• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕುರುಬ ಸಮುದಾಯದ ಎಸ್‌ಟಿ ಹೋರಾಟದ ಹಿಂದೆ ಆರ್‌ಎಸ್ಎಸ್ ಕೈವಾಡ?

|

ಬೆಂಗಳೂರು, ಡಿ. 01: ಕುರುಬ ಎಸ್‌ಟಿ ಹೋರಾಟದ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ. ಕುರುಬ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೋರಾಟ ನಡೆಸಿದ್ದಾರೆ. ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಿ ಈ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಜೊತೆಗೆ ತಮ್ಮೊಂದಿಗೆ ಸಮುದಾಯದ ನಾಯಕರನ್ನೂ ಕರೆದುಕೊಂಡು ಹೋಗಿದ್ದ ಈಶ್ವರಪ್ಪ ಅವರು, ಬೆಂಗಳೂರಿನಲ್ಲಿ ಸಮಾವೇಶವನ್ನೂ ಮಾಡಿದ್ದರು. ಕುರುಬ ಸಮದಾಯಕ್ಕೆ ಪರಿಶಿಷ್ಟ ಜಾತಿ ಸ್ಥಾನಮಾನಕ್ಕೆ ನಡೆದ ಹೋರಾಟದಲ್ಲಿ ಭಾಗವಹಿಸದೇ ವಿರೋಧ ಪಕ್ಷದ ನಾಯಕ ಗಮನ ಸೆಳೆದಿದ್ದರು. ಈ ವಿಚಾರವಾಗಿ ಕುರುಬ ಸಮುದಾಯದೊಂದಿಗೆ ಸಿದ್ದರಾಮಯ್ಯ ಅವರು ಗುರುತಿಸಿಕೊಂಡಿರಲಿಲ್ಲ.

ಕುರುಬ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ಹಾಗೂ ಮೀಸಲಾತಿಗಾಗಿ ಅರಮನೆ ಮೈದಾನದಲ್ಲಿ ನಡೆದಿದ್ದ ಕುರುಬ ಸಮುದಾಯದ ಜನಪ್ರತಿನಿಧಿಗಳ ಸಮಾವೇಶಕ್ಕೂ ಸಿದ್ದರಾಮಯ್ಯ ಅವರು ಗೈರು ಹಾಜರಾಗಿದ್ದರು. ಸಮುದಾಯದ ಹೋರಾಟಕ್ಕೆ ಕರೆದರೂ ಬಂದಿಲ್ಲ ಎಂದು ಸಚಿವ ಈಶ್ವರಪ್ಪ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿದ್ದರು. ಆದರೆ ಈಶ್ವರಪ್ಪ ಆರೋಪ ನಿರೋಪ ನಿರಾಕರಿಸಿರುವ ಅವರು, ಕುರುಬ ಎಸ್‌ಟಿ ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದೆ ಎಂಬ ಗಂಭೀರ ಆರೋಪವನ್ನು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಿದ್ದಾರೆ.

ತಮ್ಮ ಹೇಳಿಕೆಗೆ ಸಿದ್ದರಾಮಯ್ಯ ಅವರು ಕೊಟ್ಟಿರುವ ಸಾಕ್ಷಿಗಳೇನು? ಕುರುಬ ಎಸ್‌ಟಿ ಹೋರಾಟದಲ್ಲಿ ಸಚಿವ ಈಶ್ವರಪ್ಪ ಅವರಿಗೆ ಬೆನ್ನೆಲುಬಾಗಿ ನಿಂತಿರುವವರು ಯಾರು? ಆರ್‌ಎಸ್‌ಎಸ್‌ನ ಯಾವ ಪ್ರಮುಖರು ಈಶ್ವರಪ್ಪ ಅವರೊಂದಿಗೆ ಶಾಮೀಲಾಗಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಶಿಫಾರಸು ನೆನೆಗುದಿಗೆ ಬಿದ್ದಿದೆ

ಶಿಫಾರಸು ನೆನೆಗುದಿಗೆ ಬಿದ್ದಿದೆ

ನಾವು ಕರೆದರೂ ಕುರುಬರ ಎಸ್‌ಟಿ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸುತ್ತಿಲ್ಲ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ. ಅವರು ನನ್ನನ್ನು ಕರೆದಿಲ್ಲ. ಬರುತ್ತೇನೆ ಅಥವಾ ಬರುವುದಿಲ್ಲ ಎಂದು ನಾನೂ ಅವರಿಗೆ ಹೇಳಿಲ್ಲ. ಈಶ್ವರಪ್ಪ ಅವರು ಈ ವಿಚಾರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮೋದಿ ಅವರು ಪ್ರಧಾನಿಯಾಗಿ ಆರೂವರೆ ವರ್ಷಗಳಾದವು. ಗೊಂಡ, ರಾಜಗೊಂಡ ಸಮುದಾಯದವರು ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕುರುಬರು ಎಂದು ಕರೆದುಕೊಳ್ಳುವವರೂ ಅದರಲ್ಲಿ ಸೇರಿದ್ದಾರೆ. ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಆ ಬಗ್ಗೆ ಈಶ್ವರಪ್ಪ ಅವರು ಏಕೆ ಆದೇಶ ಮಾಡಿಸಿಲ್ಲ. ಕೋಲಿ, ಗೊಲ್ಲ ಸಮುದಾಯವನ್ನೂ ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಮಾಡಿರುವ ಶಿಫಾರಸು ಸಹ ನನೆಗುದಿಗೆ ಬಿದ್ದಿದೆ ಎಂದು ಆರೋಪಿಸಿದ್ದಾರೆ.

ಹೋರಾಟದ ಹಿಂದೆ RSS ಕೈವಾಡ!

ಹೋರಾಟದ ಹಿಂದೆ RSS ಕೈವಾಡ!

ಕುರುಬರ ಎಸ್‌ಟಿ ಹೋರಾಟದ ಹಿಂದೆ ಆರ್‍ಎಸ್‍ಎಸ್‌ ಕೈವಾಡವಿದೆ. ಅದು ಕುರುಬ ಸಮುದಾಯವನ್ನು ಒಡೆಯುವ ಹುನ್ನಾರ ಎಂದು ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ.

ಎಸ್‌ಟಿ ಹೋರಾಟದ ಹೆಸರಲ್ಲಿ ಕುರುಬ ಸಮುದಾಯವರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಆರ್‍ಎಸ್‍ಎಸ್‌ನ ದತ್ತಾತ್ರೇಯ ಹೊಸಬಾಳೆ ಹಾಗೂ ಬಿ.ಎಲ್. ಸಂತೋಷ್ ಅವರು ಈಶ್ವರಪ್ಪ ಅವರನ್ನು ಬಳಸಿಕೊಂಡು ಕುರುಬ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಈಶ್ವರಪ್ಪ ಅವರನ್ನು ಮುಂದೆ ಬಿಟ್ಟು ಆರ್‍ಎಸ್‍ಎಸ್ ಕುರುಬರ ಎಸ್‍ಟಿ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿದೆ. ಇದು ಸಮುದಾಯವನ್ನು ದಾರಿ ತಪ್ಪಿಸುವ ಮತ್ತು ಗೊಂದಲ ನಿರ್ಮಾಣ ಮಾಡುವ ಪ್ರಯತ್ನ.

RSS ಮೀಸಲಾತಿ ಪರವಾಗಿಲ್ಲ

RSS ಮೀಸಲಾತಿ ಪರವಾಗಿಲ್ಲ

ಹೋರಾಟ ತಪ್ಪು ಎಂದು ಹೇಳುವುದಿಲ್ಲ. ಆರು ವರ್ಷದಿಂದ ಸುಮ್ಮನಿದ್ದು ಈಗ ಹೋರಾಟಕ್ಕೆ ಕೈ ಹಾಕಿರುವುದರ ಉದ್ದೇಶ ಏನು? ಹೋರಾಟದ ಹಿಂದೆ ಆರ್‍ಎಸ್‍ಎಸ್ ಇರುವುದರ ಮರ್ಮವೇನು ? ಆರ್‍ಎಸ್‍ಎಸ್ ನವರು ಎಂದೂ ಮೀಸಲಾತಿ ಪರ ಇಲ್ಲ. ಹಾವನೂರು ಆಯೋಗ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗ ಮತ್ತು ಮಂಡಲ್ ವರದಿಯನ್ನು ಅವರು ಸ್ವಾಗತ ಮಾಡಿದರೇ?

ಎಲ್ಲ ಸಂದರ್ಭದಲ್ಲಿಯೂ ವಿರೋಧ ಮಾಡಿದ್ದಾರೆ. ಬಿಜೆಪಿ ಮತ್ತು ಆರ್‍ಎಸ್ ಎಸ್ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧ. ಹೆಗಡೇವಾರ್, ಗೋಲವಾಲಕರ್ ಅವರು ಆರ್‍ಎಸ್ ಎಸ್ ಸ್ಥಾಪಕರು. ಅವರು ಎಂದಾದರೂ ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ ಪರ ಹೋರಾಟ ಮಾಡಿದ್ದಾರೆಯೇ? ಎಂದು ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಈಶ್ವರಪ್ಪನೇ ನಾಯಕ ಎಂದುಕೊಳ್ಳಲಿ!

ಈಶ್ವರಪ್ಪನೇ ನಾಯಕ ಎಂದುಕೊಳ್ಳಲಿ!

ಕುರುಬರ ನಾಯಕ ನಾನೇ ಎಂದು ಈಶ್ವರಪ್ಪ ಅವರು ಹೇಳಿಕೊಳ್ಳಲಿ. ಅದಕ್ಕೆ ನನ್ನ ತಕರಾರು ಇಲ್ಲ. ಆದರೆ, ನಾಯಕ ಎಂದು ನಾವೇ ಹೇಳಿಕೊಳ್ಳುವುದಲ್ಲ. ಜನ ತೀರ್ಮಾನ ಮಾಡಬೇಕು. ಕುರುಬರನ್ನು ಎಸ್‍ಟಿಗೆ ಸೇರಿಸುವ ಮೊದಲು ಎಸ್‍ಟಿಗೆ ನೀಡುತ್ತಿರುವ ಮೀಸಲು ಪ್ರಮಾಣವನ್ನು ಶೇ. 3ರಿಂದ ಶೇ. 20ಕ್ಕೆ ಹೆಚ್ಚಿಸಬೇಕು. ಅದಕ್ಕೂ ಹೋರಾಟ ಮಾಡಬೇಕಿದೆ.

ವಾಲ್ಮೀಕಿ ಸಮುದಾಯದವರು ಮೀಸಲು ಪ್ರಮಾಣವನ್ನು ಶೇ. 7.5ಕ್ಕೆ ಹೆಚ್ಚಿಸುವಂತೆ ಈಗಾಗಲೇ ಹೋರಾಟ ಮಾಡುತ್ತಿದ್ದಾರೆ. ಮೀಸಲು ಪ್ರಮಾಣ ಶೇ. 3ರಷ್ಟೇ ಇದ್ದರೆ ಕುರುಬ ಸಮುದಾಯವನ್ನು ಎಸ್‍ಟಿಗೆ ಸೇರಿಸಿದರೂ ಪ್ರಯೋಜನವಿಲ್ಲ. ಕುರುಬ ಸಮುದಾಯದ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇದ್ದರೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿ ಆಧಾರಿದ ವರದಿಯನ್ನು ಸರ್ಕಾರ ಅಂಗೀಕಾರ ಮಾಡಲಿ.

ಕಾಗಿನೆಲೆ ಮಠ ಸ್ಥಾಪನೆ ಆದಾಗ ಎಲ್ಲಿದ್ದರು?

ಕಾಗಿನೆಲೆ ಮಠ ಸ್ಥಾಪನೆ ಆದಾಗ ಎಲ್ಲಿದ್ದರು?

ಕುರುಬರ ಬಗ್ಗೆ ಈಶ್ವರಪ್ಪ ಅವರಿಗೆ ಇದ್ದಕ್ಕಿದ್ದಂತೆ ಕಾಳಜಿ ಬಂದಿದೆ. ಕಾಗಿನೆಲೆ ಮಠ ಸ್ಥಾಪನೆ ಸಂದರ್ಭದಲ್ಲಿ ಈಶ್ವರಪ್ಪ ಅವರು ಎಲ್ಲಿದ್ದರು. ಆಗ ಅವರು ಪತ್ತೆಯೇ ಇರಲಿಲ್ಲ. ಈಗ ಸ್ವಾಮೀಜಿಗಳನ್ನು ಕರೆದುಕೊಂಡು ಹೋರಾಟ ನಡೆಸುತ್ತಿದ್ದಾರೆ. ಮಠದ ಉದ್ಘಾಟನಾ ಸಭೆಗೂ ಅವರು ಆಗ ಬಂದಿರಲಿಲ್ಲ. ಉಡುಪಿಯ ಕನಕ ಗೋಪುರ ಕೆಡವಿದಾಗ ಎಲ್ಲಿ ಹೋಗಿದ್ದರು. ಯಾವ ಮೀಸಲಾತಿ ಪರ ಅವರು ಹೋರಾಟ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಜ್ಯಸಭಾ ಸದಸ್ಯರಾಗಿದ್ದ ರಾಮಾ ಜೋಯಿಸ ಅವರು ಹಿಂದುಳಿದ ವರ್ಗದವರ ಮೀಸಲು ವಿರೋಧಿಸಿದಾಗ ಈ ಈಶ್ವರಪ್ಪ ಎಲ್ಲಿದ್ದರು. ಬಿಜೆಪಿಯಲ್ಲಿ ಆಗ ಈಶ್ವರಪ್ಪ ಅವರು ಇದ್ದರಲ್ಲವೇ? ಏಕೆ ವಿರೋಧ ಮಾಡಲಿಲ್ಲ. ಈಗ ಇದ್ದಕ್ಕಿಂದ್ದರೆ ಪ್ರೀತಿ ಬಂದಿದೆ. ಅವರು ಹೋರಾಟ ಮಾಡಲಿ. ಬೇಡ ಎನ್ನುವುದಿಲ್ಲ. ಮೊದಲು ಬೀದರ್, ಕಲಬರಗಿ, ಯಾದಗಿರಿಯ ಗೊಂಡ, ರಾಜಗೊಂಡ ಸಮುದಾಯವನ್ನು ಎಸ್‍ಟಿಗೆ ಸೇರಿಸುವ ಕುರಿತು ಆದೇಶ ಜಾರಿ ಮಾಡಿಸಲಿ. ಎಸ್‌ಟಿ ಹೆಸರಲ್ಲಿ ಮುಗ್ಧ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಬೇಡ ಎಂಬುದು ನನ್ನ ಮನವಿ ಎಂದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಈಗೆಲ್ಲಿದೆ?

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಈಗೆಲ್ಲಿದೆ?

ಈಶ್ವರಪ್ಪ ಅವರು ಎಂದೂ ಮೀಸಲಾತಿ ಪರ ಹೋರಾಟ ಮಾಡಿದವರಲ್ಲ. ಸದನದಲ್ಲಿಯೂ ಧ್ವನಿ ಎತ್ತಿದವರಲ್ಲ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನ್ನು ಈಶ್ವರಪ್ಪ ಅವರು ಎಲ್ಲಿ ಬಿಟ್ಟರು. ಸ್ವಾರ್ಥಕ್ಕಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು.

ಕುರುಬ ಸಮುದಾಯವನ್ನು ಒಡೆಯಲು ಆರ್‍ಎಸ್‍ಎಸ್ ನವರು ಈಶ್ವರಪ್ಪ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ದತ್ತಾತ್ರೇಯ ಹೊಸಬಾಳೆ, ಸಂತೋಷ್ ಅವರು ಇದರ ಹಿಂದೆ ಇದ್ದಾರೆ. ರೇವಣ್ಣ ಸೇರಿದಂತೆ ಯಾರೇ ಆದರೂ ಹೋರಾಟದಲ್ಲಿ ಭಾಗವಹಿಸಲು ನನ್ನ ತಕರಾರು ಇಲ್ಲ. ಆರಂಭದಲ್ಲಿ ಆರ್‍ಎಸ್‍ಎಸ್ ಕೈವಾಡದ ಬಗ್ಗೆ ನನಗೆ ಗೊತ್ತಿರಲಿಲ್ಲ. ಈಗ ಈಶ್ವರಪ್ಪ ಅವರೇ ಹೇಳುತ್ತಿದ್ದಾರೆ. ಈಶ್ವರಪ್ಪ ಅವರು ಸ್ವಂತ ಬುದ್ಧಿಯಿಂದ ಹೋರಾಟ ಶುರು ಮಾಡಿಲ್ಲ. ಆರ್‍ಎಸ್‍ಎಸ್, ಬಿಜೆಪಿಯವರ ಹುನ್ನಾರ ಇದು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕುರುಬ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನದ ವಿಚಾರವಾಗಿ ನಡೆದಿರುವ ಹೋರಾಟವೀಗ ಬೇರೆ ತಿರುವನ್ನು ಪಡೆದುಕೊಂಡಿದೆ.

English summary
Former CM and Opposition Leader Siddaramaiah has made serious allegations that the RSS is behind the Kuruba ST fight. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X