ಕರ್ನಾಟಕದಲ್ಲಿ ಬರೋಬ್ಬರಿ 11 ಐಎಎಸ್ ಅಧಿಕಾರಿಗಳ ಟ್ರಾನ್ಸ್‌ಫರ್!
ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆಡಳಿತ ಯಂತ್ರಕ್ಕೂ ಮೇಜರ್ ಸರ್ಜರಿ ಮಾಡುತ್ತಿದೆ. ಇದೀಗ ದೊಡ್ಡ ಮಟ್ಟದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಸಿದ್ದರಾಮಯ್ಯ ಸರ್ಕಾರ ಕೈಹಾಕಿದೆ. ಕರ್ನಾಟಕ ಸರ್ಕಾರದ ಸೇವೆಯಲ್ಲಿದ್ದ 11 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ. ಹಾಗಾದ್ರೆ ಟ್ರಾನ್ಸ್‌ಫರ್ ಆದ ಅಧಿಕಾರಿಗಳು ಯಾರು? ಆ ಬಗ್ಗೆ ಮಾಹಿತಿ ಇಲ್ಲಿದೆ.
ಹೌದು, ರಾಜ್ಯದಲ್ಲಿ ಒಟ್ಟು 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆದೇಶ ಹೊರಡಿಸಿದೆ. ಅಗತ್ಯ ಇರುವ ಕಡೆ ದೊಡ್ಡ ಬದಲಾವಣೆಗೆ ಹೊಸ ಸರ್ಕಾರ ಮುಂದಾಗಿದೆ. ಈ ಪೈಕಿ ಕಪಿಲ್ ಮೋಹನ್ ಅವರನ್ನು ಪುವಾಸೋದ್ಯಮ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಎಸ್.ಆರ್. ಉಮಾಶಂಕರ್ ಅವರನ್ನು ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಇನ್ನುಳಿದ 9 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಹಿತಿ ಮುಂದೆ ಇದೆ (IAS Officers).

ಸಹಕಾರ ಇಲಾಖೆಗೂ ಮೇಜರ್ ಸರ್ಜರಿ!
ಹಾಗೇ ಎನ್.ಮಂಜುನಾಥ್ ಪ್ರಸಾದ್ ಅವರನ್ನು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ ಅನ್ಬುಕುಮಾರ್ ಅವರನ್ನು ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಕೆ.ಪಿ.ಮೋಹನ್ ರಾಜ್ ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾವಣೆ ಆಗಿದ್ದಾರೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಕಾರ್ಯದರ್ಶಿಯಾಗಿದ್ದ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜಾ ಅವರನ್ನು ಇದೀಗ ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ಕೃಷಿ ಇಲಾಖೆಯಲ್ಲೂ ಮಹತ್ವದ ಬದಲಾವಣೆ
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಆರ್.ಗಿರೀಶ್ ಅವರನ್ನು ಈಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಕರೀಗೌಡ ಅವರನ್ನು ಅಟಲ್ ಜನಸ್ನೇಹಿ ಕೇಂದ್ರ ಇದರ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. ತುಮಕೂರು ಜಿಲ್ಲಾಧಿಕಾರಿಯಾಗಿದ್ದ ಪಾಟೀಲ್ ಯಲಗೌಡ ಶಿವನಗೌಡರನ್ನು ಕೃಷಿ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ ಈ ಮೂಲಕ ಆಡಳಿತ ಯಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮೇಜರ್ ಸರ್ಜರಿ ಮಾಡಿದೆ.
11 IAS officers in Karnataka transferred, official orders issued. pic.twitter.com/8tduyxEFYv
— ANI (@ANI) June 6, 2023
ಅಗತ್ಯ ಇರುವ ಕಡೆ ಹಲವು ಬದಲಾವಣೆ
ಇನ್ನೊಂದ್ಕಡೆ ಜಿ.ಜಗದೀಶ್ ಅವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾಯಿಸಲಾಗಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ ಅವರನ್ನು ಇದೀಗ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ಇರುವ ಕಡೆ ಅಧಿಕಾರಿಗಳ ಬದಲಾವಣೆ ಮಾಡುತ್ತಿದೆ.

ಒಟ್ನಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಹಲವು ಬದಲಾವಣೆಗೆ ಮುಂದಾಗಿರುವ ರಾಜ್ಯ ಸರ್ಕಾರ, ಈ ಹಿಂದಿನ ಸರ್ಕಾರದಲ್ಲಿ ಆಗಿದ್ದ ಬದಲಾವಣೆಗಳನ್ನ ಕೈಬಿಡುತ್ತಿದೆ. ಆ ಮೂಲಕ ಜನರಿಗೆ ಉತ್ತಮ ಆಡಳಿತ ನೀಡಲು ಹಾಗೂ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜಾರಿ ಮಾಡಲು ಒಟ್ಟು 11 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ. ಆದರೆ ಇದು ಸಮಸ್ಯೆಗಳನ್ನ ಅದೆಷ್ಟು ಬೇಗ ಸರಿಪಡಿಸುತ್ತೆ ಅನ್ನೋದನ್ನ ಕಾದು ನೋಡಬೇಕು.
ಹಾಗೇ ಇನ್ನೊಂದು ಕಡೆ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರಿಗೆ ನೀಡಿದ್ದ ಅಧ್ಯಯನ ರಜೆ ರದ್ದುಗೊಳಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ಹೇಮಂತ್ ನಿಂಬಾಳ್ಕರ್ ಅವರನ್ನು ವಾರ್ತಾ ಮತ್ತು ಪ್ರಸಾರ ಇಲಾಖೆಯ ಆಯುಕ್ತರನ್ನಾಗಿ ನೇಮಿಸಿದೆ. ಹೀಗೆ 11 ಐಎಎಸ್ ಅಧಿಕಾರಿಗಳ ವರ್ಗಾವಣೆಯ ಜೊತೆ ಜೊತೆಗೆ ಹೇಮಂತ್ ನಿಂಬಾಳ್ಕರ್ ಅವರನ್ನು ವಾರ್ತಾ ಮತ್ತು ಪ್ರಸಾರ ಇಲಾಖೆ ಆಯುಕ್ತರನ್ನಾಗಿ ನೇಮಿಸಿರುವುದು ವಿಶೇಷ.












Click it and Unblock the Notifications