Anna Bhagya:ಅಕ್ಕಿ ಇಲ್ಲದಿದ್ದರೆ ಹಣ ಕೊಡಿ ಎನ್ನುವ ಬಿಜೆಪಿ ಸವಾಲು ಸ್ವೀಕರಿಸಿದ ಸಿದ್ದರಾಮಯ್ಯ
ಬೆಂಗಳೂರು, ಜೂನ್ 28: ನಮ್ಮ ಸರ್ಕಾರ ನೀಡಿದ ಅನ್ನಭಾಗ್ಯ ಭರವಸೆಯಂತೆ 10 ಕೆಜಿ ಆಹಾರ ಧಾನ್ಯವನ್ನು ಜುಲೈ1ರಿಂದ ನೀಡಬೇಕಾಗಿದೆ. ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ 5 ಕೆಜಿ ಅಕ್ಕಿಯ ಮೊತ್ತ 170 ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ಕಿ ದಾಸ್ತಾನು ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು. ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.

ಬಡವರಿಗೆ ಅಕ್ಕಿ ಕೊಡುವ ವಿಷಯದಲ್ಲಿ ರಾಜ್ಯದಲ್ಲಿರುವ ಬಿಜೆಪಿಯವರು ಕೇಂದ್ರದೊಂದಿಗೆ ಮಾತನಾಡಿ ಅಕ್ಕಿ ಕೊಡಿಸಬೇಕಿತ್ತು. ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹಾಗೂ ರಾಜ್ಯ ಆಹಾರ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಕ್ಕಿ ಸರಬರಾಜು ಮಾಡಲು ಮನವಿ ಮಾಡಿದ್ದೇವೆ ಎಂದರು.
ಎನ್‌ಸಿಸಿಎಫ್, ನಫೆಡ್, ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಅಕ್ಕಿ ಪೂರೈಸಲು ಸೂಚಿಸಿರುವ ದರ ಹೆಚ್ಚಾಗಿದೆ. ಎನ್‌ಸಿಸಿಎಫ್ ನವರು 32.94 ಪೈಸೆ ಸೂಚಿಸಿದ್ದು, ನಾವು 32.24 ರೂ.ಗಳಿಗೆ ನೀಡಬೇಕೆಂದು ಕೋರಿದ್ದೇವೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಕರೆಯಲಾಗುತ್ತಿದೆ ಎಂದು ತಿಳಿಸಿದರು.
ಜುಲೈ 1 ರಿಂದ ಅಕ್ಕಿ ನೀಡಲಾಗುವುದು ಎಂಬ ಭರವಸೆ ನೀಡಲಾಗಿದೆ. ರಾಜ್ಯಕ್ಕೆ ಪ್ರತಿ ತಿಂಗಳು 2,29,000 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಇಷ್ಟು ಪ್ರಮಾಣದ ಅಕ್ಕಿಯನ್ನು ಯಾವ ರಾಜ್ಯದವರೂ ಪೂರೈಸಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ರಚಿಸಿದ ಆಹಾರ ಭದ್ರತೆ ಕಾಯ್ದೆಯ ಪ್ರಕಾರ ಹಿಂದೆ ನಮ್ಮ ಸರ್ಕಾರ ಜನರಿಗೆ 7 ಕೆಜಿವರೆಗೆ ಅಕ್ಕಿ ಪೂರೈಸಲಾಗುತ್ತಿತ್ತು. ಈಗ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳಲ್ಲಿಯೂ ಅಕ್ಕಿಯ ದರ ಹೆಚ್ಚಾಗಿದೆ ಎಂದು ಸಿಎಂ ಹೇಳಿದರು.
ಬಿಜೆಪಿ ಸವಾಲನ್ನು ಸರಿಗಟ್ಟಿದ ಸಿಎಂ
ರಾಜ್ಯ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅಕ್ಕಿ ಕೊಡುವ ಉದ್ದೇಶದಿಂದ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತರಲು ಶ್ರಮಿಸಿದೆ. ರಾಜ್ಯಕ್ಕೆ ಅಗತ್ಯ ಇರುವ ಅಕ್ಕಿಗಾಗಿ ಕೇಂದ್ರದ ಬಳಿ ಮನವಿ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಿಜೆಪಿ ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ ಅಕ್ಕಿ ಮೊತ್ತದ ಹಣ ಕೊಡಿ ಎನ್ನುವ ಸವಾಲನ್ನು ಕಾಂಗ್ರೆಸ್ ಸರ್ಕಾರದ ಮುಂದೆ ಇಟ್ಟಿತ್ತು. ಈ ಸವಾಲನ್ನು ಸರಿಗಟ್ಟಿದ ಸರ್ಕಾರ ಅಕ್ಕಿ ಬದಲಿಗೆ ಅಕ್ಕಿ ಮೊತ್ತದ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಾಕುವ ನಿರ್ಧಾರ ತೆಗೆದುಕೊಂಡು ಬಿಜೆಪಿಯ ಬತ್ತಳಿಕೆಯನ್ನು ಬರಿದು ಮಾಡಿದೆ.












Click it and Unblock the Notifications