ನಿರಾಣಿಗೆ ಮೈಶುಗರ್ ಮಾರಾಟಕ್ಕೆ ಡಿಕೆಶಿ, ಸಿದ್ದರಾಮಯ್ಯ ತೀವ್ರ ವಿರೋಧ ಯಾಕೆ?
ಬೆಂಗಳೂರು, ಜೂ. 07: ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಲೀಸ್ ಕೊಟ್ಟ ಬಳಿಕ, ಇದೀಗ ಮೈಶುಗರ್ ಮಾರಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆಯ ಪ್ರತಿಷ್ಠಿತ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಬಿಜೆಪಿ ಶಾಸಕ, ಮಾಜಿ ಸಚಿವ ಮುರುಗೇಶ್ ನಿರಾಣಿ ಒಡೆತನದ ಕಂಪನಿಗೆ ಮಾರಾಟ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ.
ಬಿಜೆಪಿ ಬಂಡಾಯದ ಬೆನ್ನಲ್ಲೆ ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್‌ಗೆ ಲೀಸ್ ಕೊಡಲಾಗಿತ್ತು. ಇದೀಗ ಮೈಶುಗರ್ ಕಂಪನಿಯನ್ನೂ ಮಾರಾಟ ಮಾಡಲು ಸರ್ಕಾರ ಮುಂದಾಗಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಾವಿರಾರು ಕೋಟಿ ರೂ.ಗಳ ಆಸ್ತಿ ಹೊಂದಿರುವ ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡಬಾರದು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಮಂಡ್ಯ ಜಿಲ್ಲೆಯಲ್ಲಿಯೂ ಕಾರ್ಖಾನೆ ಮಾರಾಟಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಬಿಜೆಪಿ ಬಂಡಾಯ ಶಮನಕ್ಕೆ ಪಾಂಡವಪುರ ಸಕ್ಕರೆ ಕಾರ್ಖಾನೆ ಕೊಡುಗೆ!

ಪಿಎಸ್‌ಎಸ್‌ಕೆ ಬಳಿಕ ಮೈಶುಗರ್ಸ್
ಮಂಡ್ಯ ಜಿಲ್ಲೆಯ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಶುಗರ್ಸ್ ಕಂಪನಿಗೆ ಕೊಡಲಾಗಿದೆ. ಇದೀಗ ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಮೈಸೂರು ಸಕ್ಕರೆ ಕಾರ್ಖಾನೆಯನ್ನೂ ನಿರಾಣಿ ಶುಗರ್ಸ್‌ಗೆ ಮಾರಾಟ ಮಾಡಲು ಸರ್ಕಾರ ಸಿದ್ಧತೆ ನಡೆಸಿದೆ.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಸಕ್ಕರೆ ಸಚಿವರಾಗಿದ್ದಾಗಲೇ ಮೈಶುಗರ್ ಲೀಸ್ ಕೊಡಲು ಪ್ರಯತ್ನಗಳು ನಡೆದಿದ್ದವು. ಕಾರ್ಖಾನೆ ಕಳೆದ ಮೂರು ವರ್ಷಗಳಿಂದ ನಷ್ಠದಲ್ಲಿ ಇದ್ದುದರಿಂದ 40 ವರ್ಷಗಳಿಗೆ ಲೀಸ್ ಆಧಾರದಲ್ಲಿ ಖಾಸಗಿಯವರಿಗೆ ಕೊಡಲು ಚರ್ಚೆಗಳು ನಡೆದಿದ್ದವು. ಆಗ ನಿರಾಣಿ ಶುಗರ್ಸ್ ಅಧಿಕಾರಿಗಳು ಮೈಶುಗರ್ ಸಕ್ಕರೆ ಕಾರ್ಖಾನೆಯ ಪರಿಶೀಲನೆ ನಡೆಸಿದ್ದರು ಎನ್ನಲಾಗಿದೆ. ಕಳೆದ ಡಿಸೆಂಬರ್ 31, 2019ಕ್ಕೆ ಕೊನೆಯಾಗುವಂತೆ 103.35 ಕೋಟಿ ರೂ. ಸಾಲದ ಹೊರೆಯನ್ನು ಮೈಶುಗರ್ ಕಾರ್ಖಾನೆ ಮೇಲಿತ್ತು. ಇದೀಗ ಸಾವಿರಾರು ಕೋಟಿ ರೂ.ಗಳ ಆಸ್ತಿ ಹೊಂದಿರುವ ಕಾರ್ಖಾನೆಯನ್ನು ಮಾರಾಟ ಮಾಡಬಾರದು ಎಂದು ವಿರೋಧ ಹೆಚ್ಚಾಗಿದೆ.

ಸಿಎಂಗೆ ಮಾಜಿ ಸಿಎಂ ಪತ್ರ
ಮೈಸೂರು ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಬಾರದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1933ರಲ್ಲಿ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಸ್ಥಾಪನೆ ಮಾಡಿದ್ದರು. ಮುಂದೆ ಅದನ್ನು ಮೈಶುಗರ್ ಎಂದು ಕರೆಯಲಾಯಿತು. ರಾಜ್ಯದ ಮೊದಲ ಹಾಗೂ ಎಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆ ಅದಾಗಿದೆ. ಪ್ರತಿದಿನ 5 ಸಾವಿರ ಟನ್‌ನಂತೆ ವಾರ್ಷಿಕ 9 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯಲಾಗುತ್ತಿತ್ತು.
ಸುಮಾರು 16,046 ರೈತರು ಕಾರ್ಖಾನೆ ಷೇರು ಹೊಂದಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 83,831 ಎಕರೆ ಪ್ರದೇಶದಲ್ಲಿ ಸುಮಾರು 35 ಲಕ್ಷ ಮೆಟ್ರಿಕ್ ಟನ್‌ಗೂ ಹೆಚ್ಚು ಕಬ್ಬನ್ನು ಬೆಳೆಯುತ್ತಾರೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ.

ವಿದ್ಯಾಸಂಸ್ಥೆಗಳನ್ನೂ ಹೊಂದಿದೆ
ಮೈಶುಗರ್ ಒಂದು ಮಾದರಿ ಕಾರ್ಖಾನೆಯಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ವಿದ್ಯಾಸಂಸ್ಥೆಗಳನ್ನೂ ಹೊಂದಿದೆ ಎಂದು ಪತ್ರದಲ್ಲಿ ಸಿದ್ದರಾಮಯ್ಯ ವಿವರಿಸಿದ್ದಾರೆ. ಜೊತೆಗೆ ಕಾರ್ಖಾನೆಯಲ್ಲಿ ಕೋ-ಜನರೇಷನ್, ಡಿಸ್ಟಿಲರಿ, ಗ್ಲೂಕೋಸ್, ಚಾಕ್ಲೇಟ್ ಮತ್ತು ಎಥನಾಲ್‌ನಂತಹ ವಸ್ತುಗಳನ್ನು ತಯಾರು ಮಾಡುವ ಸಾಮರ್ಥ್ಯ ಹೊಂದಿತ್ತು.
14ಕ್ಕೂ ಹೆಚ್ಚು ಫರ್ಮ್‌ಗಳು, ವಿದ್ಯಾ ಸಂಸ್ಥೆಗಳು ಮತ್ತು ರೈತ ಸಮುದಾಯ ಭವನಗಳನ್ನು ಹೊಂದಿರುವ ಕಂಪನಿಯು ಮಂಡ್ಯ ಜಿಲ್ಲೆಯೊಂದರಲ್ಲಿಯೆ ಸುಮಾರು 207 ಎಕರೆಗಳಿಗಿಂತ ಹೆಚ್ಚು ಭೂಮಿಯನ್ನು ಹೊಂದಿದೆ. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಕಾರ್ಖಾನೆ ಪುನಶ್ಚೇತನಕ್ಕೆ 229.65 ಕೋಟಿ ರೂ.ಗಳ ಅನುದಾನವನ್ನು ಕೊಟ್ಟಿತ್ತು. ಸಾವಿರಾರು ಕೋಟಿ ರೂ.ಗಳ ಆಸ್ತಿ ಹೊಂದಿರುವ ಕಂಪನಿಯನ್ನು ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಬಾರದು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಆಗ್ರಹಿಸಿದ್ದಾರೆ.

ಭಾವನಾತ್ಮಕ ಸಂಬಂಧವಿದೆ
ಮಂಡ್ಯ ಜನರಿಗೂ ಮೈಶುಗರ್ ಕಾರ್ಖಾನೆಗೂ ಭಾವನಾತ್ಮಕ ಸಂಬಂಧವಿದೆ. ಅದು ವ್ಯಾಪಾರ ವಸ್ತುವಾಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಡಿ.ಕೆ. ಶಿವಕುಮಾರ್ ಹೇಳಿಕೆ ಕೊಟ್ಟಿದ್ದಾರೆ. ಕಾರ್ಖಾನೆಯನ್ನು ಬಿಜೆಪಿ ನಾಯಕ ಹಾಗೂ ಉದ್ಯಮಿ ಮುರುಗೇಶ್ ನಿರಾಣಿ ಅವರಿಗೆ ಮಾರುವ ಬಗ್ಗೆ ಮಾಹಿತಿ ಇಲ್ಲ. ಖಾಸಗಿಯವರು ಕಾರ್ಖಾನೆ ನಡೆಸಬಹುದು ಸರ್ಕಾರ ನಡೆಸಲು ಸಾಧ್ಯವಿಲ್ಲವೇ? ಏನೇನು ನ್ಯೂನ್ಯತೆ ಇದೆಯೋ ಅದನ್ನು ಸರಿಪಡಿಸಿಕೊಂಡರೆ ಸಾಕು. ಕಾರ್ಖಾನೆಗೆ ದೊಡ್ಡ ಪ್ರಮಾಣದ ಆಸ್ತಿ ಇದೆ. ಸರ್ಕಾರಕ್ಕೆ ಕಾರ್ಖಾನೆ ನಡೆಸಲು ಆಗದಿದ್ದರೆ ಹೇಳಲಿ, ಅದನ್ನು ಹೇಗೆ ನಡೆಸುವುದು ಅಂತಾ ನಾವು ತೋರಿಸುತ್ತೇವೆ ಎಂದಿದ್ದಾರೆ.

ಎಚ್‌ಡಿಕೆ ವಿರೋಧ!
ರಾಜಕೀಯ ಉದ್ದೇಶದಿಂದ ಮಂಡ್ಯದ ಮೈಶುಗರ್ ಕಾರ್ಖಾನೆ ಮಾರಾಟಕ್ಕೆ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೂಡ ಮೈಶುಗರ್ ಕಾರ್ಖಾನೆ ಮಾರಾಟವನ್ನು ವಿರೋಧಿಸಿದ್ದಾರೆ.