• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಟಿಷರ ಕಾಲದ ಗೌನನ್ನು ಮೇಯರ್ ಕಳಚುವುದು ಯಾವಾಗ?

|

ಬ್ರಿಟಿಷರು ದೇಶ ಬಿಟ್ಟು ಏಳು ದಶಕಗಳ ಮೇಲಾಯಿತು, ಆದರೂ ಅವರು ಬಿಟ್ಟು ಹೋದ ಕೆಲವೊಂದು ಸಂಪ್ರದಾಯಗಳು ಸ್ವತಂತ್ರ ಭಾರತದಲ್ಲಿ ಇನ್ನೂ ಮುಂದುವರಿದಿದೆ. ಇದರ ಜೊತೆಗೆ, ಅಂದಿನ ವೈಸ್ ರಾಯ್ ಮತ್ತು ಅಧಿಕಾರಿಗಳ ಹೆಸರು ಬೆಂಗಳೂರಿನ ರಸ್ತೆಗಳಲ್ಲಿ, ಕಟ್ಟಡಗಳಲ್ಲಿ ಇನ್ನೂ ಅಜರಾಮರವಾಗಿದೆ.

ಉದಾಹರಣೆಗೆ 1905-1910ರಲ್ಲಿ ವೈಸ್ ರಾಯ್ (ಗವರ್ನರ್ ಜನರಲ್ಸ್) ಆಗಿದ್ದ ಎರ್ಲ್ ಮಿಂಟೋ ಹೆಸರು ಮಿಂಟೋ ಆಸ್ಪತ್ರೆಗೆ, ಕರ್ಜನ್ ಎಡ್ಲೆಸ್ಟನ್ (1899-1905) ಹೆಸರಿನಲ್ಲಿ ಲೇಡಿ ಕರ್ಜನ್ ರಸ್ತೆ, ಅರ್ಲ್ ಮೇಯೋ (1869-1872) ಹೆಸರಿನಲ್ಲಿ ಮೇಯೋಹಾಲ್ ಇತ್ಯಾದಿ..

ಕಟ್ಟಡ, ರಸ್ತೆಗಳ ಹೆಸರು ಒಂದೆಡೆಯಾದರೆ, ಬ್ರಿಟಿಷರ ಇನ್ನೊಂದು ಗೌನ್ ಧರಿಸುವ ಪದ್ದತಿ ರಾಜ್ಯದ ಎಲ್ಲಾ ಮಹಾನಗರಪಾಲಿಕೆಯ ಮೇಯರ್ ಗಳು ಪಾಲಿಸುವುದು ಕಡ್ಡಾಯ ಜೊತೆಗೆ ಶಿಷ್ಟಾಚಾರವಾಗಿದೆ ಕೂಡಾ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿಯವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಮತ್ತು ಇವರುಗಳ ಕಾರ್ಯಕ್ರಮ, ಜೊತೆಗೆ ಮುಖ್ಯಮಂತ್ರಿಗಳು ಭಾಗವಹಿಸುವ ಸರಕಾರೀ ಕಾರ್ಯಕ್ರಮಗಳಲ್ಲಿ ಮೇಯರ್ ಗೌನ್ ಧರಿಸುವುದು ಶಿಷ್ಟಾಚಾರವಾಗಿ ಮುಂದುವರಿದುಕೊಂಡು ಬಂದಿದೆ.

ಸ್ವಾತಂತ್ರ್ಯಾನಂತರ ದೇಶ ಹತ್ತು ಹಲವು ಬದಲಾವಣೆಗಳನ್ನು ಕಂಡಿದ್ದರೂ, ಈ ಗೌನ್ ಧರಿಸುವ ಪರಿಪಾಠ ಇನ್ನೂ ಮುಂದುವರಿದುಕೊಂಡು ಬಂದಿರುವುದಕ್ಕೆ ಯಾವುದೇ ಸ್ಪಷ್ಟ ಕಾರಣಗಳು ಕಂಡುಬರುತ್ತಿಲ್ಲ. ಬದಲಿಗೆ, ನಮ್ಮತನವನ್ನು ಬೆಳೆಸಿಕೊಳ್ಳಬೇಕು ಎನ್ನುವ ಇಚ್ಚಾಶಕ್ತಿಯ ಕೊರತೆ ಕಂಡು ಬರುವಂತಿದೆ.

ಮೇಯರ್ ಗೌನಿಗೆ ಬಹುದೊಡ್ದ ಇತಿಹಾಸವೇ ಇದೆ. ಸಿಟಿ ಆಫ್ ಲಂಡನ್ ಕಾರ್ಪೋರೇಶನ್ ಮೇಯರ್ ಈ ವಿಶಿಷ್ಟ ಪೋಷಾಕನ್ನು ಇಸವಿ 1189ರಿಂದ ಧರಿಸಲು ಆರಂಭಿಸಿದ್ದರು. ಬ್ರಿಟಿಷರ ಕಬ್ಜಾದಲ್ಲಿದ್ದ ಭಾರತದಲ್ಲೂ ಈ ಪರಿಪಾಠ ಅಂದು ಆರಂಭವಾಗಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಮೇಯರ್ ಗೌನ್ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿದರೆ ಸಿಗುತ್ತದೆ

ವಿಚಾರಕ್ಕೆ ಬರುವುದಾದರೆ, ಮೇಯರ್ ಗೌನ್ ಪರಿಪಾಠ ಯಾಕೆ ನಮ್ಮ ರಾಜ್ಯದ ಸಿಟಿ ಕಾರ್ಪೋರೇಶನ್ ಮೇಯರ್ ಗಳು ಇನ್ನೂ ಪಾಲಿಸಿಕೊಂಡು ಬರಬೇಕು? ನಮ್ಮ ರಾಜ್ಯದ ಹೆಮ್ಮೆಯ ಮೈಸೂರು ಮಹಾರಾಜರ ಪೋಷಾಕನ್ನು ಯಾಕೆ ಸರಕಾರೀ ಕಾರ್ಯಕ್ರಮಗಳಲ್ಲಿ ಮೇಯರ್ ಧರಿಸಬಾರದು?

ಮಹಾರಾಜರಿಗೂ ಮೇಯರಿಗೂ ಹೋಲಿಸುವುದು ಸರಿಯಾ, ಒಬ್ಬರಿಗೂಬ್ಬರನ್ನು ಅವಮಾನಿಸದಂತಾಗುವುದಲ್ಲವೇ ಎನ್ನುವ ಪ್ರಶ್ನೆ ಖಂಡಿತ ಉದ್ಭವವಾಗದೇ ಇರದು. ಮೊದಲೇ ಸಣ್ಣಸಣ್ಣ ವಿಷಯಗಳು ದೊಡ್ಡದಾಗುತ್ತಿರುವ ಈ ಹೊತ್ತಿನಲ್ಲಿ ಈ ವಿಚಾರ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇಲ್ಲದಿಲ್ಲ.

ಆದರೂ, ನಮ್ಮ ರಾಜ್ಯದ ಮೈಸೂರು ಸಂಸ್ಥಾನದ ಭವ್ಯ ಸಂಸ್ಕೃತಿಯನ್ನು ಜಗತ್ತಿಗೆ ಅನಾವರಣ ಮಾಡಿಕೊಡಲು ಒಂದೊಳ್ಳೆ ಅವಕಾಶ ಸರಕಾರಕ್ಕಿದೆ. ಸರಕಾರ ಒಂದು ಹೆಜ್ಜೆ ಮುಂದಿಟ್ಟರೆ, ಸಾರ್ವಜನಿಕರು ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಲು ಬೆಂಬಲಿಸದೇ ಇರಲಾರರು.

ಇತ್ತೀಚೆಗೆ ದರ್ಶನ್ ಅಭಿನಯದ ಇನ್ನೂ ಸೆಟ್ಟೇರದ ಸಿನಿಮಾವೊಂದಕ್ಕೆ 'ಒಡೆಯರ್' ಎಂದು ನಾಮಕರಣ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಅದಕ್ಕೆ ಮೈಸೂರು ಭಾಗದಲ್ಲಿ ವಿರೋಧ ವ್ಯಕ್ತವಾದಾಗ, ಖುದ್ದು ಮೈಸೂರು ರಾಜಮನೆತನದ ಪ್ರಮೋದಾ ದೇವಿ, ಆ ಹೆಸರು ಇಡುವುದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಹಾಗೆಯೇ, ಸರಕಾರೀ ಕಾರ್ಯಕ್ರಮಗಳಲ್ಲಿ ಮೈಸೂರು ರಾಜರು ಧರಿಸುತ್ತಿದ್ದ ಉಡುಗೆತೊಡುಗೆಗಳನ್ನು ಮೇಯರ್ ಧರಿಸಿದರೆ ಅದಕ್ಕೆ ಅಷ್ಟೇನೂ ಅಪಸ್ವರ ಏಳದು. ಯಾಕೆಂದರೆ, ನಮ್ಮ ಪರಂಪರೆಯನ್ನು ಲೋಕಕ್ಕೆ ತೋರಿಸುವ ಕೆಲಸವಿದು. ಹೇಗೂ, ಈಗ ಯಾವುದೇ ಕಾರ್ಯಕ್ರಮಗಳಲ್ಲಿ ಮೈಸೂರು ಪೇಟ ತೊಡಿಸುವ ಪದ್ದತಿಯಿದ್ದೇ ಇದೆ.

ರಾಜ್ಯದಲ್ಲಿರುವ ಹತ್ತು ಸಿಟಿ ಕಾರ್ಪೋರೇಶನ್ ಗಳಾದ ಬೆಂಗಳೂರು, ಬೆಳಗಾವಿ, ದಾವಣಗೆರೆ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಶಿವಮೊಗ್ಗ, ತುಮಕೂರು, ಮಂಗಳೂರು ಮತ್ತು ವಿಜಯಪುರಗಳ ಮೇಯರ್ ಗಳು ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದ ಬ್ರಿಟಿಷರ ಗೌನ್ ಬಿಟ್ಟು, ನಮ್ಮತನದ ಮೈಸೂರು ಮಹಾರಾಜರ ಪೋಷಾಕುಗಳನ್ನು ಇನ್ನು ಮುಂದೆ ಧರಿಸಲು ಸರಕಾರ ಚಿಂತನೆ ನಡೆಸಲಿ ಎನ್ನುವುದೊಂದು ಆಶಯ.

English summary
Should Karnataka City Corporation Mayor's dump British dress to Mysore era dress? Practice of wearing gaun while receiving President, Vice President, Prime Minister and Chief Minister is a protocol. But, gaun which is being used by Mayor is a British tradition, shouldn't GoK think of change this dress code to Mysuru Maharaja era dress?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X