ದಿಢೀರ್ ಎಂದು ಔತಣಕೂಟ ಏರ್ಪಡಿಸಿದ ಸಿದ್ದರಾಮಯ್ಯ, ಕಾರಣವೇನು?
ಬೆಂಗಳೂರು, ಆಗಸ್ಟ್ 01: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಚಿವರಿಗೆ ಇಂದು ಔತಣಕೂಟ ಏರ್ಪಡಿಸಿದ್ದಾರೆ. ಉಸ್ತುವಾರಿ ಸಚಿವರ ನೇಮಕವಾದ ಬೆನ್ನಲ್ಲೆ ಈ ಔತಣಕೂಟ ಏರ್ಪಡಿಸಿರುವುದು ಭಾರಿ ಕುತೂಹಲ ಮೂಡಿಸಿದೆ.
ಸಿದ್ದರಾಮಯ್ಯ ಅವರು ಎಐಸಿಸಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆ ಆಗಿದ್ದಕ್ಕೆ ಔತಣಕೂಟ ನೀಡುತ್ತಿದ್ದಾರೆ ಎಂದು ಹೇಳಲಾಗಿದೆಯಾದರೂ. ಕಾಂಗ್ರೆಸ್ ಸಚಿವರು ಭಾಗಿಯಾಗುತ್ತಿರುವ ಈ ಕೂಟದಲ್ಲಿ ನಡೆಯಲಿರುವ ರಾಜಕೀಯ ಚರ್ಚೆ ಮಹತ್ವದ್ದಾಗಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಜೆಡಿಎಸ್ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಿರುವುದು ಈಗಾಗಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನ ಎಬ್ಬಿಸಿದ ಹಾಗಾಗಿ ಇಂದು ನಡೆಯುವ ಔತಣಕೂಟದಲ್ಲಿ ಈ ಬಗ್ಗೆ ಬಿಸಿ-ಬಿಸಿ ಚರ್ಚೆ ನಡೆಯಲಿದೆ.

ಆಡಳಿತದಲ್ಲಿ ಕಾಂಗ್ರೆಸ್ ಮೂಲೆಗುಂಪು
ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಹಲವು ಆಡಳಿತಾತ್ಮಕ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಅನುಭವಿಸುತ್ತಿದ್ದು, ಕಾಂಗ್ರೆಸ್ ಸಚಿವರನ್ನು ಶಾಸಕರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ಬಗ್ಗೆಯೂ ಸಚಿವರು ಸಿದ್ದರಾಮಯ್ಯ ಬಳಿ ಚರ್ಚೆ ಮಾಡಲಿದ್ದಾರೆ.

ಲೋಕಸಭೆ ಚುನಾವಣೆ ಸಿದ್ದರಾಮಯ್ಯ ಹೆಗಲಿಗೆ
ಲೋಕಸಭೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರು ಚುನಾವಣೆ ಹತ್ತಿರವಿದ್ದಾಗ ಸಚಿವರು, ಶಾಸಕರಲ್ಲಿ ಉಂಟಾಗಿರುವ ಅಸಮಾಧಾನವನ್ನು ನಿವಾರಿಸುವ ಪ್ರಯತ್ನಕ್ಕಾಗಿಯೂ ಈ ಔತಣಕೂಟವನ್ನು ಆಯೋಜಿಸಿದ್ದಾರೆ. ಅಲ್ಲದೆ ಈ ಸಭೆಯಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಚರ್ಚೆಯೂ ನಡೆಯಲಿದೆ.

ಸಿದ್ದರಾಮಯ್ಯರನ್ನು ಕರೆಸಿಕೊಂಡಿದ್ದ ರಾಹುಲ್
ಇತ್ತೀಚೆಗೆ ಸಿದ್ದರಾಮಯ್ಯ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದ ರಾಹುಲ್ ಗಾಂಧಿ ಅವರು ಪಕ್ಷದಲ್ಲಿ ಒಗ್ಗಟ್ಟನ್ನು ಕಾಪಾಡುವ ಹಾಗೂ ಲೋಕಸಭೆ ಚುನಾವಣೆಗೆ ಎಲ್ಲ ಶಾಸಕರನ್ನು, ಸಂಸದರನ್ನು ಒಟ್ಟಿಗೆ ಕರೆದೊಯ್ಯುವ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರ ಹೆಗಲಿಗೆ ಹಾಕಿದ್ದಾರೆ ಹಾಗಾಗಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸಚಿವರ ಅಸಮಾಧಾನ ಹೋಗಲಾಡಿಸಲೆಂದು ಈ ಔತಣಕೂಟ ಆಯೋಜಿಸಿದ್ದಾರೆ.

ಕೆಲವು ದಿನದ ಹಿಂದೆ ಕೂಡ ಔತಣಕೂಟ
ಈ ಹಿಂದೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಏರ್ಪಡಿಸಿದ್ದಾಗ, ಅತೃಪ್ತ ಶಾಸಕರು ಅದರಲ್ಲಿ ಭಾಗವಹಿಸಿರಲಿಲ್ಲ. ಈ ಬಾರಿ ಕಾಂಗ್ರೆಸ್ ಸಚಿವರಿಗೆ ಮಾತ್ರವೇ ಔತಣಕೂಟ ಏರ್ಪಡಿಸಲಾಗಿದೆ.












Click it and Unblock the Notifications