ಭರ್ತಿಯಾಗದ ಡ್ಯಾಂಗಳು: ಮಳೆಗಾಲದಲ್ಲೇ ಲೋಡ್ ಶೆಡ್ಡಿಂಗ್?
ಬೆಂಗಳೂರು, ಆಗಸ್ಟ್ 13: ಕೆಲವು ವಾರಗಳ ಹಿಂದೆ ಭರ್ಜರಿಯಾಗಿ ಸುರಿದಿದ್ದ ಮಳೆ ನಂತರ ಕಮ್ಮಿಯಾಗುತ್ತಲೇ ಬಂತು. ಜುಲೈ ಮಾಸಾಂತ್ಯ ಮತ್ತು ಆಗಸ್ಟ್ ತಿಂಗಳಿನಲ್ಲಿ ವಾಡಿಕೆಯಂತೆ ಮಳೆಯಾಗದೇ ಇರುವುದರಿಂದ ರಾಜ್ಯದ ಅಣೆಕಟ್ಟುಗಳು ಭರ್ತಿಯಾಗದೇ ಇರುವುದು ವಿದ್ಯುತ್ ಉತ್ಪಾದನೆಗೆ ಸಮಸ್ಯೆಯನ್ನು ತಂದೊಡ್ಡಿದೆ.
ಬೆಂಗಳೂರಿನ ಹಲವು ಭಾಗಗಳಲ್ಲಿ ಅನಿಯಮಿತವಾಗಿ ವಿದ್ಯುತ್ ಕಡಿತಗೊಳ್ಳುತ್ತಲೇ ಇದೆ. ಇನ್ನು, ರಿಪೇರಿ ಹೆಸರಿನಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ಸರಬರಾಜು ನಿಲ್ಲಿಸಲಾಗುತ್ತಿದೆ ಎನ್ನುವ ಆಪಾದನೆಯೂ ಕೇಳಿ ಬರುತ್ತಿದೆ. ರಾಜ್ಯದ ಇತರ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗುತ್ತಿರುವ ಮಾಹಿತಿಗಳಿವೆ.

ರಾಜ್ಯದ ಕೃಷ್ಣರಾಜ ಸಾಗರ ಅಣೆಕಟ್ಟಿನ ಸಾಮರ್ಥ್ಯ 124.8, ಕಬಿನಿ - 65, ಹಾರಂಗಿ - 129, ಹೇಮಾವತಿ - 117 ಅಡಿ. ಆದರೆ, ಆಗಸ್ಟ್ ಹನ್ನೆರಡಕ್ಕೆ ಅನ್ವಯವಾಗುವಂತೆ ಇದುವರೆಗೆ ಕ್ರಮವಾಗಿ 113.28, 63.17, 128.71 ಮತ್ತು 111.15 ಅಡಿಗಳು ಮಾತ್ರ ತುಂಬಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕ್ರಮವಾಗಿ 122.42, 63.51, 125.22 ಮತ್ತು 116.65 ಅಡಿಗಳಿದ್ದವು.
ಇನ್ನು ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 123.08 ಟಿಎಂಸಿ, ಆದರೆ ಇದುವರೆಗೆ ಭರ್ತಿಯಾಗಿದ್ದು 122.66. ಮಲಪ್ರಭಾ 37.73 ಟಿಎಂಸಿ, ಇದುವರೆಗೆ ತುಂಬಿರುವುದು 22.52 ಟಿಎಂಸಿ. ರಾಜ್ಯಕ್ಕೆ ಪ್ರಮುಖ ವಿದ್ಯುತ್ ಮೂಲವಾಗಿರುವ ಲಿಂಗನಮಕ್ಕಿ ಜಲಾಶಯದ ಒಟ್ಟು ಸಾಮರ್ಥ್ಯ 151.75, ಇದುವರೆಗೆ ಭರ್ತಿಯಾಗಿರುವುದು 74.51 ಟಿಎಂಸಿ.
ವಿದ್ಯುತ್ ಉತ್ಪಾದನಾ ಘಟಕಗಳು ಇರುವ ಪ್ರದೇಶದಲ್ಲಿ ಸಮರ್ಪಕವಾಗಿ ಮಳೆಯಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಗ್ರಾಮೀಣ ಭಾಗದಲ್ಲಿ ಈಗಾಗಲೇ ದಿನಕ್ಕೆ ಸುಮಾರು ಎರಡು ಗಂಟೆ ವಿದ್ಯುತ್ ಕಡಿತಗೊಳ್ಳುತ್ತಿದೆ. ಇದರಿಂದಾಗಿ, ಮಳೆಗಾಲದಲ್ಲೇ ಲೋಡ್ ಶೆಡ್ಡಿಂಗ್ ಅನುಭವ ನಿಧಾನವಾಗಿ ರಾಜ್ಯದ ಜನತೆಗೆ ಆಗುತ್ತಿದೆ.
ಉಷ್ಣ ವಿದ್ಯುತ್ ಸ್ಥಾವರಗಳು ಕೆಲಸ ನಿರ್ವಹಿಸುತ್ತಿಲ್ಲ
ಇದೊಂದು ಕಡೆಯಾದರೆ, ಮಳೆಯನ್ನು ಅವಲಂಬಿತವಾಗಿ ಉಷ್ಣ ವಿದ್ಯುತ್ ಸ್ಥಾವರಗಳು ಕೆಲವು ದಿನಗಳಿಂದ ನಿರ್ವಹಣೆಯ ಹೆಸರಿನಲ್ಲಿ ಕೆಲಸ ನಿರ್ವಹಿಸುತ್ತಿಲ್ಲ. ಇನ್ನೊಂದು ಕಡೆ ರಾಜ್ಯದ ವಿದ್ಯುತ್ ಬೇಡಿಕೆ ಹೆಚ್ಚುತ್ತಿರುವುದರಿಂದ ಇದನ್ನು ಬ್ಯಾಲನ್ಸ್ ಮಾಡಲು ವಿದ್ಯುತ್ ಸಂಸ್ಥೆಗಳಿಗೆ ಆಗುತ್ತಿಲ್ಲ. ಪ್ರಮುಖವಾಗಿ ಶರಾವತಿ ಭಾಗದಲ್ಲಿನ ಮಳೆ ಕೊರತೆ ವಿದ್ಯುತ್ ಉತ್ಪಾದನೆಗೆ ಹಿನ್ನಡೆಯಾಗುತ್ತಿದೆ.
ಸಾಮಾನ್ಯವಾಗಿ ಆಗಸ್ಟ್ ಹೊತ್ತಿನಲ್ಲಿ ಲಿಂಗನಮಕ್ಕಿ ಜಲಾಶಯ ಕಮ್ಮಿಯೆಂದರೂ ಶೇ. 80ರಷ್ಟು ತುಂಬ ಬೇಕಿತ್ತು, ಆದರೆ, ಜಲಾಶಯ ಇನ್ನೂ ಅರ್ಧ ಭಾಗ ತುಂಬಲಿಲ್ಲ. ಇಲ್ಲಿಂದ 1,035 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇರುವುದರಲ್ಲಿ ನೆಮ್ಮದಿ ತರುವ ವಿಚಾರ ಏನಂದರೆ ಆಲಮಟ್ಟಿ ಜಲಾಶಯ ಶೇ. ತೊಂಬತ್ತರಷ್ಟು ತುಂಬಿರುವುದು.
ರಾಜ್ಯದ ಥರ್ಮಲ್ ಪ್ಲ್ಯಾಂಟುಗಳಲ್ಲಿ ಕಲ್ಲಿದ್ದಲು ಕೊರತೆ
ರಾಜ್ಯದ ಥರ್ಮಲ್ ಪ್ಲ್ಯಾಂಟುಗಳು ಕಲ್ಲಿದ್ದಲು ಕೊರತೆಯನ್ನು ಎದುರಿಸುತ್ತಿದೆ. ಮೂಲಗಳ ಪ್ರಕಾರ ಮುಂದಿನ ನಾಲ್ಕೈದು ದಿನಕ್ಕೆ ಬೇಕಾಗುವಷ್ಟು ಮಾತ್ರ ದಾಸ್ತನು ಇದೆ. ಇವೆಲ್ಲವೂ ಅನಧಿಕೃತ ಲೋಡ್ ಶೆಡ್ಡಿಂಗಿಗೆ ಪ್ರಮುಖ ಕಾರಣ. ಇನ್ನೊಂದು ಕಡೆ ಗೃಹಜ್ಯೋತಿ ಯೋಜನೆಯನ್ನೂ ಸರ್ಕಾರ ಜಾರಿಗೆ ತಂದಿದೆ. ವಿದ್ಯುತ್ ಕಡಿತಕ್ಕೂ, ಗೃಹಜ್ಯೋತಿ ಯೋಜನೆಗೂ ಒಂದಕ್ಕೊಂದು ಲಿಂಕ್ ಇಲ್ಲ ಎಂದು ರಾಜ್ಯ ಸಚಿವರೊಬ್ಬರು ಸ್ಪಷ್ಟನೆಯನ್ನು ನೀಡಿದ್ದಾರೆ.












Click it and Unblock the Notifications