ಸಿದ್ದರಾಮಯ್ಯ ಸಿಎಂ ಆಗ್ಲಿ: ಕೋಲಾರ,ನಂಜನಗೂಡಿನಲ್ಲಿ 101 ತೆಂಗಿನಕಾಯಿ ಒಡೆದು ಅಭಿಮಾನಿಗಳು ಪ್ರಾರ್ಥನೆ
ಕೋಲಾರ, ಮೇ 17: ಐತಿಹಾಸಿಕ ಗೆಲುವು ಸಾಧಿಸಿರುವ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆ ವಿಚಾರವೇ ಕಗ್ಗಂಟಾಗಿದೆ. ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಾರೀ ಪೈಪೋಟಿ ಏರ್ಪಟ್ಟಿದ್ದು, ಇನ್ನೂ ಎರಡು ದಿನಗಳ ಕಾಲ ದೆಹಲಿಯಲ್ಲಿಯೇ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಚರ್ಚೆ ನಡೆಯಲಿದೆ.
ಇತ್ತ ಕಾಂಗ್ರೆಸ್ ಪಾಳಯದಲ್ಲಿ ಹಲವು ಶಾಸಕರು ಸಿದ್ದರಾಮಯ್ಯ ಸಿಎಂ ಆಗ್ಬೇಕು ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ರೆ, ಡಿ ಕೆ ಶಿವಕುಮಾರ್ ಪರ ಹಲವು ಶಾಸಕರು ಒಲವು ತೋರಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಕುರುಬ ಸಮುದಾಯಗಳು ಒತ್ತಡವನ್ನ ಹಾಕುತ್ತಿವೆ, ಇತ್ತ ಕೋಲಾರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಬುಧವಾರ ನಗರ ದೇವತೆ ಶ್ರೀ ಕೋಲಾರಮ್ಮನ ದೇವಾಲಯದಲ್ಲಿ 108 ತೆಂಗಿನಕಾಯಿ ಹೊಡೆಯುವ ಮುಖಾಂತರ ಹರಕೆ ಸಲ್ಲಿಸಿದ್ದಾರೆ.

ನಂಜನಗೂಡಿನಲ್ಲೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ನಂಜನಗೂಡಿನ ಶ್ರೀಕಂಠೇಶ್ವರನ ಮೊರೆ ಹೋಗಿದ್ದು, ವಿಶೇಷ ಪೂಜೆ ಸಲ್ಲಿಸುವ ಮೂಲಕ 101 ಈಡುಗಾಯಿ ಒಡೆದು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲೆಂದು ಅಭಿಮಾನಿಗಳು ನಂಜುಂಡೇಶ್ವರನ ಬಳಿ ಪ್ರಾರ್ಥನೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಸಿ.ಸೋಮಶೇಖರ್ ಮಾತನಾಡಿ, ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗಲೇಬೇಕು. ಈ ಹಿಂದೆ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದಾಗಲೇ ಇವರು ಸಿಎಂ ಆದರೆ 108 ತೆಂಗಿನಕಾಯಿ ಹೊಡೆಯುತ್ತೇವೆಂದು ಹರಕೆ ಹೊತ್ತುಕೊಂಡಿದ್ದೆವು. ಅದರಂತೆ ಈಗ ಸಿದ್ದರಾಮಯ್ಯ ಸಿಎಂ ಆಗುತ್ತಿರುವುದು ನಮಗೆ ಸಂತೋಷ ತಂದಿದ್ದು ಹರಕೆ ತೀರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇತ್ತ ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ವದಂತಿ ಹೆಚ್ಚಾಗುತ್ತಿದ್ದಾರೆ. ಬೆಂಗಳೂರಿನ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದಲ್ಲಿ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಭಾಶಯಗಳು ಎಂಬ ಬ್ಯಾನರ್ ಹಿಡಿದು ಸಂಭ್ರಮಿಸಿದ್ದಾರೆ.

ಇನ್ನೂ ವರುಣಾದಲ್ಲೂ ಅಭಿಮಾನಿಗಳು ಆತುರದಲ್ಲಿ ಬೈಕ್ ಜಾಥಾ ನಡೆಸಿದ್ದು, ಸಂಭ್ರಮಿಸಿದ್ದಾರೆ. ಇತ್ತ ಸಿದ್ದರಾಮನ ಹುಂಡಿಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯ ಅವರ ಜೊತೆ ಜಾತ್ರೆಯಲ್ಲಿ ವೀರಕುಣಿತ ಮಾಡಿದ್ದ ಸ್ನೇಹಿತ ಕರೀಗೌಡ ಸಿದ್ದರಾಮನ ಹುಂಡಿಯಲ್ಲಿ ವೀರ ಕುಣಿತ ಮಾಡಿ ಸಂಭ್ರಮಿಸಿದರು. ಸಿದ್ದರಾಮಯ್ಯ ಫ್ಲೆಕ್ಸ್ ಗೆ ಹಾಲಿನ ಅಭಿಷೇಕ ಮಾಡಿ ಕಾರ್ಯಕರ್ತರು ಸಂಭ್ರಮಿಸಿದರು.
ಇತ್ತ ಸಿಎಂ ಸ್ಥಾನಕ್ಕಾಗಿ ಜಟಾಪಟಿ ಮುಂದುವರೆದಿದ್ದು, ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಇನ್ನೂ ತಿರ್ಮಾನವಾಗಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸ್ಪಷ್ಟಪಡಿಸಿದ್ದು, ಹೈಕಮಾಂಡ್ ನಿರ್ಧಾರಕ್ಕೂ ಮುನ್ನ ಯಾರಾದ್ರೂ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಿದರೇ ನೋಟಿಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications