ಕರ್ನಾಟಕದ ಜನರಿಗೆ ಹೊಸ ಟೋಲ್ ಕಿರಿಕಿರಿ: ವಾಹನ ಸವಾರರು ಗರಂ
ಬೆಂಗಳೂರು, ಫೆಬ್ರವರಿ 12: ಶಿವಮೊಗ್ಗ-ತಡಸ ನಡುವೆ ಉತ್ತಮ ಗುಣಮಟ್ಟದ ರಾಜ್ಯ ಹೆದ್ದಾರಿ ನಿರ್ಮಾಣವಾಗಿದೆ ಎಂದು ವಾಹನ ಸವಾರರು ಸಂತಸಗೊಂಡಿದ್ದರು. ಈಗ ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಲು ತಯಾರಿ ನಡೆಯುತ್ತಿದೆ. ಟೋಲ್ ಬೂತ್ ನಿರ್ಮಾಣವಾಗುತ್ತಿದ್ದು, 15 ದಿನಗಳಲ್ಲಿ ಟೋಲ್ ಸಂಗ್ರಹ ಪ್ರಾರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತವಾಗಿದೆ.
ಕರ್ನಾಟಕ ಲೋಕೋಪಯೋಗಿ ಇಲಾಖೆ ಅಂಗ ಸಂಸ್ಥೆ ಕೆಶಿಪ್ ಮೂಲಕ ಶಿವಮೊಗ್ಗ-ತಡಸ (ರಾಜ್ಯ ಹೆದ್ದಾರಿ-57) ನಡುವೆ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಈ ಮಾರ್ಗದಲ್ಲಿ ಹಾನಗಲ್ ಹೊರವಲಯದ ಹುಬ್ಬಳ್ಳಿ-ಗದಗ ಮಾರ್ಗದಲ್ಲಿ ಸಂಚಾರ ನಡೆಸುವಾಗ ಇನ್ನು ಮುಂದೆ ಟೋಲ್ ಕಟ್ಟಬೇಕಿದೆ. ಈ ಹೆದ್ದಾರಿಯಲ್ಲಿ 3 ಟೋಲ್ ಬೂತ್ ಕಾರ್ಯಾರಂಭ ಮಾಡಲಿದೆ.

ಹಾನಗಲ್‌ನಿಂದ ಹುಬ್ಬಳ್ಳಿ ಹಾಗೂ ಗದಗಕ್ಕೆ ಹೋಗುವ ವಾಹನ ಸವಾರರು ಬಂಕಾಪುರ ಕ್ರಾಸ್ ಬಳಿ ಟೋಲ್ ಪಾವತಿಸಬೇಕು. ಇದಕ್ಕಾಗಿ ಕರಗುದರಿ ಎಂಬಲ್ಲಿ ಟೋಲ್ ಬೂತ್ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಯಲ್ಲಿ ಇನ್ನೂ 2 ಟೋಲ್ ಬೂತ್ ನಿರ್ಮಾಣ ಒಂದು ತಿಂಗಳಿನಿಂದ ನಡೆಯುತ್ತಿದ್ದು, ಈಗ ಅಂತಿಮ ಹಂತ ತಲುಪಿದೆ.
ವಾಹನ ಸವಾರರು ಗರಂ: ಶಿವಮೊಗ್ಗ-ತಡಸ ನಡುವಿನ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಮಾಡುವ ವಿಚಾರ ಹಲವರಿಗೆ ತಿಳಿದಿರಲಿಲ್ಲ. ಈಗ 15 ದಿನದಲ್ಲಿ ಟೋಲ್ ಸಂಗ್ರಹ ಪ್ರಾರಂಭಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದು, ವಾಹನ ಸವಾರರು ಗರಂ ಆಗಿದ್ದಾರೆ.
ಬಿಜೆಪಿ ಒಬಿಸಿ ಯುವ ಮೋರ್ಚಾ ಉಪಾಧ್ಯಕ್ಷ ಭೋಜರಾಜ ಕರೂದಿ ಮಾತನಾಡಿ, "ಗುಣಮಟ್ಟದ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. ಆದರೆ ಟೋಲ್ ಸಂಗ್ರಹಕ್ಕೂ ಮುನ್ನ ಪ್ರಕಟಣೆಯ ಮೂಲಕ ಮಾಹಿತಿ ನೀಡಬೇಕು. 2019ರಲ್ಲಿ ಪೂರ್ಣಗೊಂಡ ರಸ್ತೆಯಲ್ಲಿ ಈಗ ಟೋಲ್ ಸಂಗ್ರಹ ಪ್ರಾರಂಭಿಸುತ್ತಿರುವುದು ಏಕೆ?" ಎಂದು ಪ್ರಶ್ನೆ ಮಾಡಿದ್ದಾರೆ.
"ಈ ಟೋಲ್ ಸಂಗ್ರಹಕ್ಕೆ ಯಾವುದೇ ನಿಯಮ ಪಾಲನೆ ಮಾಡಿಲ್ಲ. ಟೋಲ್ ಸಂಗ್ರಹವನ್ನು ನಾವು ವಿರೋಧಿಸುತ್ತೇವೆ. ಅಧಿಕಾರಿಗಳು ಟೋಲ್ ಸಂಗ್ರಹ ಆರಂಭಿಸಿದರೆ ಸಂಘ ಸಂಸ್ಥೆಗಳ ಜೊತೆ ಸೇರಿ ನಾವು ಪ್ರತಿಭಟನೆ ಮಾಡುತ್ತೇವೆ" ಎಂದು ಹೇಳಿದ್ದಾರೆ.
ಮಾಹಿತಿಗಳ ಪ್ರಕಾರ 2019ರಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿ ಮುಗಿದ ತಕ್ಷಣ ಟೋಲ್ ಸಂಗ್ರಹಕ್ಕೆ ಟೆಂಡರ್ ಕರೆಯಲಾಗಿತ್ತು. ಆದರೆ ಸರ್ಕಾರ ಹೇಳಿರುವಷ್ಟು ಟೋಲ್ ಸಂಗ್ರಹವಾಗುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಕಂಪನಿ ಆಸಕ್ತಿ ತೋರಿಸಿ ಟೆಂಡರ್‌ನಲ್ಲಿ ಪಾಲ್ಗೊಳ್ಳಲಿಲ್ಲ.
ಈಗ ದಾವಣಗೆರೆ ಮೂಲದ ಕಂಪನಿಯೊಂದು ಟೆಂಡರ್ ಪಡೆದಿದೆ. ಆದ್ದರಿಂದ ತುರ್ತಾಗಿ ಟೋಲ್ ಬೂತ್ ನಿರ್ಮಾಣ ಮಾಡಿ, ವಾಹನ ಸವಾರರಿಂದ ಟೋಲ್ ಸಂಗ್ರಹ ಮಾಡಲು ತಯಾರಿ ನಡೆದಿದೆ. ವರ್ಷಕ್ಕೆ 3 ಕೋಟಿ ರೂ.ಗೆ ಟೆಂಡರ್ ಪಡೆಯಲಾಗಿದೆ ಎಂಬ ಸುದ್ದಿಗಳು ಹಬ್ಬಿವೆ.
ಶಿವಮೊಗ್ಗ-ತಡಸ ನಡುವಿನ ರಾಜ್ಯ ಹೆದ್ದಾರಿ-57 ಶಿವಮೊಗ್ಗ-ಶಿಕಾರಿಪುರ-ಶಿರಾಳಕೊಪ್ಪ-ತಡಸ ಮೂಲಕ ಸಾಗುತ್ತದೆ. 2019ರಲ್ಲಿ ಕರ್ನಾಟಕ ಲೋಕೋಪಯೋಗಿ ಇಲಾಖೆ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಎರಡು ಕಡೆ ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಮಾಡಲು ಮುಂದಾಗಿತ್ತು. ಆಗ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ, ಇದನ್ನು ತಡೆದಿದ್ದರು.
ಈಗ ಮತ್ತೆ ಟೋಲ್ ಸಂಗ್ರಹದ ಮಾತು ಕೇಳಿಬರುತ್ತಿದೆ. ಸದ್ಯದ ಮಾಹಿತಿಯಂತೆ ಕಾರುಗಳಿಗೆ 30, ಗೂಡ್ಸ್ ವಾಹನಗಳಿಗೆ 50, ಲಾರಿ ಮತ್ತು ಬಸ್‌ಗಳಿಗೆ 100 ರೂ. ಟೋಲ್ ಶುಲ್ಕ ನಿಗದಿ ಮಾಡಲಾಗಿದೆ. 60 ಕಿ. ಮೀ.ಗೆ ಒಂದರಂತೆ ಶಿವಮೊಗ್ಗ-ತಡಸ ನಡುವೆ ವಾಹನ ಸವಾರರು 3 ಕಡೆ ಟೋಲ್ ಶುಲ್ಕ ಕಟ್ಟಬೇಕಿದೆ.












Click it and Unblock the Notifications