ʼನಂಬಿದವರ ಚರ್ಮ ತೆಗೆದು ಸಿದ್ದರಾಮಯ್ಯನವರು ಚಪ್ಪಲಿ ಹಾಕಿ ಮೆರೆಯುತ್ತಿದ್ದಾರೆʼ
ಬೆಂಗಳೂರು, ಆಗಸ್ಟ್ 01: ದಲಿತರಿಗೆ ಅಂಗೈಯಲ್ಲೇ ಆಕಾಶ ತೋರಿಸಿದ ಕಾಂಗ್ರೆಸ್ ಪಕ್ಷ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು, ದಲಿತರನ್ನು ದಾರಿ ತಪ್ಪಿಸಿ ಮತ ಸೆಳೆದಿದ್ದರು. ಅಲ್ಲದೆ, 136 ಸೀಟು ಗೆದ್ದಿದ್ದಾಗಿ ಬೀಗಿದ್ದರು. ನಂಬಿದವರ ಚರ್ಮ ತೆಗೆದು ಸಿದ್ದರಾಮಯ್ಯನವರು ಚಪ್ಪಲಿ ಹಾಕಿ ಮೆರೆಯುತ್ತಿದ್ದಾರೆ ಎಂದು ರಾಜ್ಯ ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ದೂರಿದರು.
ಅತಿವೃಷ್ಟಿ, ಪ್ರವಾಹದ ಕಡೆ ಗಮನ ಕೊಡಬೇಕಾದ ರಾಜ್ಯದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ದಿನಕ್ಕೊಂದರಂತೆ ಹಗರಣಗಳು ಹೊರಕ್ಕೆ ಬರುತ್ತಿವೆ. ಸಾಲು ಸಾಲು ಹಗರಣಗಳಿಗೆ ಉತ್ತರ ಕೊಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುವ ಜೊತೆಗೆ ಹೋರಾಟ ಮಾಡಲು ಮುಂದಾಗಿದೆ ಎಂದು ಹೇಳಿದರು.

ಮೈಸೂರು ಮುಡಾದಲ್ಲಿ ಸಾವಿರಾರು ಕೋಟಿ ಮೊತ್ತದ ಹಗರಣ ಆಗಿದೆ. ಮುಖ್ಯಮಂತ್ರಿಗಳ ಕುಟುಂಬವೇ ಅದರಲ್ಲಿ ಪಾಲುದಾರರು. ವಾಲ್ಮೀಕಿ ನಿಗಮದಲ್ಲಿ ಪರಿಶಿಷ್ಟ ವರ್ಗಗಳ 187 ಕೋಟಿ ರೂಪಾಯಿಯನ್ನು ಲೂಟಿ ಮಾಡಲಾಗಿದೆ. ಚಂದ್ರಶೇಖರ್ ಎಂಬ ಅಧೀಕ್ಷಕರು ಆತಂಕದಿದ ಪ್ರಾಣತ್ಯಾಗ ಮಾಡಿದ್ದಾರೆ. ಇದೆಲ್ಲದಕ್ಕೂ ಮುಖ್ಯಮಂತ್ರಿಯವರ ಬಳಿ ಉತ್ತರ ಇಲ್ಲ ಎಂದು ಟೀಕಿಸಿದರು.
ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದು, ಅವರನ್ನು ಬಂಧಿಸಲಾಗಿದೆ. ಅಂಗೈ ಹುಣ್ಣಿಗೆ ಕನ್ನಡಿ ಹುಡುಕುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಇದನ್ನು ಸಹಿಸಿಕೊಂಡು ಬಿಜೆಪಿ ಕುಳಿತಿರಲು ಅಸಾಧ್ಯ ಎಂದು ನುಡಿದರು.
ಶ್ರಮ, ಪಕ್ಷನಿಷ್ಠೆ, ಜನಸಂಪರ್ಕ ಮತ್ತಿತರ ವಿಚಾರಗಳನ್ನು ಗುರುತಿಸಿ ತಮ್ಮನ್ನು ಮೇಲ್ಮನೆ ವಿಪಕ್ಷ ನಾಯಕನಾಗಿ ನೇಮಿಸಿದ ಪಕ್ಷದ ನಾಯಕತ್ವಕ್ಕೆ ಅವರು ಧನ್ಯವಾದ ಸಲ್ಲಿಸಿದರು. ನೆರೆ, ಪ್ರವಾಹ ಪೀಡಿತ ಪ್ರದೇಶಕ್ಕೆ ಆರು ತಂಡಗಳು ಭೇಟಿ ಕೊಟ್ಟು, ಜಿಲ್ಲಾ ಮುಖ್ಯಸ್ಥರಿಗೆ ತಿಳಿಸಲು ಸೂಚಿಸಿದ್ದಾರೆ. ತೊಂದರೆಗೆ ಪರಿಹಾರ ಕೊಡಲು ನಾವು ಪ್ರೇರೇಪಣೆ ಕೊಡಬೇಕು ಮತ್ತು ಸಹಕಾರಿ ಆಗಬೇಕೆಂಬ ಉದ್ದೇಶದಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.
ಈ ಕುರಿತ ವರದಿಯನ್ನು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಲ್ಲಿಸುವುದಾಗಿ ಹೇಳಿದ ಅವರು, ಕೆಲವೆಡೆ ಮನೆ ಬಿದ್ದಿದೆ ಎಂಬ ವರದಿಗಳಿವೆ. ಮತ್ತೆ ಕೆಲವೆಡೆ ಬೆಳೆನಾಶ ಸಂಭವಿಸಿದೆ. ಒಂದು ವರ್ಷದ ಹಿಂದೆ ಅನಾವೃಷ್ಟಿ ಇತ್ತು. ಈಗಲೂ ಕೆಲವೆಡೆ ಮುಂದುವರೆದಿದೆ. ಕೆಲವೆಡೆ ಅತಿವೃಷ್ಟಿ ಆಗುತ್ತಿದೆ ಎಂದ ಅವರು, ಕಳೆದ ವರ್ಷ ಬರಗಾಲದ ಪರಿಸ್ಥಿತಿ ಇದ್ದರೂ ಸರಕಾರ ಎಚ್ಚತ್ತುಕೊಳ್ಳಲಿಲ್ಲ. ಇದರಿಂದ ರೈತರಿಗೆ ಅನ್ಯಾಯ ಆಗಿತ್ತು ಎಂದು ಟೀಕಿಸಿದರು.
ನೀವು ಮಾಡಿದ ಹಗರಣಗಳು ನಿಮ್ಮನ್ನು ಸುಮ್ಮನೆ ಬಿಡುತ್ತವೆಯೇ? ಇ.ಡಿ. ಕಾನೂನಾತ್ಮಕವಾಗಿ ಬಂದಿದೆ. ಉದ್ಧಟತನದ ಮಾತಿಗೆ ನಾವು ಜಗ್ಗುವುದಿಲ್ಲ. ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಅವರು ಮುಖ್ಯಮಂತ್ರಿಗಳನ್ನು ಎಚ್ಚರಿಸಿದರು.












Click it and Unblock the Notifications