ಬಿಜೆಪಿ ವಿರುದ್ಧ ಟ್ವಿಟ್ಟರಿನಲ್ಲಿ ತೊಡೆತಟ್ಟಿದ ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 09 : 'ನವ ಕರ್ನಾಟಕ ನಿರ್ಮಾಣ'ದ ಬಗ್ಗೆ ಭಾರತೀಯ ಜನತಾ ಪಕ್ಷದ ದೃಷ್ಟಿಕೋನವೇನು? ಬೇಕಿದ್ದರೆ ಮುಕ್ತ ಚರ್ಚೆಗೆ ಬರಲಿ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ವಿರುದ್ಧ ತೊಡೆತಟ್ಟಿದ್ದಾರೆ.
ಒನ್ಇಂಡಿಯಾ ಕನ್ನಡದಲ್ಲಿ ಪ್ರಕಟವಾಗಿರುವ ಒಂದು ಲೇಖನಕ್ಕೆ ಟ್ವಿಟ್ಟರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಆಡಳಿತ ನಡೆಸುವಲ್ಲಿ, ಉದ್ಯೋಗ ಸೃಷ್ಟಿಸುವಲ್ಲಿ ಭಾರತೀಯ ಜನತಾ ಪಕ್ಷ ಸಂಪೂರ್ಣ ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಮರ್ಥ ಆಡಳಿತ ನೀಡುವಲ್ಲಿ, ಉದ್ಯೋಗ ಸೃಷ್ಟಿಸುವಲ್ಲಿ, ನಮ್ಮ ರೈತರ ಸಾಲದ ಹೊರೆಯನ್ನು ಇಳಿಸುವಲ್ಲಿ, ಕೇಂದ್ರದ ಮಧ್ಯಸ್ಥಿಕೆಯೊಂದಿಗೆ ಮಹದಾಯಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತೀಯ ಜನತಾ ಪಕ್ಷ ಸಂಪೂರ್ಣ ಸೋತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯನವರು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಲು ಕಾರಣವೇನೆಂದರೆ, ಕರ್ನಾಟಕ ಬಿಜೆಪಿಯ ಉಸ್ತುವಾರಿ ವಹಿಸಿರುವ ಆಂಧ್ರದ ಮೂಲದ ಮುರಳೀಧರ ರಾವ್ ಅವರು ಬೆಳಗಾವಿಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡಿ, ಅವರನ್ನು ಹಿಂದೂ ವಿರೋಧಿ ಎಂದು ಕಟಕಿಯಾಡಿದ್ದು.
ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಆಚರಿಸುತ್ತ ಹಿಂದೂ ವಿರೋಧಿಯಾಗಿರುವುದು ಮಾತ್ರವಲ್ಲ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಕಾಳಜಿ ವಹಿಸಿಲ್ಲ, ಸಚಿವರು ಭ್ರಷ್ಟಾಚಾರ ಎಸಗುತ್ತಿದ್ದರೂ ಅವರನ್ನು ಸಂಪುಟದಿಂದ ಕಿತ್ತು ಹಾಕಿಲ್ಲ, ಬದಲಿಗೆ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಮುರಳೀಧರ ರಾವ್ ಟೀಕಿಸಿದ್ದರು.
ಅಲ್ಲದೆ, ದೇಶದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನರಹಂತಕ, ಹಿಟ್ಲರ್ ಮುಂತಾದವರಿಗೆ ಹೋಲಿಸಿರುವ ಮುಖ್ಯಮಂತ್ರಿಗಳಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುರಳೀಧರ ರಾವ್ ಎಚ್ಚರಿಕೆ ನೀಡಿದ್ದರು.
Having comprehensively failed to govern & offer solutions to create jobs, reduce indebtedness of our farmers & resolve the Mahadayi issue through central mediation, @BJP4India resorts to what it does best: empty religious rhetoric! https://t.co/jBCoT62nP0
— Siddaramaiah (@siddaramaiah) December 9, 2017
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರು ಟ್ವಿಟ್ಟರಿನಲ್ಲಿಯೇ ಬಿಜೆಪಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಬೇಕಿದ್ದರೆ ಚರ್ಚೆಗೆ ಬನ್ನಿ ಎಂದು ಸವಾಲು ಎಸೆದಿದ್ದಾರೆ. ಸಿದ್ದರಾಮಯ್ಯನವರ ಮಾತುಗಳಿಗೆ ಪರ ವಿರೋಧ ಕಾಮೆಂಟುಗಳು ಕೂಡ ಟ್ವಿಟ್ಟರಿನಲ್ಲಿ ಬಂದಿವೆ. ಮೊಹಮ್ಮದ್ ಜುಬೇರ್ ಎಂಬುವವರು ಸಿದ್ದರಾಮಯ್ಯನವರ ಮಾತಿಗೆ ಹ್ಯಾಟ್ಸಾಫ್ ಎಂದಿದ್ದಾರೆ.
ಕುಮಾರ್ ಎನ್‌ಕೆವಿ ಎಂಬುವವರು, ನೀವು 5 ವರ್ಷಗಳ ಕಾಲ ಮಲಯಾಳಿಗೆ ಅಧಿಕಾರ ನಡೆಸಲು ಅನುವು ಮಾಡಿಕೊಟ್ಟಿದ್ದೀರಿ. ಈ ಐದು ವರ್ಷಗಳಲ್ಲಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಏನನ್ನು ಮಾಡಿದ್ದೀರಿ. ನೀವು ಚುನಾವಣೆಯಲ್ಲಿ ಗೆದ್ದರೂ ನೀವು ಮತ್ತೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ನಿಮಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications