ಅಧಿಕಾರ ಹಸ್ತಾಂತರ; ಸಿದ್ದರಾಮಯ್ಯ ದೊಡ್ಡವರು, ನಾವು ಚಿಕ್ಕವರು: ಡಿ.ಕೆ. ಶಿವಕುಮಾರ್ ಮಾತಿನ ಮರ್ಮವೇನು?
ಬೆಂಗಳೂರು, ನವೆಂಬರ್ 22: ಮುಖ್ಯಮಂತ್ರಿಗಳು ಐದು ವರ್ಷ ಇರುವುದಿಲ್ಲ ಎಂದು ನಾವುಗಳು ಹೇಳಿಲ್ಲ. ಅವರೇ ತಾನು ಐದು ವರ್ಷ ಇರುವುದಾಗಿ ಹೇಳಿದ್ದಾರೆ. ದೊಡ್ಡವರು ಹೇಳಿದ ಮೇಲೆ, ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸಿಎಂ ನುಡಿದಂತೆ ನಡೆಯುತ್ತಿದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಅವರು ಎಲ್ಲವನ್ನು ಹೇಳಿದ್ದಾರಲ್ಲ. ಮುಖ್ಯಮಂತ್ರಿಯವರ ಅಧಿಕಾರವನ್ನು ನಾವುಗಳು ಯಾರೂ ಪ್ರಶ್ನೆ ಮಾಡಿಲ್ಲ. ಸಂಪುಟ ಪುನಾರಚನೆ ಬಗ್ಗೆ ಅವರೇ ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.

ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಚರ್ಚಿಸಲು ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದು, ಅನಗತ್ಯವಾಗಿ ಊಹಾಪೋಹ ಸೃಷ್ಟಿಸಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಹಿರಿಯರ ಸಲಹೆ, ಮಾರ್ಗದರ್ಶನ ಅವಶ್ಯಕತೆ ಇದೆಯೋ ಆಗ ನಾನು ಭೇಟಿ ಮಾಡುವೆ. ಅವರು ನಮ್ಮ ನಾಯಕರು, ನಮ್ಮ ಪಕ್ಷದ ಅಧ್ಯಕ್ಷರು. ಅವರು ಬಂದಾಗ ಅವರನ್ನು ಭೇಟಿ ಮಾಡುವುದು, ನಮ್ಮ ಕರ್ತವ್ಯ. ಶಿಷ್ಟಾಚಾರದ ಬಗ್ಗೆ ನನಗೆ ಬೇರೆಯವರಿಗಿಂತ ಹೆಚ್ಚಿನ ಅರಿವಿದೆ. ಅವರು ನಮ್ಮ ರಾಜ್ಯದವರೇ ಆದರೂ ಅವರ ಹಿರಿತನ ಹಾಗೂ ಹುದ್ದೆಗೆ ನಾವು ಗೌರವ ನೀಡಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಘೋಷಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಈ ವಿಚಾರವಾಗಿ ಗುರುವಾರ ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚೆ ಮಾಡಿರುವೆ. ನೀವುಗಳು ಚುನಾವಣೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿರುವೆ. ಅವರೆಲ್ಲರೂ ಜವಾಬ್ದಾರಿ ಪಡೆದು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮಂತ್ರಿಗಳಿಗೂ ಜವಾಬ್ದಾರಿ ನೀಡಬೇಕಿದೆ. ಇನ್ನು ಪರಿಷತ್ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರ ಆಯ್ಕೆ ವಿಚಾರವಾಗಿ ಚರ್ಚೆ ಮಾಡಿರುವೆ ಎಂದು ತಿಳಿಸಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದೆ. ನವೆಂಬರ್ 19 ರಂದು ಇಂದಿರಾ ಗಾಂಧಿ ಅವರ ಜನ್ಮದಿನದಂದು ಬೆಂಗಳೂರಿನ 369 ವಾರ್ಡ್ ಗಳನ್ನು ಪ್ರಕಟಿಸಿದ್ದೇವೆ. ಈ ಚುನಾವನೆಗೂ ನಾವು ಅರ್ಜಿ ಸ್ವೀಕರಿಸಬೇಕಿದೆ. ಈ ವಿಚಾರವಾಗಿ ದೆಹಲಿ ನಾಯಕರ ಜೊತೆ ಚರ್ಚೆ ಮಾಡಿ ಮುಂದುವರಿಯುತ್ತೇನೆ ಎಂದರು. ನಾನು ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ನಮ್ಮ ಶಾಸಕರನ್ನು ಭೇಟಿ ಮಾಡಿರುವೆ. ರಾಜಕೀಯ ಕಾರಣಗಳಿಗೆ ಅವರನ್ನು ಜೈಲಿಗೆ ಹಾಕಲಾಗಿದೆ ಎಂದು ಹೇಳಿದರು.
ಸಿಎಂ ಅವರು ದೂರವಾಣಿ ಮೂಲಕ ಖರ್ಗೆ ಅವರ ಭೇಟಿಗೆ ಸಮಯ ಕೇಳಿದ್ದು, ನಾಳೆ ಸಮಯ ನೀಡಿದ್ದಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದರಲ್ಲಿ ತಪ್ಪೇನಿದೆ? ಅವರು ಮಾತನಾಡಬಾರದೇ? ಮುಖ್ಯಮಂತ್ರಿಗಳು ಎಐಸಿಸಿ ಅಧ್ಯಕ್ಷರ ಜೊತೆ ಮಾತನಾಡುವುದಿದ್ದರೆ ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.












Click it and Unblock the Notifications