ಸಿಎಂ ಗದ್ದುಗೆ ಏರಲಿರುವ ಡಿ.ಕೆ.ಶಿವಕುಮಾರ್‌ಗೆ ಮೂರು ಮಹತ್ವದ ಸಲಹೆ ಕೊಟ್ಟ ಸಿದ್ದರಾಮಯ್ಯ
ಕರ್ನಾಟಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನೂತನ ನಾಯಕರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಸುದೀರ್ಘ ಹಾಗೂ ಭಾವನಾತ್ಮಕವಾದ ಅಭಿನಂದನಾ ಪತ್ರವನ್ನು ಬರೆದಿದ್ದಾರೆ. ತಮ್ಮ ಪತ್ರದಲ್ಲಿ ರಾಜ್ಯದ ಪ್ರಗತಿ, ಪಕ್ಷದ ಸಿದ್ಧಾಂತ ಮತ್ತು ದೇಶದ ಪ್ರಸ್ತುತ ರಾಜಕೀಯ ಸವಾಲುಗಳನ್ನು ಉಲ್ಲೇಖಿಸಿ, ಸದ್ಯದಲ್ಲೇ ನೂತನ ಸಿಎಂ ಆಗಲಿರುವ ಡಿ.ಕೆ.ಶಿವಕುಮಾರ್ ಅವರಿಗೆ ಶುಭ ಹಾರೈಸಿದ್ದಾರೆ.
ಡಿಕೆಶಿ ಗುಣಗಾನ ಮತ್ತು ನಾಯಕತ್ವಕ್ಕೆ ಒಲವು
ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರನ್ನು "ಪ್ರಿಯ ಶಿವಕುಮಾರ್" ಎಂದು ಸಂಬೋಧಿಸುವ ಮೂಲಕ ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಸಹೋದ್ಯೋಗಿಯಾಗಿ ಶಿವಕುಮಾರ್ ಅವರಲ್ಲಿರುವ ಅದಮ್ಯ ಕ್ರಿಯಾಶೀಲತೆ, ಅದ್ಭುತ ಸಂಘಟನಾ ಚಾತುರ್ಯ ಮತ್ತು ಕಾಂಗ್ರೆಸ್ ಪಕ್ಷದ ಮೇಲಿನ ಅಚಲವಾದ ನಿಷ್ಠೆಯನ್ನು ತಾವು ಹತ್ತಿರದಿಂದ ಗಮನಿಸಿರುವುದಾಗಿ ಹೇಳಿದ್ದಾರೆ. ಈ ಎಲ್ಲ ನಾಯಕತ್ವದ ಗುಣಗಳ ಸದುಪಯೋಗ ಮುಂಬರುವ ದಿನಗಳಲ್ಲಿ ರಾಜ್ಯದ ಜನತೆಗೆ ಸಿಗಲಿ ಎಂದು ಅವರು ಹೃತ್ಪೂರ್ವಕವಾಗಿ ಆಶಿಸಿದ್ದಾರೆ.

ತಮ್ಮ ಆಡಳಿತಾವಧಿಯನ್ನು ಸ್ಮರಿಸಿರುವ ಸಿದ್ದರಾಮಯ್ಯ, ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆ ಮಾಡುವ ಭಾಗ್ಯ ತಮಗೆ ಸಿಕ್ಕಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಅವಧಿಯಲ್ಲಿ ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸಿದ್ದೇನೆ ಎಂಬ ತೃಪ್ತಿ ತಮಗಿದೆ ಎಂದಿದ್ದಾರೆ. ಪ್ರಸ್ತುತ ಕರ್ನಾಟಕವು ತಲಾವಾರು ಆದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇವಲ ಆರ್ಥಿಕತೆಯಷ್ಟೇ ಅಲ್ಲದೆ ಸಂಪತ್ತು, ಅಧಿಕಾರ ಮತ್ತು ಅವಕಾಶಗಳ ಸಮಾನ ಹಂಚಿಕೆಯಲ್ಲೂ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಿದೆ. ನಾವು ಜಾರಿಗೆ ತಂದ ಪ್ರತಿಯೊಂದು ಯೋಜನೆಯನ್ನು ದೇಶದ ಇತರೆ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದಿದ್ದಾರೆ.
ಡಿಕೆಶಿ ಹೆಗಲಿಗೇರಿದ ಅಭಿವೃದ್ಧಿಯ ಬಂಡಿ
ತಾವು ಮುನ್ನಡೆಸಿದ್ದ ಅಭಿವೃದ್ಧಿಯ ಬಂಡಿಯನ್ನು ಇನ್ಮುಂದೆ ಯಶಸ್ವಿಯಾಗಿ ಮುನ್ನಡೆಸುವ ಹೊಣೆಗಾರಿಕೆ ಡಿ.ಕೆ.ಶಿವಕುಮಾರ್ ಅವರ ಹೆಗಲ ಮೇಲಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಒಟ್ಟು ಎಂಟು ವರ್ಷಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಕನ್ನಡಿಗರ ಸೇವೆಯನ್ನು ಮಾಡಲು ಒದಗಿ ಬಂದಿದ್ದ ಅವಕಾಶವನ್ನು ಬಳಸಿಕೊಂಡು ಕರ್ನಾಟಕವನ್ನು ಸಮೃದ್ಧ, ಸ್ವಾವಲಂಬಿ ಮತ್ತು ಸ್ವಾಭಿಮಾನಿ ರಾಜ್ಯವನ್ನಾಗಿ ಅಭಿವೃದ್ಧಿ ಪಡಿಸಿದ ಹೆಮ್ಮೆ ನನ್ನದಾಗಿದೆ. ಈ ಅಭಿವೃದ್ಧಿಯ ಬಂಡಿಯನ್ನು ಮುಂದಕ್ಕೆ ಎಳೆದೊಯ್ಯವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ಅದಕ್ಕೆ ಬೇಕಾಗಿರುವ ಬದ್ದತೆ, ಸಾಮರ್ಥ್ಯ ಮತ್ತು ಮುನ್ನೋಟ ನಿಮ್ಮಲ್ಲಿದೆ ಎನ್ನುವ ನಂಬಿಕೆ ನನ್ನದು ಎಂದಿದ್ದಾರೆ.
ಸೈದ್ಧಾಂತಿಕ ಸೋಲು ನಾಶಕ್ಕೆ ದಾರಿ
ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚಿನ ದಿನಗಳಲ್ಲಿ ಆಗಿರುವ ರಾಜಕೀಯ ಹಿನ್ನಡೆಯನ್ನು ಸಿದ್ದರಾಮಯ್ಯ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ಅತ್ಯಂತ ಗಂಭೀರ ರಾಜಕೀಯ ಚಿಂತನೆಯನ್ನು ಹಂಚಿಕೊಂಡಿರುವ ಅವರು, "ನಾವು ಚುನಾವಣೆಯಲ್ಲಿ ಗೆಲ್ಲಬಹುದು ಅಥವಾ ಸೋಲಬಹುದು, ಆದರೆ ಸೈದ್ಧಾಂತಿಕವಾಗಿ ಎಂದಿಗೂ ಸೋಲಬಾರದು. ಒಂದು ರಾಜಕೀಯ ಪಕ್ಷ ಸೈದ್ಧಾಂತಿಕವಾಗಿ ಸೋತರೆ ಆ ಪಕ್ಷ ಚುನಾವಣೆಯನ್ನು ಗೆಲ್ಲಲಾಗದೆ ಸಂಪೂರ್ಣವಾಗಿ ನಾಶವಾಗುತ್ತದೆ" ಎಂದು ಎಚ್ಚರಿಸಿದ್ದಾರೆ. ರಾಜ್ಯದ ಪ್ರಗತಿಯ ಜೊತೆಗೆ, ಮಾತೃಸ್ವರೂಪಿಯಾದ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ಸ್ಥಾಪಿಸುವ ಹೊಣೆ ಇಬ್ಬರ ಮೇಲೂ ಇದೆ ಎಂದಿರುವ ಅವರು, ಇತಿಹಾಸದಲ್ಲಿ ಕಾಂಗ್ರೆಸ್ ದಾಟಿ ಬಂದಿರುವ ಅನೇಕ ಸವಾಲಗಳೇ ನಮಗೆ ಪ್ರೇರಣೆ ಎಂದು ಹೇಳಿದ್ದಾರೆ.
ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ
ದೇಶದ ಪ್ರಸ್ತುತ ಸಾಮಾಜಿಕ ಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಇಂದು ಜಾತಿ-ಧರ್ಮಗಳ ಹೆಸರಿನಲ್ಲಿ ಒಡೆಯಲಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ ಮತ್ತು ಪ್ರಭುತ್ವವನ್ನು ಪ್ರಶ್ನಿಸುವವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸಲು ಹೊರಟಿದ್ದಾರೆ ಎಂದು ಪರೋಕ್ಷವಾಗಿ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ದತೆ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಮೌಲ್ಯಗಳನ್ನೇ ತನ್ನ ಸಿದ್ಧಾಂತವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ತಳಮಟ್ಟದಿಂದಲೇ ಗಟ್ಟಿಗೊಳಿಸಲು ಮುಂದಾಗುವುದೇ ದೇಶವನ್ನು ಉಳಿಸಲು ನಮಗೆ ಇರುವ ಏಕೈಕ ಮತ್ತು ಸರಿಯಾದ ದಾರಿಯಾಗಿದೆ. ದೇಶದ ಏಕತೆ, ಸಮಗ್ರತೆಯನ್ನು ಉಳಿಸಲು ಸಂವಿಧಾನದ ಗೌರವವನ್ನು ಕಾಪಾಡಲು ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಹೋರಾಟದಲ್ಲಿ ಇಡೀ ಶಾಸಕಾಂಗ ಪಕ್ಷ ಮಾತ್ರವಲ್ಲ ರಾಜ್ಯದ ಏಳುಕೋಟಿ ಜನತೆ ನಿಮ್ಮ ಜೊತೆಯಲ್ಲಿರುತ್ತದೆ. ನಿಮಗೆ ಸದಾ ಯಶಸ್ಸು ಸಿಗಲಿ ಎಂದು ಎಂದು ಹಾರೈಸಿದ್ದಾರೆ.













Click it and Unblock the Notifications