಟರ್ ಎಚ್ಚರಿಸಿದರು.












Click it and Unblock the Notifications