Shivanand Patil Profile: ವಿಜಯಪುರದ ವರ್ಚಸ್ವೀ ನಾಯಕ ಶಿವಾನಂದ ಪಾಟೀಲ್
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿರುವ ಬಸವನ ಬಾಗೇವಾಡಿಯ ಕಾಂಗ್ರೆಸ್ ಶಾಸಕ ಶಿವಾನಂದ ಎಸ್. ಪಾಟೀಲ್ ಅವರು 2023ರ ಚುನಾವಣೆಯಲ್ಲಿ ಬಹುಮತ ಪಡೆದು ಸತತ ನಾಲ್ಕನೇ ಬಾರಿಗೆ ವಿಜಯ ಸಾಧಿಸಿದ್ದಾರೆ. ಇದೀಗ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಸಂಪುಟದಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಬಹುವರ್ಷಗಳಿಂದಲೂ ಕಾಂಗ್ರೆಸ್‌ನಲ್ಲಿದ್ದು ಕೊಂಡು ವಿಜಯಪುರದ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಶಿವಾನಂದ ಎಸ್ ಪಾಟೀಲ್ ಅವರು ಪ್ರಭಾವಿ ನಾಯಕರು. ಅವರಿಗೆ ಈಗ 59 ವರ್ಷ. ವಿಜಯಪುರದಲ್ಲಿ ಕೃಷಿ ಕುಟಂಬದಲ್ಲಿ ತಂದೆ ಸಿದ್ರಾಮಗೌಟ ಪಾಟೀಲ್ ಅವರ ಮಗನಾಗಿ 1964ರಲ್ಲಿ ಏಪ್ರಿಲ್ 23ರಂದು ಜನಿಸಿದರು. ಅವರ ರಾಜಕೀಯ ಆರಂಭಿಕ ಜೀವನ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ತಿಳಿಯೋಣ.

ಜಿಲ್ಲೆಯಲ್ಲಿಯೇ ಆಡಿ ಬೆಳೆದ ಪಾಟೀರರು, ಯುವಕರಾಗಿದ್ದಾಗ ವಿದ್ಯಾಭ್ಯಾಸ ಮಾಡುವಾಗಲೇ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಬೆಳೆಸಿಕೊಂಡರು. ಅವರು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯ ಡಿಫಾರ್ಮ್ ಪದವೀಧರರು ಹೌದು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆ
ಸಚಿವ ಶಿವಾನಂದ ಪಾಟೀಲರು 1992 ರಲ್ಲಿ ಬಿಜಾಪುರ ಡಿಸಿಸಿ (ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್) ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದರು. ಅಲ್ಲಿಂದ ಸ್ಥಳೀಯ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಾ ಮೂಂಚೂಣಿಗೆ ಬಂದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ತಿಕೋಟಾ ಶಾಸಕರಾಗಿದ್ದ ಬಿ.ಎಂ. ಪಾಟೀಲ ಅವರ ನಿಧನದಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ತೆರವಾಗಿತ್ತು.

ಆಗ ಶಿವಾನಂದ ಪಾಟೀಲ್ ಅವರು ಸ್ಥಳೀಯ ಪಕ್ಷ ಜೆಡಿಎಸ್ ಅಭ್ಯರ್ಥಿಯಾಗಿ ತಿಕೋಟಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದರು. ಆದರೆ ಅಂದಿನ ಚುನಾವಣೆಯಲ್ಲಿ ಬಿ.ಎಂ. ಪಾಟೀಲ ಅವರ ಪುತ್ರ ಎಂ.ಬಿ. ಪಾಟೀಲ ವಿರುದ್ಧ ಸೋಲು ಕಂಡರು. ಮರಳಿ ಯತ್ನವ ಮಾಡು ಎಂಬಂತೆ 1994 ಹಾಗೂ 1999 ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಎಂ.ಬಿ. ಪಾಟೀಲರ ವಿರುದ್ಧ ಸ್ಪರ್ಧಿಸಿ ಗೆದ್ದು ಬೀಗಿದರು.
ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದ ಪಾಟೀಲರು
ವಿಶೇಷವೆಂದರೆ ಸಚಿವ ಶಿವಾನಂದ ಪಾಟೀಲರು 1999 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೆಲಸ ಮಾಡಿದ್ದರು. ತದನಂತರ 2004ರಲ್ಲಿ ಚುನಾವಣೆಗೂ ಮೊದಲು ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಹ್ವಾನ ಮೇರೆಗೆ ಅವರು ಕಾಂಗ್ರೆಸ್ ಸೇರ್ಪಡೆಗೊಂಡರು.
ಅಲ್ಲಿಂದ ಅವರು ಕಾಂಗ್ರೆಸ್ ನಲ್ಲಿಯೇ ಉಳಿದುಕೊಂಡು ಹ್ಯಾಟ್ರಿಕ್ ಬಾರಿಸಿದ್ದಾರೆ. ಕಾಂಗ್ರೆಸ್ ಸೇರಿದ ಬಳಿಕ ಬಸವನ ಬಾಗೇವಾಡಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಪ್ರಸ್ತುತ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಇವರು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾಗಿ ಸೇವೆ ನೀಡಿದ ಅನುಭವ ಹೊಂದಿದವರಾಗಿದ್ದಾರೆ. ಸಚಿವರ ಸಹೋದರ ವಿಜುಗೌಡ ಪಾಟೀಲರು ಸಹ ರಾಜಕೀಯದಲ್ಲಿದ್ದು ಅವರು ಬಿಜೆಪಿ ಪಕ್ಷದಲ್ಲಿದ್ದಾರೆ.
ಸಚಿವ ಶಿವಾನಂದ ಪಾಟೀಲ್ ಅವರು ಪ್ರಸಕ್ತ 2023ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ತಮ್ಮ ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಸದ್ಯ ಅವರು ಎರಡನೇ ಬಾರಿಗೆ ಸಚಿವರಾಗಿದ್ದಾರೆ. ಈ ಹಿಂದೆ ಎಂಬಿ ಪಾಟೀಲ್ ಅವರ ವಿರುದ್ಧ ತೊಡೆ ತಟ್ಟಿದ್ದರು. ಅವರಿಬ್ಬರ ಮಧ್ಯೆ ಮುಸಕಿನ ಗುದ್ದಾಟ ಇದೆ ಎಂಬಂತೆ ಕಾಣುತ್ತದೆ.
ಶಿವಾನಂದ ಪಾಟೀಲರ ಆಸ್ತಿ ವಿವರ
2023 ಚುನಾವಣೆಗೂ ಮುನ್ನ ನಾನು ಬಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಸಚಿವ ಶಿವಾನಂದ ಪಾಟೀಲ್ ಬಹಿರಂಗವಾಗೇ ಹೇಳಿದ್ದರು. ಆ ಕ್ಷೇತ್ರ ಸಚಿವ ಎಂ.ಬಿ.ಪಾಟಿಲ್ ಅವರದ್ದು. ಒಂದು ವೇಳೆ ಎಂಬಿ ಪಾಟಿಲ್ ಅವರು ತಮ್ಮ ಬಸವನ ಬಾಗೇವಾಡಿಯಲ್ಲಿ ಬಂದ ಸ್ಪರ್ಧಿಸಿದರೂ ನಾನು ಹೃದಯದಿಂದ ಸ್ವಾಗತಿಸುತ್ತೇನೆ. ಅವರ ಪರವಾಗಿ ಮತಯಾಚಿಸುತ್ತೇನೆ ಎಂದು ಹೇಳಿ ಕುತೂಹಲ ಮೂಡಿದ್ದರು.
ಆದರೆ ನಾನು ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದು ಹೈಕಮಾಂಡ್ ಬಿಟ್ಟದ್ದು ಎಂದು ತಿಳಿಸಿದ್ದರು. ಕೊನೆಗೆ ಅವರು ತಮ್ಮ ಬಸವನ ಬಾಗೇವಾಡಿಯಿಂದಲೇ ಸ್ಪರ್ಧಿಸಿ 68126 ಮತ ಪಡೆದು ಬಿಜೆಪಿಯ ಎಸ್.ಕೆ.ಬೆಳ್ಳುಳ್ಳಿಯವರನ್ನು ಸೋಲಿಸಿದರು. ಸದ್ಯ ಸಚಿವರ ಒಟ್ಟು ಆಸ್ತಿ ಪ್ರಮಾಣ 31.7 ಕೋಟಿ ರೂಪಾಯಿ ಎನ್ನಲಾಗಿದೆ. ಅವರು 3.7 ಕೋಟಿ ರೂಪಾಯಿ ಸಾಲವನ್ನು ಹೊಂದಿದ್ದಾರೆ.












Click it and Unblock the Notifications